ಗೃಹ ಪ್ರವೇಶಕ್ಕೆ ಎಮ್ಮೆ- ಕೋಣ ಕರೆದುಕೊಂಡು ಸಚಿವರು ಬರುತ್ತಾರೆಯೇ.?

 

ದಾವಣಗೆರೆ : ಗೋ ಹತ್ಯೆ ಕಾಯಿದೆ ನಿಷೇಧ ಮಾಡುತ್ತೇವೆ ಎಂದ ಕೂಡಲೇ ಸರಕಾರದ ವಿರುದ್ಧ ಎಚ್ಚೆತ್ತುಕೊಂಡ ಬಿಜೆಪಿ ನಾಯಕರು, ಕಾಂಗ್ರೆಸ್ ವಿರುದ್ಧ ಆಕ್ರೋಶಗೊಂಡಿದ್ದಾರೆ. ಅದರಲ್ಲೂ ಪಶು ಸಂಗೋಪನಾ ಸಚಿವ ವೆಂಕಟೇಶ ಅವರು ಕೋಣ ಮತ್ತು ಎಮ್ಮೆಗಳನ್ನು ಕಡಿಯುತ್ತಾರೆ, ಹಸುಗಳನ್ನು ಕಡಿಯುವುದರಲ್ಲಿ ತಪ್ಪೇನಿದೆ ಎಂದು ಕೇಳಿರುವ ಪ್ರಶ್ನೆಗೆ ದಾವಣಗೆರೆ ಬಿಜೆಪಿ ನಾಯಕರು ಸಖತ್ ಟಾಂಗ್ ನೀಡಿದ್ದಾರೆ.

ಪಶು ಸಂಗೋಪನಾ ಸಚಿವ ವೆಂಕಟೇಶ ಗೃಹಪ್ರವೇಶದ ವೇಳೆ ಅವರು ಕೋಣ ಮತ್ತು ಎಮ್ಮೆಗಳನ್ನು ತಂದು ಒಳಗೆ ಬಿಟ್ಟುಕೊಳ್ಳುತ್ತಾರಾ? ಎಂದು ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ, ರೈತ ಮುಖಂಡ ಲೋಕಿಕೆರೆ ನಾಗರಾಜ್ ಪ್ರಶ್ನೆ ಮಾಡಿದ್ದಾರೆ. ಸಚಿವರು ಅವರ ಮನೆ ಗೃಹ ಪ್ರವೇಶಕ್ಕೆ ಕೋಣ ಮತ್ತು ಎಮ್ಮೆಗಳನ್ನು ಏಕೆ ಕರೆತರುವುದಿಲ್ಲ. ಹಸುವನ್ನೇ ಕರೆತಂದು ಪೂಜಿಸಿ ಮನೆ ಪ್ರವೇಶ ಮಾಡುತ್ತಾರೆ ಎನ್ನುವುದನ್ನು ಅವರು ತಿಳಿದುಕೊಳ್ಳಬೇಕು ಎಂದಿದ್ದಾರೆ.

ಈ ಹಿಂದೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಬಹುಸಂಖ್ಯಾತ ಹಿಂದೂಗಳ ಆಶಯದಂತೆ ಗೋ ಹತ್ಯೆ ನಿಷೇಧ ಮಾಡಿತ್ತು. ಆದರೆ ಇಂದಿನ ಕಾಂಗ್ರೆಸ್ ಸರ್ಕಾರ ಈ ಕಾಯಿದೆಯನ್ನು ವಾಪಾಸು ಪಡೆಯುವುದಾಗಿ ಹೇಳುವ ಮೂಲಕ ಅಲ್ಪಸಂಖ್ಯಾತರನ್ನು ಓಲೈಸಿ ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ. ಒಂದುವೇಳೆ ಗೋ ಹತ್ಯೆ ನಿಷೇಧ ಕಾಯಿದೆ ವಾಪಾಸು ಪಡೆದದ್ದೇ ಆದಲ್ಲಿ ರಾಜ್ಯದ ಬಹು ಸಂಖ್ಯಾತ ಹಿಂದೂಗಳು ತಕ್ಕಪಾಠ ಕಲಿಸಲಿದ್ದಾರೆ ಎಂದರು.

ಗೋ ಹತ್ಯೆ ಎನ್ನುವುದು ಒಂದು ಸಮಾಜಕ್ಕೆ ಸೀಮಿತವಾಗಿಲ್ಲ. ಆದರೆ ಇಂದು ಒಂದು ಸಮಾಜವನ್ನು ಓಲೈಸುವ ಸಲುವಾಗಿ ಈ ರೀತಿಯ ರಾಜಕಾರಣವನ್ನು ಮಾಡಬಾರದು ಎಂದು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ನೂರಾರು ಕೋಟಿ ದೇವತೆಗಳ ನೆಲೆಸಿರುವ ಸ್ಥಳ ಎಂದು ಭಾವಿಸಿ ಗೋವನ್ನು ಹಿಂದೂಗಳು ಪೂಜೆ ಮಾಡುತ್ತಾರೆ.ಅಂಥಹ ಪ್ರಾಣಿಯನ್ನು ಕಡಿದು ನಾವು ಊಟ ಮಾಡುತ್ತೇವೆ ಎನ್ನುವುದು ಸರಿಯಲ್ಲ. ಇದು ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಕೆಲಸ. ದಯಮಾಡಿ ಇಂಥಹ ಕಾನೂನು ತರಬೇಡಿ. ಇದನ್ನು ಅಲ್ಪ ಸಂಖ್ಯಾತ ಬಂಧುಗಳ ಕೂಡ ಅರ್ಥ ಮಾಡಿಕೊಂಡಿದ್ದಾರೆ ಎಂದು ಭಾವಿಸಿದ್ದೇನೆ. ಒಂದು ವೇಳೆ ಸರ್ಕಾರ ಹಠಕ್ಕೆ ಬಿದ್ದು ಗೋ ಹತ್ಯೆ ನಿಷೇಧ ಕಾನೂನು ರದ್ದುಗೊಳಿಸಿದರೆ ರಾಜ್ಯಾದ್ಯಂತ ಬಿಜೆಪಿ ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಒಟ್ಟಿನಲ್ಲಿ ಬೆಣ್ಣೆ ನಗರಿ ಬಿಜೆಪಿ ನಾಯಕರು ಈಗ ಗೋ ಹತ್ಯೆ ನಿಷೇಧ ಕಾನೂನಿನ ವಿರುದ್ಧ ಹೋರಾಟ ಮಾಡಲು ತಂತ್ರಗಾರಿಕೆ ನಡೆಸಿದ್ದು, ಇದು ಎಷ್ಟರಮಟ್ಟಿಗೆ ಸಕ್ಸಸ್ ಆಗುತ್ತದೆ ಎಂದು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

error: Content is protected !!