bhadra dam; ಆಫ್ ಅಂಡ್ ಆನ್ ಪದ್ಧತಿ ರದ್ದುಗೊಳಿಸಲು ಡಿಕೆಶಿ ಬಳಿ ರೈತರ ಮನವಿ

ಬೆಂಗಳೂರು, ಅ.12: ಭದ್ರಾ ನೀರನ್ನು (bhadra dam) ನಿರಂತರವಾಗಿ ಹರಿಸಬೇಕು ಮತ್ತು ಅಫ್ ಅಂಡ್ ಆನ್ ಪದ್ಧತಿ ರದ್ದುಗೊಳಿಸಬೇಕು ಎಂದು ದಾವಣಗೆರೆ ಲೋಕಸಭಾ ಸದಸ್ಯರಾದ ಜಿ ಎಂ ಸಿದ್ದೇಶ್ವರ ರವರ ನೇತೃತ್ವದಲ್ಲಿ ಉಪಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ರವರನ್ನು ಭೇಟಿ ಮಾಡಿ ರೈತ ಮುಖಂಡರು, ರೈತರು ಒತ್ತಾಯಿಸಿದ್ದಾರೆ.

ಮಧ್ಯೆ ಕರ್ನಾಟಕ ರೈತರ ಜೀವನಾಡಿಯಾಗಿರುವ ಭದ್ರಾ ಜಲಾಶಯದಿಂದ ನೀರನ್ನು ಆಗಸ್ಟ್ 10ನೇ ತಾರೀಖಿನಿಂದ ನಿರಂತರವಾಗಿ 100 ದಿನ ‌ಹರಿಸುವುದಾಗಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಭದ್ರಾ ನೀರಾವರಿ ಸಲಹಾ ಸಮಿತಿ (Irrigation Consultative Committee) ನಿರಂತರ 100 ದಿನ ‌ಹರಿಸುವ ತೀರ್ಮಾನ ಬದಲಿಸಿದೆ. ಪ್ರಸ್ತುತ ಭದ್ರಾ ನೀರು ಹರಿಸುವ ಐ.ಸಿ.ಸಿ ವೇಳಾಪಟ್ಟಿ ಪ್ರಕಾರ ಅಕ್ಟೋಬರ್ 15 ರಂದು ನೀರು ನಿಲುಗಡೆ ಮಾಡಲಾಗುವುದು ಎಂದು ಹೇಳಿದ್ದು, ರೈತರು ಆತಂಕಗೊಂಡಿದ್ದಾರೆ.

Eshwara Khandre; ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 2 ಕೋಟಿ ನೀಡಿದ ಸಚಿವ

ಭದ್ರಾ ಜಲಾಶಯದಿಂದ 100 ದಿನ ‌ಹರಿಸುವುದಾಗಿ ಸರ್ಕಾರ ಆದೇಶ ಹೊರಡಿಸಿದ್ದರಿಂದ ದಾವಣಗೆರೆ ಜಿಲ್ಲೆಯಲ್ಲಿ ರೈತರು ಜಮೀನಿನಲ್ಲಿ ಸುಮಾರು 1.5 ಲಕ್ಷ ಎಕರೆಯಲ್ಲಿ ಭತ್ತದ ನಾಟಿ ಮಾಡಿದ್ದಾರೆ. ಈಗ ಬೆಳೆ ಹೂವಾಡುವ ಹಂತದಲ್ಲಿದ್ದು, ತೆನೆ ಕಟ್ಟುವ ಸಮಯ. ಆದರೆ ಭದ್ರಾ ನೀರಾವರಿ ಸಲಹಾ ಸಮಿತಿ ನಿರಂತರ 100 ದಿನ ‌ಹರಿಸುವ ತೀರ್ಮಾನ ಬದಲಿಸಿ 20 ದಿನ ನೀರು ‌ಹರಿಸುವುದು ಮತ್ತು 10 ದಿನ ನೀರು ನಿಲ್ಲಿಸುವುದನ್ನು ಜಾರಿ ಮಾಡಿದೆ. ಇದರಿಂದ ನಿರಂತರ ನೀರು ಬೇಡುವ ಭತ್ತದ ಬೆಳೆಗೆ ಹಾನಿಯಾಗಲಿದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಈ ಆದೇಶದಿಂದ ದಾವಣಗೆರೆ ಜಿಲ್ಲೆಯಲ್ಲಿ ಭತ್ತದ ಬೆಳೆ ಬೆಳೆಸಿರುವ ರೈತರಿಗೆ ಬಹಳ ಅನ್ಯಾಯವಾಗುತ್ತದೆ. ಇದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುವಂತಾಗುತ್ತದೆ. ಆದ್ದರಿಂದ ಭದ್ರಾ ನೀರು ಹರಿಸುವ ಐ ಸಿ ಸಿ ತೀರ್ಮಾನಿಸಿರುವ ಆಫ್ ಅಂಡ್ ಆನ್ ಪದ್ಧತಿ ರದ್ದುಗೊಳಿಸಿ ನಿರಂತರ 100 ದಿನ ನೀರು ಹರಿಸಬೇಕು ಎಂದು ಸಚಿವರ ಬಳಿ ಮನವಿ ಮಾಡಿದರು.

ಜಿ ಎಂ ಸಿದ್ದೇಶ್ವರ ನೇತೃತ್ವದ ನಿಯೋಗದಲ್ಲಿ ಶಾಸಕ ಬಿ ಪಿ ಹರೀಶ್, ಎಂ ಎಲ್ ಸಿ ನವೀನ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್ ಎಂ ವಿರೇಶ್ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಬಿ ಎಸ್ ಜಗದೀಶ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್, ರೈತ ಮುಖಂಡರಾದ ಕೊಳೇನಹಳ್ಳಿ ಬಿ ಎಂ ಸತೀಶ್, ಧನಂಜಯ ಕಡ್ಲೆಬಾಳ್, ಶಾಗಲೆ ದೇವೇಂದ್ರಪ್ಪ, ಬಾತಿ ವಿರೇಶ್ ದೊಗ್ಗಳ್ಳಿ, ಬಿ ಕೆ ಶಿವಕುಮಾರ್ ಮುಂತಾದವರು ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!