ಹೋರಾಟ ಅರ್ಥಪೂರ್ಣ, ಆದರೆ ಸಂದರ್ಭ ಸರಿಯಿಲ್ಲ.. ತೊಂದರೆ ತಪ್ಪಿಸಲು ‘ಬಂದ್’ ಕೈಬಿಡಿ ಎಂದು ರೈತ ಸಂಘಟನೆಗಳಿಗೆ ಸಾರ್ವಜನಿಕರ ಆಗ್ರಹ..

ಬಂದ್

ಬೆಂಗಳೂರು: ಕೃಷಿ ಸಾಲ ಮನ್ನಾ ಸಹಿತ ವಿವಿಧ ಬೇಡಿಕೆಗಳನ್ನು ಮುಂದಿಟ್ಟು, ರಾಜಧಾನಿ ದೆಹಲಿಯಲ್ಲಿ ಭಾರೀ ಹೋರಾಟ ನಡೆಸಲು ಮುಂದಾಗಿರುವ, ಹಾಗೂ ‘ಭಾರತ್ ಬಂದ್’ಗೆ ಕರೆ ನೀಡಿರುವ ರೈತರ ಬಗ್ಗೆ ಅನುಕಂಪ ಇದೆ ಆದರೆ ಹೋರಾಟದ ಸಂದರ್ಭ ಹಾಗೂ ವೈಖರಿಯನ್ನು ಒಪ್ಪಲಾಗದು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ವಿವಿಧ ಬೇಡಿಕೆಗಳನ್ನು ಮುಂದಿಟ್ಟು ವಿವಿಧ ರೈತ ಸಂಘಟನೆಗಳ ಬೆಂಬಲದೊಂದಿಗೆ ಸಂಯುಕ್ತ ಕಿಸಾನ್ ಮೋರ್ಚಾವು ದೇಶವ್ಯಾಪಿ ಹೋರಾಟಕ್ಕೆ ಕರೆ ನೀಡಿದ್ದು ಉತ್ತರ ಭಾರತದಲ್ಲಿ ರೈತರು ಹೋರಾಟದ ಅಖಾಡಕ್ಕೆ ಧುಮುಕಿದ್ದಾರೆ. ದೆಹಲಿಯಲ್ಲಿನ ಹೋರಾಟಕ್ಕೆ ಧಾವಿಸುವ ಸನ್ನಿವೇಶದಿಂದಾಗಿ ಅಲ್ಲಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿವೆ. ಇದರಿಂದಾಗಿ ಸಾರ್ವಜನಿಕರು ಹಾಗೂ ಶ್ರಮಿಕವರ್ಗ ಸಂಕಷ್ಟದಲ್ಲಿ ಸಿಲುಕಿದ್ದು, ಇದು ಇಂತಹಾ ಹೋರಾಟಕ್ಕೆ ಸೂಕ್ತ ಸಮಯವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಬಂದ್

ಈ ನಡುವೆ ಫೆಬ್ರವರಿ 16 ರಂದು ‘ಭಾರತ್ ಬಂದ್’ ಕರೆ ನೀಡಲಾಗಿದ್ದು, ಈ ಕರೆಯಿಂದಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಪೋಷಕರು ಆತಂಕಗೊಂಡಿದ್ದಾರೆ. ಇದು ಶೈಕ್ಷಣಿಕ ವರ್ಷಾಅಂತ್ಯದ ಪರೀಕ್ಷಾ ಸಂದರ್ಭವಾಗಿದೆ. ಹೋರಾಟ ನ್ಯಾಯಯುತವಾಗಿದ್ದರೂ ಯುವಜನರ ಭವಿಷ್ಯದ ವಿಚಾರವನ್ನು ಗಮನಿಸಿದರೆ, ಪ್ರಸಕ್ತ ಪರಿಸ್ಥಿತಿಯು ಬಂದ್ ಕರೆಗೆ ಸೂಕ್ತ ಕಾಲವಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಕೇಂದ್ರ ಟ್ರೇಡ್ ಯೂನಿಯನ್‌ಗಳು (CTUs) ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ತಮ್ಮ ಬೇಡಿಕೆಗಳಿಗಾಗಿ ಒತ್ತಾಯಿಸಲು ಫೆಬ್ರವರಿ 16 ರಂದು ರಾಷ್ಟ್ರವ್ಯಾಪಿ ಬಂದ್ ಮತ್ತು ರೈಲು ಮತ್ತು ರಸ್ತೆ ತಡೆಗೆ ಕರೆ ನೀಡಿವೆ. ಅದರಲ್ಲೂ ‘ಭಾರತ್ ಬಂದ್’ ಬಗ್ಗೆ ಎಲ್ಲರಲ್ಲೂ ಆತಂಕ ಮನೆಮಾಡಿದಂತಿದೆ. ಈ ಬಂದ್ ಕರೆಯನ್ನು ಸದ್ಯದ ಪರಿಸ್ಥಿತಿಯಲ್ಲಿ ಒಪ್ಪಲಾಗದು ಎಂದು ಅನೇಕರು ಹೇಳಿದ್ದಾರೆ. ಸಂಘಗಳ ಪ್ರತಿಭಟನೆಯ ಹಕ್ಕನ್ನು ನಾವೂ ಪ್ರತಿಪಾದಿಸುತ್ತೇವೆ, ಆದರೆ ಮಾನವೀಯ ನೆಲೆಯಲ್ಲಿ ವಿದ್ಯಾರ್ಥಿಗಳ ಸ್ಥಿತಿಯನ್ನೂ ನಾವೂ ಅರ್ಥಮಾಡಿಕೊಳ್ಳಬೇಕಿದೆ. ಈ ಬಗ್ಗೆ ರೈತ ಸಂಘಟನೆಗಳ ನಾಯಕರೂ ಅರ್ಥ ಮಾಡಿಕೊಳಬೇಕಿದೆ ಎಂದು ಅನೇಕರು ಹೇಳಿಕೊಂಡಿದ್ದಾರೆ.

ಭಾರತ್ ಬಂದ್ ಬೇಡ; ಸಾಮಾಜಿಕ ಹೋರಾಟಗಾರರ ಆಗ್ರಹ

ಬೇಡಿಕೆಗಳನ್ನು ಮುಂದಿಟ್ಟು ಹೋರಾಟ ನಡೆಸುವುದರಲ್ಲಿ ಅರ್ಥವಿದೆ. ರೈತರ ಹೋರಾಟಗಳಿಗೆ ನಮ್ಮ ಬೆಂಬಲವೂ ಇದೆ. ಆದರೆ ಉಗ್ರ ಹೋರಾಟಕ್ಕೆ ಈಗಿನ ಸಂದರ್ಭ ಸೂಕ್ತವಲ್ಲ ಎಂಬ ಬಗ್ಗೆ ಪೋಷಕರ ಅಭಿಪ್ರಾಯವೂ ಸರಿ ಇದೆ ಎಂದು ಸಾಮಾಜಿಕ ಹೋರಾಟಗಾರ ಆಲ್ವಿನ್ ಮೆಂಡೋನ್ಸಾ ಹೇಳಿದ್ದಾರೆ.

ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿರುವ ಆಲ್ವಿನ್ ಮೆಂಡೋನ್ಸಾ, ಇದು 10ನೇ, 12 ನೇ ಬೋರ್ಡ್ ಪರೀಕ್ಷೆಗಳ ಸಂದರ್ಭ. ಶೈಕ್ಷಣಿಕ ವರ್ಷಾಂತ್ಯದಲ್ಲಿ ಎಲ್ಲರೂ ಪರೀಕ್ಷೆ ಬರೆಯುತ್ತಾರೆ. ಇಂತಹಾ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಹಾಯವಾಗಬೇಕೇ ಹೊರತು, ಪರೀಕ್ಷೆಗೆ ಅಡ್ಡಿಯಾಗುವ ರೀತಿ ಬಂದ್ ಆಚರಿಸುವುದು ಸರಿಯಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ ನಾಯಕರಲ್ಲಿ ನಮ್ಮ ಆಗ್ರಹ ಎಂದು ತಿಳಿಸಿದ್ದಾರೆ.

ಬಂದ್

ಎಲ್ಲಾ ವಿದ್ಯಾರ್ಥಿಗಳು ಈ ಪರೀಕ್ಷೆಗಳ ತಯಾರಿಯಲ್ಲಿರುವಾಗ ಹೋರಾಟದ ಹೆಸರಲ್ಲಿ ಮತ್ತೊಂದು ರೀತಿಯ ಅನ್ಯಾಯ ಆಗುವುದು ಸರಿಯಲ್ಲ. ರೈಲು ತಡೆ, ರಸ್ತೆ ತಡೆ ಮತ್ತು ಸಾರಿಗೆ ಸೇವೆಗಳ ಲಭ್ಯತೆಯ ಕೊರತೆಯಿಂದಾಗಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳನ್ನು ತಲುಪಲು ಸಾಧ್ಯವಾಗದಿದ್ದರೆ ಅವರ ಶ್ರಮ ವ್ಯರ್ಥವಾಗಬಹುದು. ಭವಿಷ್ಯದ ಹೊಂಗನಸು ಹೊತ್ತವರಿಗೆ ನಾವೇ ಅನ್ಯಾಯ ಮಾಡಿದಂತಾಗುತ್ತದೆ ಎಂಬ ಅಭಿಪ್ರಾಯವನ್ನು ಪತ್ರಕರ್ತರೂ ಆದ ಆಲ್ವಿನ್ ಮೆಂಡೋನ್ಸಾ ವ್ಯಕ್ತಪಡಿಸಿದ್ದಾರೆ.

ರೈತರನ್ನು ಸಂತೈಸಿ; ಮೋದಿ ಸರ್ಕಾರಕ್ಕೆ ಆಗ್ರಹ

ಪೋಷಕರು ಮತ್ತು ವಿದ್ಯಾರ್ಥಿಗಳು, ತಮ್ಮ ಶೈಕ್ಷಣಿಕ ವೃತ್ತಿಜೀವನದ ಅತ್ಯಂತ ನಿರ್ಣಾಯಕ ಹಂತವಾದ ಬೋರ್ಡ್ ಪರೀಕ್ಷೆಗಳ ಸಮಯದಲ್ಲಿ ಮುಷ್ಕರ, ಬಂದ್ ಅನ್ನು ಆಚರಿಸುವ ನಿರ್ಧಾರವನ್ನು ಕೈಬಿಟ್ಟು ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕೆಂದು ಮನವಿ ಮಾಡಿರುವ ಆಲ್ವಿನ್ ಮೆಂಡೋನ್ಸಾ, ಕೇಂದ್ರ ಸರ್ಕಾರ ಕೂಡಾ ರೈತರೊಂದಿಗೆ ಚರ್ಚಿಸಿ ನ್ಯಾಯಯುತ ಬೇಡಿಕೆಗಳನ್ನು ಪರಿಶೀಲಿಸಬೇಕು, ಭರವಸೆಯಂತೆಯೇ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!