ಫಲಿತಾಂಶದ ಬಗ್ಗೆ ಅವಲೋಕನ; “ಗೆಲುವಿಗೆ ನಾಂದಿಯಾದೀತೆ ಜೆಡಿಎಸ್ ನ ಸೋಲು”?
ಬೆಂಗಳೂರು: ಈ ಸೋಲು ಶಾಶ್ವತ ಅಲ್ಲ, ತಾತ್ಕಾಲಿಕ. ಧೃತಿಗೆಡದೆ ಪಕ್ಷವನ್ನು ಮರಳಿ ಕಟ್ಟೋಣ. ನಿಮ್ಮ ಜತೆ ನಾವಿದ್ದೇವೆ, ನಿಮ್ಮ ಜತೆ ಹಗಲಿರುಳು ಶ್ರಮಿಸುತ್ತೇವೆ ಎಂದು ಜೆಡಿಎಸ್ ಪಕ್ಷದ ವರಿಷ್ಠ ನಾಯಕರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಧೈರ್ಯ ತುಂಬಿದ್ದಾರೆ.
ವಿಧಾನಸಭೆ ಫಲಿತಾಂಶದ ನಂತರ ಪಕ್ಷದ ಸಂಘಟನೆಯ ಕಡೆ ಗಮನ ನೀಡಿರುವ ಇಬ್ಬರೂ ನಾಯಕರು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ ಜಿಲ್ಲೆಗಳ ಮುಖಂಡರ ಜತೆ ಆತ್ಮಾವಲೋಕನ ಸಭೆಗಳನ್ನು ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಮುಂದೆ ಲೋಕಸಭೆ ಚುನಾವಣೆ ಬರುತ್ತಿದೆ. ಜತೆಗೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯು ಬರುತ್ತದೆ. ಬೆಂಗಳೂರಿನಲ್ಲಿ ಬಿಬಿಎಂಪಿ ಚುನಾವಣೆಯೂ ನಡೆಯಲಿದೆ. ನಮ್ಮ ಗುರಿ ಈ ಚುನಾವಣೆಗಳೇ ಆಗಿರಬೇಕು. ಇದಕ್ಕೆ ಪೂರಕವಾಗಿ ಪಕ್ಷ ಸಂಘಟನೆ ಮಾಡಬೇಕು ಹಾಗೂ ಜನರ ಜತೆ ಇದ್ದು ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ತಾಲೂಕು, ಜಿಲ್ಲಾ ಸಮಿತಿಗಳು ಬದ್ಧತೆಯಿಂದ ದುಡಿಮೆ ಮಾಡಬೇಕು ಎಂದರು.
ನಮ್ಮ ಪಕ್ಷಕ್ಕೆ ಎಲ್ಲಿ ನೆಲೆ ಇದೆ ಎನ್ನುವುದು ನಮಗೆ ಗೊತ್ತಿದೆ. ಆ ನೆಲೆಯನ್ನು ಭದ್ರ ಮಾಡಿಕೊಂಡು ಅದನ್ನು ವಿಸ್ತರಿಸಬೇಕು. ಅದಕ್ಕೆ ನಾವು ತುರ್ತಾಗಿ ಮಾಡಬೇಕಿರುವ ಕೆಲಸ ಎಂದರೆ ಹಿರಿಯರ ಜತೆಗೆ ಯುವಕರಿಗೂ ಜವಾಬ್ದಾರಿ ನೀಡಬೇಕು. ಪ್ರಮುಖ ಜವಾಬ್ದಾರಿಗಳನ್ನು ಯುವಕರಿಗೆ ನೀಡಬೇಕು ಎಂದರು.
ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಹಿನ್ನೆಡೆ ಆಗಿದೆ ನಿಜ, ಆದರೆ; ಈ ಸೋಲು ಮುಂದೆ ದೊಡ್ಡ ಗೆಲುವಿಗೆ ನಾಂದಿ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಇಂಥ ಎಷ್ಟೋ ಸೋಲುಗಳನ್ನು ಪಕ್ಷ ಜೀರ್ಣಿಸಿಕೊಂಡಿದೆ. 1989ರಲ್ಲಿ ದೇವೇಗೌಡರು ಎರಡು ಕಡೆ ಸೋತರು. ಅದಾದ ಐದು ವರ್ಷದಲ್ಲಿ ಪಕ್ಷ ಪೂರ್ಣ ಪಡೆದು ಅವರು ಮುಖ್ಯಮಂತ್ರಿ ಆದರು. ಆಮೇಲೆ ಲೋಕಸಭೆ ಚುನಾವಣೆಯಲ್ಲಿ 16 ಕ್ಷೇತ್ರ ಗೆದ್ದು ದೇವೇಗೌಡರು ದೇಶದ ಪ್ರಧಾನಿಯೂ ಆದರು. 1999ರಲ್ಲಿ ನಮ್ಮ ಪಕ್ಷಕ್ಕೆ ಹತ್ತೇ ಕ್ಷೇತ್ರಗಳು ಬಂದವು. ನಂತರದ ಚುನಾವಣೆಯಲ್ಲಿ 58 ಶಾಸಕರನ್ನು ಗೆದ್ದಿತ್ತು. 2013ರಲ್ಲಿ 40 ಕ್ಷೇತ್ರಗಳಲ್ಲಿ ಪಕ್ಷ ಗೆದ್ದಿತ್ತು. ಇದೆಲ್ಲವನ್ನೂ ನಾವು ಅರ್ಥ ಮಾಡಿಕೊಳ್ಳಬೇಕು ಎಂದವರು ಪ್ರತಿಪಾದಿಸಿದರು.