ಮನೆಮಂದಿಯಲ್ಲ ಮೆಚ್ಚಿಕೊಂಡ ‘ಹೊಂದಿಸಿ ಬರೆಯಿರಿ’ ಯಶಸ್ವಿ ‌ಮೂರನೇ ವಾರದತ್ತ ಭಾವನಾತ್ಮಕ ಪಯಣ…

ಮನೆಮಂದಿಯಲ್ಲ ಮೆಚ್ಚಿಕೊಂಡ 'ಹೊಂದಿಸಿ ಬರೆಯಿರಿ' ಯಶಸ್ವಿ

 ಸಿನಿಮಾ :ಅತಿಯಾದ ನಿರೀಕ್ಷೆಗಳಿಲ್ಲದೇ ಬದುಕನ್ನು ಬಂದಂತೆ ಸ್ವೀಕರಿಸಿ ಹೊಂದಿಕೊಂಡು ಹೋಗಬೇಕು ಎಂಬ ಸಿಂಪಲ್ ಎಳೆಯ ಮೂಲಕ ಪ್ರೇಕ್ಷಕರ ಮನಸೂರೆ ಮಾಡಿರುವ ಚಿತ್ರ ‘ಹೊಂದಿಸಿ ಬರೆಯಿರಿ’. ಭಾವನೆಗಳ ಪಯಣದ ಜೊತೆ ಸಾಗುವ ಈ ಸಿನಿಮಾ ಐವರು ಸ್ನೇಹಿತರ ಕಥೆಯನ್ನೊಳಗೊಂಡಿದೆ. ರಾಮೇನಹಳ್ಳಿ ಜಗನ್ನಾಥ್ ಚೊಚ್ಚಲ ನಿರ್ದೇಶನಲ್ಲಿ ಮೂಡಿ ಬಂದ ಈ ಚಿತ್ರ ಫೆಬ್ರವರಿ 10ರಂದು ಬೆಳ್ಳಿತೆರೆಗೆ ಹೆಜ್ಜೆ ಇಟ್ಟಿತ್ತು. ವಾಸ್ತವತೆಯ ಜೊತೆಗೆ ಬದುಕಿನ ಪಾಠ ಹೇಳುವ ಸಿನಿಮಾ ಪ್ರೇಕ್ಷಕರ ಮನಸಸ್ಸಿಗೂ ಹಿಡಿಸಿದ್ದು ಉತ್ತಮ ವಿಮರ್ಶೆ ಪಡೆದುಕೊಂಡಿತ್ತು. ದಿನದಿಂದ ದಿನಕ್ಕೆ ಸಿನಿಮಾಗೆ ಪ್ರೇಕ್ಷಕರ ಅಪಾರ ಪ್ರೀತಿ ದೊರಕುತ್ತಿದ್ದು ಮೂರನೇ ವಾರದತ್ತ ಯಶಸ್ವಿಯಾಗಿ ‘ಹೊಂದಿಸಿ ಬರೆಯರಿ’ ಕಾಲಿಡುತ್ತಿದೆ.
ಚಿತ್ರದಲ್ಲಿ ಕಲರ್ ಫುಲ್ ಕಾಲೇಜ್ ಲೈಫು, ಅಲ್ಲಿನ ತರಲೆ ತುಂಟಾಟ, ಗೆಳೆತನ, ಪ್ರೀತಿ, ಕೆಲಸ, ಸಂಗಾತಿಯ ಆಯ್ಕೆ ಹೀಗೆ ಬದುಕಿನ ಎಲ್ಲಾ ಹಂತಗಳನ್ನು ಹದವಾಗಿ ಪೋಣಿಸಿ ಚೆಂದವಾದ ಚಿತ್ರಣವನ್ನು ತೆರೆ ಮೇಲೆ ಕಟ್ಟಿಕೊಡಲಾಗಿದೆ. ಭಾವನೆಗಳ ಜರ್ನಿ ಜೊತೆಗೆ ಸಾಗುವ ಈ ಚಿತ್ರ ಒಂದೊಳ್ಳೆ ಅನುಭವವನ್ನು ನೀಡುತ್ತದೆ. ಬದುಕಿನ ವಾಸ್ತವತೆಯನ್ನು ಅರ್ಥ ಮಾಡಿಸುತ್ತಾ ಆ ಬದುಕಿಗೆ ಹೊಂದಿಕೊಂಡು ಬಂದಂತೆ ಸ್ವೀಕರಿಸಿ ಎನ್ನುವ ಸಂದೇಶವನ್ನು ಅರ್ಥಪೂರ್ಣವಾಗಿ ಹೇಳಲಾಗಿದೆ.
ಆರಂಭದಿಂದಲೂ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುತ್ತಲೇ ಬರುತ್ತಿದೆ. ಸಿನಿಮಾ ನೋಡಿದವರು ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ಬಗ್ಗೆ ಮೆಚ್ಚಿ ಬರೆದುಕೊಳ್ಳುತ್ತಿದ್ದಾರೆ. ದಿನದಿಂದ ದಿನಕ್ಕೆ ಹೊಂದಿಸಿ ಬರೆಯಿರಿ ಸಿನಿಮಾ ಪ್ರದರ್ಶನ ಹೌಸ್ ಫುಲ್ ಆಗುತ್ತಿದೆ. ಸಿನಿಮಾ ಬಗ್ಗೆ ಪ್ರೇಕ್ಷಕರು ತೋರಿಸುತ್ತಿರುವ ಪ್ರೀತಿ ಚಿತ್ರತಂಡಕ್ಕೂ ಸಂತಸ ತಂದಿದ್ದು, ಇದೀಗ ಯಶಸ್ವಿ ಮೂರನೇ ವಾರದತ್ತ ಸಿನಿಮಾ ಹೆಜ್ಜೆ ಇಡುತ್ತಿದೆ.
ಯುವ ಹಾಗೂ ಪ್ರತಿಭಾವಂತ ಕಲಾವಿದರು ರಾಮೇನಹಳ್ಳಿ ಜಗನ್ನಾಥ್ ಕನಸಿನ ಸಿನಿಮಾಗೆ ಜೊತೆಯಾಗಿದ್ದು, ಬಹು ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಪ್ರವೀಣ್ ತೇಜ್, ನವೀನ್ ಶಂಕರ್, ಶ್ರೀ ಮಹಾದೇವ್, ಅರ್ಚನಾ ಜೋಯಿಸ್, ಅನಿರುದ್ಧ್ ಆಚಾರ್ಯ, ಭಾವನಾ ರಾವ್, ಐಶಾನಿ ಶೆಟ್ಟಿ , ಸಂಯುಕ್ತ ಹೊರನಾಡು, ಅರ್ಚನಾ ಕೊಟ್ಟಿಗೆ ತಮ್ಮ ಅಚ್ಚುಕಟ್ಟು ನಟನೆಯ ಮೂಲಕ ಕಾಡುತ್ತಾರೆ.
ಸಂಡೇ ಸಿನಿಮಾಸ್ ಬ್ಯಾನರ್ ನಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಸ್ನೇಹಿತರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಜೋ ಕೋಸ್ಟ ಸಂಗೀತ ನಿರ್ದೇಶನ, ಶಾಂತಿ ಸಾಗರ್ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ದಿನೇ ದಿನೇ ಸಿನಿಮಾ ಪ್ರೇಕ್ಷಕನ ಚಿತ್ರಮಂದಿರಗಳ ಬೇಡಿಕೆಯಿಂದ ಈ ವಾರದಿಂದ ಮತ್ತೆ ಚಿತ್ರಮಂದಿರಗಳು ಸೇರ್ಪಡೆಯಾಗುತ್ತಿವೆ.

Leave a Reply

Your email address will not be published. Required fields are marked *

error: Content is protected !!