ಆಗಸ್ಟ್ 15ಕ್ಕೆ ದಾವಣಗೆರೆ ಜನತೆಗೆ 24×7 ನೀರು ಪೂರೈಕೆ; ಅಂದಾಜು 600 ಕೋಟಿ ಅನುದಾನ ಬಿಡುಗಡೆಗೆ ತಾತ್ವಿಕ ಒಪ್ಪಿಗೆ
ದಾವಣಗೆರೆ: ಆಗಸ್ಟ್ 15ರ ಒಳಗೆ ದಾವಣಗೆರೆ ಜನತೆಗೆ ಜಲಸಿರಿ ಯೋಜನೆಯಡಿ 24×7 ನೀರು ಪೂರೈಸಲಾಗುವುದು ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ತಿಳಿಸಿದರು.
ಬೆಂಗಳೂರಿನ ವಿಧಾನಸೌಧದ ನಗರಾಭಿವೃದ್ಧಿ ಸಚಿವರ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಶಾಸಕ ಡಾ|| ಶಾಮನೂರು ಶಿವಶಂಕರಪ್ಪನವರ ಪ್ರಸ್ತಾಪಕ್ಕೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ನಗರಾಭಿವೃದ್ಧಿ ಸಚಿವರು ನೀರು ಪೂರೈಕೆಯ ಭರವಸೆ ನೀಡಿದರು.ಸಭೆಯ ಆರಂಭದಲ್ಲಿ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು ಮಾತನಾಡಿ ಜಲಸಿರಿ ಯೋಜನೆ ಆರಂಭವಾಗಿ 7 ವರ್ಷಗಳು ಕಳೆದರೂ ಇದುವರೆಗೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಕಳೆದ ಬಾರಿ ದಾವಣಗೆರೆಯಲ್ಲಿ ನಡೆದ ಸಭೆಯಲ್ಲಿ ಈ ತಿಂಗಳಲ್ಲಿ ನೀರು ಪೂರೈಸುವ ಭರವಸೆ ನೀಡಿದ್ದರು. ಆದರೆ ಇನ್ನೂ ಕಾಮಗಾರಿ ಪೂರ್ಣಗೊಳ್ಳದಿರುವ ಬಗ್ಗೆ ಆಕ್ಷೇಪ ಎತ್ತಿದ್ದರೂ ಈ ವೇಳೆ ಜಲಸಿರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲಾಯಿತು.
ಕೊನೆಗೆ ಅಧಿಕಾರಿಗಳು ಈ ತಿಂಗಳ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ತಿಳಿಸಿದರು. ಕೊನೆಗೆ ಆಗಸ್ಟ್ 15 ರಂದು ದಾವಣಗೆರೆ ಜನತೆಗೆ 24×7 ನೀರು ಪೂರೈಸಲು ಅಧಿಕಾರಿಗಳಿಗೆ ಸೂಚಿಸಿದರು.
ಅದೇ ರೀತಿ ದಾವಣಗೆರೆ ನಗರದ ಕುಡಿಯುವ ನೀರಿನ ಸಲುವಾಗಿ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಯು ಪ್ರಗತಿಯಲ್ಲಿದ್ದು, ಭೂ ಮಾಲೀಕರಿಗೆ ಬಾಕಿ ರೂ.4 ಕೋಟಿ ಪರಿಹಾರ ಪಾವತಿಸುವ ಕುರಿತು ಮತ್ತು ಕಾಮಗಾರಿಯ ಬೆಲೆ ಏರಿಕೆ ವೆಚ್ಚ ಹಾಗೂ ಬಾಕಿ ಇರುವ ಕಾಮಗಾರಿಯ ಮೊತ್ತ ರೂ.20 ಕೋಟಿ ಸೇರಿ ಒಟ್ಟು ರೂ.24 ಕೋಟಿ ಪಾವತಿಸಲು ಅನುದಾನ ನೀಡುವಂತೆ ಮಲ್ಲಿಕಾರ್ಜುನ್ ಅವರು ಬಿ.ಎಸ್.ಸುರೇಶ್ ಅವರ ಮುಂದೆ ಪ್ರಸ್ತಾಪ ಮಾಡಿದಾಗ ಭೂ ಮಾಲೀಕರಿಗೆ ಬಾಕಿ ರೂ.4 ಕೋಟಿಗಳನ್ನು ಮಹಾನಗರ ಪಾಲಿಕೆಯಿಂದಲೇ ನೀಡುವಂತೆ ಸೂಚಿಸಿ 20 ಕೋಟಿಯನ್ನು ಹಂತ-ಹಂತವಾಗಿ ಬಿಡುಗಡೆ ಮಾಡಲಾಗುವುದು ಎಂದರು.
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಲೋಕಿಕೆರೆ- ಬುದ್ಧ ಬಸವ ಭೀಮ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅನುಮೋದನೆ ನೀಡಿ ಎಸ್.ಎಫ್.ಸಿ. ವಿಶೇಷ ಅನುದಾನದಡಿ ರೂ.261.00 ಲಕ್ಷ ವೆಚ್ಚದಲ್ಲಿ ಕಾಮಗಾರಿ ಮುಕ್ತಾಯವಾಗಿದ್ದು, ಅನುದಾನವನ್ನು ಬಜೆಟ್ ನಂತರ ಬಿಡುಗಡೆ ಮಾಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬಿ.ಎಸ್.ಸುರೇಶ್ ತಿಳಿಸಿದರು. ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಸಜ್ಜಿತವಾದ ಕಸಾಯಿ ಖಾನೆಯನ್ನು 50-50 ಮಾದರಿಯಲ್ಲಿ ನಿರ್ಮಿಸಲು, ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ 3 ವಲಯ ಕಛೇರಿಗಳಲ್ಲಿ ಕಂಪ್ಯೂಟರೀಕೃತ ಇ-ಖಾತಾ ನೀಡಲು ಸಹಾಯವಾಗುವಂತೆ ಗಣಕೀಕರಣಗೊಳಿಸಲು ಹಾಗೂ ಮಹಾನಗರ ಪಾಲಿಕೆ ಕಟ್ಟಡದಲ್ಲಿ ಸುಸಜ್ಜಿತ ದಾಖಲೆ ಕೊಠಡಿ ನಿರ್ಮಾಣ ಹಾಗೂ ಕಂಪ್ಯೂಟರೀಕೃತ ದಾಖಲೆಗಳನ್ನು ವಿತರಿಸಲು ವ್ಯವಸ್ಥೆ ಕಲ್ಪಿಸಲು ಅನುದಾನ ಬಿಡುಗಡೆಗೂ ಸಚಿವರು ಒಪ್ಪಿಗೆ ಸೂಚಿಸಿದರು.
ದಾವಣಗೆರೆ ನಗರದ ಎಲ್ಲಾ ವಾರ್ಡ್‍ಗಳಲ್ಲಿ ಹಾಲಿ ಬೀದಿ ದೀಪಗಳನ್ನು ತೆರವುಗೊಳಿಸಿ, ಹೊಸದಾಗಿ ಎಲ್‍ಇಡಿ, ಬೀದಿ ದೀಪಗಳನ್ನು ಪಿಪಿಪಿ ಮಾದರಿಯಲ್ಲಿ ಕೈಗೊಂಡಿದ್ದು, ಹೆಚ್ಚುವರಿಯಾಗಿ 15000 ದೀಪಗಳನ್ನು ಅಳವಡಿಸಲು ಹೆಚ್ಚುವರಿಯಾಗಿ ರೂ.8 ಕೋಟಿ ಅನುದಾನ ಬಿಡುಗಡೆಗೂ ಒಪ್ಪಿಗೆ ಸೂಚಿಸಿದ್ದು ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಸಜ್ಜಿತವಾದ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ರೂ.300 ಕೋಟಿ ಅನುದಾನವನ್ನು ಮತ್ತು ದಾವಣಗೆರೆ ನಗರದ ರಸ್ತೆ ಹಾಗೂ ಚರಂಡಿಗಳ ಅಭಿವೃದ್ಧಿಗಾಗಿ ಎಸ್.ಎಫ್.ಸಿ. ಯೋಜನೆಯಡಿ ರೂ.100 ಕೋಟಿಗಳ ವಿಶೇಷ ಅನುದಾನ ಹಾಗೂ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಾಲಿ ಇರುವ ರಾಜಕಾಲುವೆಗಳನ್ನು ಅಭಿವೃದ್ಧಿಪಡಿಸುವ ಕಾಮಗಾರಿಗೆ ರೂ.100.00 ಕೋಟಿ ಬಜೆಟ್ ನಂತರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಸಚಿವರು ತಿಳಿಸಿದರು.
ದಾವಣಗೆರೆ ಮಹಾನಗರ ವ್ಯಾಪ್ತಿಯಲ್ಲಿ ಅವೈಜ್ಞಾನಿಕವಾಗಿ ಕಾಮಗಾರಿ, ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಯೋಜನೆಗಳ ವಿನ್ಯಾಸವನ್ನು ಬದಲಾಯಿಸಲು ಸಹ ಸಭೆಯಲ್ಲಿ ಚರ್ಚೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ, ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಸ್ಮಾರ್ಟ್‍ಸಿಟಿ ಯೋಜನೆ ಅಧಿಕಾರಿಗಳು, ಅಣಬೇರು ರಾಜಣ್ಣ, ದಿನೇಶ್ ಕೆ.ಶೆಟ್ಟಿ, ಇಂಧೂದರ್ ಮತ್ತಿತರರಿದ್ದರು.