ದಾವಣಗೆರೆ ವಿಶ್ವವಿದ್ಯಾನಿಲಯದ 11 ನೇ ಘಟಿಕೋತ್ಸವ; ಭವಿಷ್ಯದಲ್ಲಿ ಭಾರತಕ್ಕೆ ವಿಶ್ವಗುರು ಸ್ಥಾನ, ಶ್ರೇಷ್ಟ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ಬಹುಮುಖ್ಯ; ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅಭಿಮತ

ದಾವಣಗೆರೆ; ಭವಿಷ್ಯದಲ್ಲಿ ಭಾರತವು ವಿಶ್ವಗುರು ಸ್ಥಾನ ಅಲಂಕರಿಸಲಿದೆ. ಇದಕ್ಕೆ ಪೂರಕವಾಗಿ ಶ್ರೇಷ್ಠ ಭಾರತ ನಿರ್ಮಾಣಕ್ಕೆ ದೇಶದ ಯುವ ಜನತೆ ಗುಣಮಟ್ಟದ ಶಿಕ್ಷಣ ಪಡೆದು ಅತ್ಯುನ್ನತ ಕೊಡುಗೆ ನೀಡಬೇಕೆಂದು ರಾಜ್ಯಪಾಲರು ಹಾಗೂ ವಿಶ್ವವಿದ್ಯಾನಿಲಯ ಕುಲಾಧಿಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ಅವರು ಕರೆ ನೀಡಿದರು.

ಅವರು ದಾವಣಗೆರೆ ವಿಶ್ವವಿದ್ಯಾಲಯದ 11 ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಸಂಶೋಧನಾ ವಿದ್ಯಾರ್ಥಿಗಳಿಗೆ ಪಿ.ಹೆಚ್.ಡಿ ಪದವಿ, ಸ್ನಾತಕ, ಸ್ನಾತಕೋತ್ತರ ಪದವಿಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಪದಕ ಮತ್ತು ಪದವಿ ಪ್ರಮಾಣ ಪತ್ರ ಪ್ರದಾನ ಮಾಡಿ ಮಾತನಾಡಿದರು. ವಿದ್ಯಾರ್ಥಿಗಳು ನಿರಂತರ ಪರಿಶ್ರಮದಿಂದ ಯಶಸ್ಸು ಸಾಧ್ಯ, ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ ಅನೇಕ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕೇವಲ ಪದವಿ ಪಡೆಯುವುದು ಮಾತ್ರವಲ್ಲದೇ, ಪದವಿಯ ನಂತರ ಉತ್ತಮ ಜೀವನ ರೂಪಿಸಿಕೊಳ್ಳುವ ಮೂಲಕ ದೇಶಕ್ಕೆ ನಿಮ್ಮ ಕೊಡುಗೆ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಶ್ರೇಷ್ಠ ಭಾರತ ನಿರ್ಮಾಣದಲ್ಲಿ ವಿಧ್ಯಾರ್ಥಿಗಳು, ಯುವಕರ ಪಾತ್ರ ಬಹು ಮುಖ್ಯವಾಗಿದೆ. ದೇಶ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದು ವಿಶ್ವದ ಆರ್ಥಿಕತೆಯಲ್ಲಿ ಪ್ರಸ್ತುತ ಐದನೇ ಸ್ಥಾನದಲ್ಲಿದೆ. ಯುವಕರ ಶ್ರಮದಿಂದ ಮುಂದಿನ ದಿನಗಳಲ್ಲಿ ಇದು ಮೂರನೇ ಸ್ಥಾನಕ್ಕೇರುವ ಮೂಲಕ ಬಲಿಷ್ಠ, ಭವಿಷ್ಯದ ಭಾರತ ನಿರ್ಮಾಣವಾಗಲಿದ್ದು ಇದಕ್ಕೆ ಯುವ ಜನರ ಪರಿಶ್ರಮ ಬಹಳ ಮುಖ್ಯವಾಗಿದೆ ಎಂದರು.

ಸ್ವಾತಂತ್ರ್ಯ ಗಳಿಸಿ 75 ವರ್ಷಗಳಾಗಿದ್ದು 2047 ಕ್ಕೆ 100 ವರ್ಷ ಪೂರೈಸಲಿದೆ. ದೇಶದ ಅಭಿವೃದ್ದಿಯಲ್ಲಿ  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ರೂಪಿಸುವ ಮೂಲಕ ಅನುಷ್ಠಾನ ಮಾಡುತ್ತಿವೆ. ಇದರಿಂದ ಭವಿಷ್ಯದಲ್ಲಿ ವಿಕಸಿತ ಭಾರತವಾಗಿ ಹೊರ ಹೊಮ್ಮಲಿದ್ದು ಎಲ್ಲರೂ ಕೈಜೋಡಿಸಬೇಕೆಂದರು.

ಉಷ್ಣತೆ ಹೆಚ್ಚಾಗುತ್ತಿದ್ದು ಇದು ಎಲ್ಲಾ ದೃಷ್ಟಿಯಿಂದಲೂ ಹಾನಿಕಾರಕವಾಗಿದೆ. ಇದಕ್ಕಾಗಿ ನೀರಿನ ಸಂರಕ್ಷಣೆ, ಜಲಮರುಪೂರಣ, ಭೂಮಿ, ಅರಣ್ಯ ರಕ್ಷಣೆಯನ್ನು ನಮ್ಮ ನಮ್ಮ ಮನೆಯಿಂದಲೇ ಮಾಡಬೇಕಾಗಿದೆ ಎಂದರು.
ದಾವಣಗೆರೆ ವಿಶ್ವವಿದ್ಯಾಲಯದಿಂದ ಕಾನೂನು ಮತ್ತು ನ್ಯಾಯ ಕ್ಷೇತ್ರದಲ್ಲಿ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀ ಶಿವರಾಜ್ ವಿ. ಪಾಟೀಲ್,  ವಿಜ್ಞಾನ ಕ್ಷೇತ್ರದಲ್ಲಿ ಪೆÇ್ರಫೆಸರ್ ಕೆ.ಸಿದ್ದಪ್ಪ ಹಾಗೂ ಕಲೆ, ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಶ್ರೀ ಎಚ್.ಬಿ. ಮಂಜುನಾಥ್ ಅವರುಗಳ ಅತ್ಯುತ್ತಮ ಕೆಲಸಕ್ಕಾಗಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ. ಗೌರವ ಸ್ವೀಕರಿಸಿದ ಗಣ್ಯರಿಗೆ ಅಭಿನಂದಿಸುತ್ತ ಅವರ ಸೇವೆ ನಿರಂತರವಾಗಿರಲಿ ಎಂದರು.

ಪದವಿಗಳನ್ನು ಪಡೆದ ಎಲ್ಲಾ ವಿದ್ಯಾರ್ಥಿಗಳು ಮತ್ತು ಚಿನ್ನದ ಪದಕ ಮತ್ತು ಪ್ರಶಸ್ತಿ ವಿಜೇತರಿಗೆ ಅಭಿನಂದನೆಗಳು. ಪದವಿ ಮತ್ತು ಚಿನ್ನದ ಪದಕಗಳನ್ನು ಪಡೆದ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರಿದ್ದಾರೆ ಎಂಬುದು ಸಂತೋಷವಾಗಿದೆ. ಹೆಣ್ಣು ಮಕ್ಕಳ ಆತ್ಮಸ್ಥೈರ್ಯ ಮತ್ತು ಸಾಮಥ್ರ್ಯದ ಬಲದಿಂದ ಮುನ್ನಡೆಯುತ್ತಿರುವುದು ಹರ್ಷ ತಂದಿದೆ ಎಂದು ಶ್ಲಾಘಿಸಿದರು.
ರಾಜ್ಯದ ಉನ್ನತ ಶಿಕ್ಷಣ ಸಚಿವರು ಹಾಗೂ ಸಮಕುಲಾಧಿಪತಿಗಳಾದ ಡಾ; ಎಂ.ಸಿ.ಸುಧಾಕರ್ ಮಾತನಾಡಿ ಜಾಗತಿಕ ಪ್ರಪಂಚದ ಸ್ಪರ್ಧಾತ್ಮಕ ಕಾಲ ಇದಾಗಿದೆ. ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡುವ ಮೂಲಕ ಜೀವನ ಕಟ್ಟಿಕೊಳ್ಳಬೇಕಾಗಿದ್ದು ಆ ಗುಣಮಟ್ಟದಲ್ಲಿ ಶಿಕ್ಷಣ ಪಡೆಯಬೇಕಾಗಿದೆ. ಶಿಕ್ಷಣದ ಜೊತೆಗೆ ಉದ್ಯೋಗ ನೀಡುವ ಕೌಶಲ್ಯತೆ ಹೆಚ್ಚಿಸಬೇಕಾಗಿದೆ.

ನಿರುದ್ಯೋಗ ಸಮಸ್ಯೆಯನ್ನು ನೀಗಿಸಲು ಕೌಶಲ್ಯಾಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ವೃತ್ತಿ ಶಿಕ್ಷಣದ ಜೊತೆಗೆ ಇತರೆ ಪದವಿಗಳನ್ನು ಪಡೆದರೂ ಉದ್ಯೋಗ ದೊರಕುವಂತಾಗಬೇಕು. ಯಾವ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳಿವೆ ಎಂದು ಅರಿತು ಶಿಕ್ಷಣ, ಕೌಶಲ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆ ಇಟ್ಟಿದೆ.

ಪದವಿ ಪ್ರವೇಶಕ್ಕೆ ಏಕ ವೇಳಾಪಟ್ಟಿ; ಎಲ್ಲಾ ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ಚಟುವಟಿಕೆಗಳು ಏಕರೂಪದಲ್ಲಿರಲು ಮತ್ತು ಏಕ ಮಾದರಿಯಲ್ಲಿ ಪ್ರವೇಶ ಪ್ರಕ್ರಿಯೆಯನ್ನು ನಡೆಸಲು ಒಂದೇ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಶೈಕ್ಷಣಿಕ ಚಟುವಟಿಕೆಗಳು ಏಕಕಾಲದಲ್ಲಿ ಮುಕ್ತಾಯವಾಗುವುದರಿಂದ ವಿದ್ಯಾರ್ಥಿಗಳಲ್ಲಿ ಪ್ರವೇಶ ಪಡೆಯಲು ಅನುಕೂಲವಾಗುತ್ತದೆ ಎಂದರು.
ದಾವಣಗೆರೆ ವಿ.ವಿ.ಗೆ ನ್ಯಾಕ್‍ನಿಂದ ಬಿ+ ಶ್ರೇಣಿ ಪಡೆದಿದ್ದು 11 ವರ್ಷಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ತನ್ನದೇ ಆದ ಛಾಪು ಮೂಡಿಸಿದೆ. ಗಣಿತಶಾಸ್ತ್ರ ಮತ್ತು ಸಸ್ಯಶಾಸ್ತ್ರ ವಿಭಾಗದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಇಂತಹ 7 ವಿಶ್ವ ವಿದ್ಯಾನಿಲಯಗಳಿಗೆ ತಲಾ 50 ಲಕ್ಷ ರೂ.ಗಳನ್ನು ಪ್ರಶಸ್ತಿಯಾಗಿ ನೀಡಿದ್ದು ದಾವಣಗೆರೆ ವಿಶ್ವವಿದ್ಯಾನಿಲಯವು ಸೇರಿದೆ ಎಂದರು.

ಇಸ್ರೋ ಮಾಜಿ ಅಧ್ಯಕ್ಷರು ಹಾಗೂ ಪದ್ಮಶ್ರೀ ಎ. ಎಸ್. ಕಿರಣ್ ಕುಮಾರ್ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ತಮ್ಮ ಘಟಿಕೋತ್ಸವ ಭಾಷಣದಲ್ಲಿ ಮಾತನಾಡಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ಪ್ರಸ್ತುತ ಸ್ವಾವಲಂಭಿಯಾಗಿ ಸಿದ್ಧಗೊಳ್ಳುತ್ತಿದೆ. ಇದು 2035 ರ ವೇಳೆಗೆ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವ ಮತ್ತು 2040 ರ ವೇಳೆಗೆ ಚಂದ್ರನ ಮೇಲೆ ಭಾರತೀಯರನ್ನು ಕರೆದೊಯ್ಯುವ ಗುರಿಯನ್ನು ಹೊಂದಿದೆ.

ಬಾಹ್ಯಾಕಾಶ ತಂತ್ರಜ್ಞಾನದ ಸಾಮಥ್ರ್ಯವನ್ನು ಉನ್ನತೀಕರಿಸಲು ಭಾರತವು ತನ್ನ ಸಂಪನ್ಮೂಲಗಳನ್ನು ಅತ್ಯಂತ ನವೀನ ಮತ್ತು ಪರಿಣಾಮಕಾರಿಯಾಗಿ ಬಳಸಿದೆ. ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಅತ್ಯಂತ ಸಮರ್ಥ ಶಕ್ತಿಯಾಗಲು ಗುಣಮಟ್ಟ ಮತ್ತು ಸಾಮಥ್ರ್ಯವನ್ನು ಹೆಚ್ಚಿಸಲು ತನ್ನನ್ನು ತಾನು ಸಿದ್ಧಪಡಿಸುತ್ತಿದೆ ಎಂದು ಹೇಳಿದರು.

ಬಾಹ್ಯಾಕಾಶ ಕ್ಷೇತ್ರದ ಅಭಿವೃದ್ಧಿಯಲ್ಲಿ ಭಾರತ ಎದುರಿಸಿದ ಸಮಸ್ಯೆಗಳು, ಸವಾಲುಗಳು ಹಲವು. ಆದರೆ ಅವೆಲ್ಲವೂ ಸ್ವಾವಲಂಬನೆಯನ್ನು ಸಾಧಿಸಲು ಪ್ರೇರಣೆಯಾದವು. ಬಾಹ್ಯಾಕಾಶ ತಂತ್ರಜ್ಞಾನದ ಬಳಕೆ, ಸಂವಹನ, ಪ್ರಸಾರ, ಹವಾಮಾನ ಮೇಲ್ವಿಚಾರಣೆ, ಸಂಪನ್ಮೂಲಗಳ ಮೇಲ್ವಿಚಾರಣೆ ಮತ್ತು ನಿರ್ವಹಣೆಗಾಗಿ ರಿಮೋಟ್ ಸೆನ್ಸಿಂಗ್, ಆಕಾಶ ವೀಕ್ಷಿಸಲು ಮತ್ತು ನಿರ್ವಹಿಸಲು ಅಗತ್ಯವಿರುವ ಸೂಕ್ತವಾದ ಸಂಪನ್ಮೂಲಗಳನ್ನು ಒದಗಿಸುವಲ್ಲಿನ ತೊಂದರೆಯ ನಡುವೆಯೂ ಸ್ವ ಸಾಮಥ್ರ್ಯದೊಂದಿಗೆ ಅಳವಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಕೈಗೊಳ್ಳಲು ವಿವಿಧ ಕ್ಷೇತ್ರಗಳಲ್ಲಿ ವಿಶಾಲವಾದ ಅವಕಾಶಗಳಿವೆ. ಯುವಜನರು ಜ್ಞಾನ, ಕೌಶಲ, ತಂತ್ರಜ್ಞಾನಗಳನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಹಾಗೂ ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬಹುದು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಬೆಳವಣಿಗೆಗಳು ಮಾಹಿತಿ ಮತ್ತು ಸಾರಿಗೆ, ಸಾಗಣೆಯ ವೇಗವನ್ನು ಬದಲಾಯಿಸುತ್ತಿದೆ ಎಂದರು.

ದಾವಣಗೆರೆ ವಿ.ವಿ.ಕುಲಪತಿಗಳಾದ ಪ್ರೊ.ಬಿ.ಡಿ.ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿ 11 ನೇ ಘಟಿಕೋತ್ಸವದಲ್ಲಿ 64 ಸಂಶೋಧನಾ ವಿದ್ಯಾರ್ಥಿಗಳಿಗೆ ಪಿ.ಹೆಚ್.ಡಿ ಪದವಿ, 12265 ಪದವಿ ವಿದ್ಯಾರ್ಥಿಗಳಿಗೆ ಪದವಿ, 2092 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪದವಿ ನೀಡಲಾಗುತ್ತಿದೆ. 2022-23 ನೇ ಸಾಲಿನಲ್ಲಿ 79 ಚಿನ್ನದ ಪದಕಗಳಿದ್ದು ಸ್ನಾತಕ ಪದವಿಯಲ್ಲಿ 10 ಮಹಿಳೆಯರು ಹಾಗೂ 2 ಪುರುಷರು ಸೇರಿ 12 ವಿದ್ಯಾರ್ಥಿಗಳು 20 ಚಿನ್ನದ ಪದಕ ಗಳಿಸಿದ್ದಾರೆ. ಸ್ನಾತಕೋತ್ತರ ಪದವಿಯಲ್ಲಿ 33 ವಿದ್ಯಾರ್ಥಿಗಳು 59 ಚಿನ್ನದ ಪದಕ ಪಡೆದಿದ್ದಾರೆ. ವಾಣಿಜ್ಯಶಾಸ್ತ್ರದ ಎಂ.ಕಾಂ ವಿದ್ಯಾರ್ಥಿ ದೀಪ್ತಿಗೌಡರ್ 5 ಚಿನ್ನದ ಪದಕ ಪಡೆದಿದ್ದಾರೆ ಎಂದರು.

Leave a Reply

Your email address will not be published. Required fields are marked *

error: Content is protected !!