ಬಜರಂಗದಳ ಕಾರ್ಯಕರ್ತ ಹರ್ಷ ಯಾನೆ ಕೊಲೆ ಪ್ರಕರಣ ! ಆರೋಪಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್ !
ಬೆಂಗಳೂರು : ಶಿವಮೊಗ್ಗದ ಸೀಗೆಹಟ್ಟಿಯ ಭಜರಂಗದಳ ಕಾರ್ಯಕರ್ತ ಹರ್ಷ ಯಾನೆ ಹತ್ಯೆ ಪ್ರಕರಣದ ಆರೋಪಿ ಫರಾಜ್ ಪಾಷಾ (26) ಸಲ್ಲಿಸಿದ್ದ ಜಾಮೀನು ಅರ್ಜಿಯ ಮೇಲ್ಮನವಿಯು ಸಹ ಹೈಕೋರ್ಟ್ ನಲ್ಲಿ ವಜಾಗೊಂಡಿದೆ. ಎನ್.ಐ.ಎ ವಿಶೇಷ ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಹತ್ಯೆಗೀಡಾಗಿದ್ದ ಹರ್ಷ ಯಾನೆ
ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ನ್ಯಾಯಮೂರ್ತಿ ಜಿ.ಬಸವರಾಜ್ ಅವರಿದ್ದ ವಿಭಾಗೀಯ ಪೀಠ ಅರ್ಜಿಯನ್ನು ವಜಾಗೊಳಿಸಿದೆ. ಕಾನೂನು ಬಾಹಿರ ಚುಟುವಟಿಕೆಗಳ (ನಿಯಂತ್ರಣ) ಕಾಯ್ದೆ ಅಡಿಯಲ್ಲಿ ಅರ್ಜಿದಾರ ಆರೋಪಿಯವರ ವಿರುದ್ಧ ಹೊರಿಸಲಾಗಿರುವ ಅಪರಾಧಗಳು ನಿಸ್ಸಂದೇಹವಾಗಿ ದೇಶದ ಏಕತೆ, ಸಮಗ್ರತೆ, ಭದ್ರತೆ ಹಾಗೂ ಸಾರ್ವಭೌಮತೆಗೆ ಧಕ್ಕೆ ತರುವಂತಿವೆ. ಜೊತೆಗೆ, ಇದು ಸಮಾಜದ ವಿರುದ್ಧದ ಅಪರಾಧವೂ ಹೌದು.
ಪ್ರಕರಣದ ತನಿಖಾ ವರದಿ ಪ್ರಕಾರ, ಅರ್ಜಿದಾರರು ಕೋಮುವಾದಿಗಳಂತೆ ಕಂಡುಬರುತ್ತಾರೆ. ವೈಯಕ್ತಿಕ ದ್ವೇಷ ಇಲ್ಲದಿದ್ದರೂ ಭಯ ಹುಟ್ಟಿಸುವ ಉದ್ದೇಶಕ್ಕಾಗಿ ಹರ್ಷನನ್ನು ಹತ್ಯೆಗೆ ಆಯ್ದುಕೊಳ್ಳಲಾಗಿದೆ. ಮೇಲ್ಮನವಿದಾರನ ವಯಸ್ಸು ಚಿಕ್ಕದು ಮತ್ತು ಆತನಿಗೆ ಕ್ರಿಮಿನಲ್ ಹಿನ್ನೆಲೆ ಇಲ್ಲ ಎಂಬುದು ಜಾಮೀನು ನೀಡಲು ಪರಿಗಣಿಸಬೇಕಾದ ಅಂಶವಾಗದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಅಲ್ಲದೆ ಪ್ರಕರಣದ ಆರು ಆರೋಪಿಗಳು ಕೃತ್ಯದಲ್ಲಿ ಪಾಲ್ಗೊಂಡಿದ್ದರೆ, ಏಳನೇ ಆರೋಪಿ ಫರಾಜ್ ಪಾಷಾ ಆರೋಪಿಗಳ ಸಂಚನ್ನು ತಿಳಿದಿದ್ದರಷ್ಟೆ ಅಲ್ಲದೆ, ಹರ್ಷನನ್ನು ಹಿಂಬಾಲಿಸಿ ಮಾಹಿತಿ ನೀಡಿದ್ದರು. ಇವರ ಮಾಹಿತಿಯಿಂದಲೇ ಆರೋಪಿಗಳ ಕೃತ್ಯ ಕಾರ್ಯಗತಗೊಳಿಸಲು ಸಾಧ್ಯವಾಗಿದೆ ಎಂದು ಕೋರ್ಟ್ ಹೇಳಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು ಪ್ರತಿನಿಧಿಸುವ ಪಿ.ಪ್ರಸನ್ನ ಕುಮಾರ್ ಅವರು ಆರೋಪಿಗಳ ವಿರುದ್ಧದ ಚಾರ್ಜ್ಶೀಟ್ನಲ್ಲಿ ಕಂಡುಬರುವ ಆರೋಪಗಳು ಮೇಲ್ನೋಟಕ್ಕೆ ನಿಜವೆಂದು ಪ್ರಾಸಿಕ್ಯೂಷನ್ ಸಾಬೀತುಪಡಿಸಲು ಸಾಧ್ಯವಾದರೆ, ಜಾಮೀನು ನೀಡಲು ಸಾಧ್ಯವಿಲ್ಲ ಮತ್ತು ಆರೋಪಿಯ ವಯಸ್ಸು, ಪೂರ್ವಾಪರಗಳ ಅನುಪಸ್ಥಿತಿ ಮುಂತಾದ ಇತರ ಅಂಶಗಳು ನ್ಯಾಯಾಲಯದ ಮೇಲೆ ಪ್ರಭಾವ ಬೀರಬಾರದು ಎಂದು ಸಲ್ಲಿಸಿದ್ದ ವಾದವನ್ನು ಹೈಕೋರ್ಟ್ ಸಮ್ಮತ್ತಿಸಿದ್ದು, ಈ ಹಿಂದೆ ವಿಶೇಷ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.