ಬಿಜೆಪಿ, ಜೆಡಿಎಸ್ ಪಕ್ಷಗಳದ್ದು ಪ್ರಜಾತಂತ್ರ ದ್ರೋಹ: ಮೊಹಮ್ಮದ್ ಜಿಕ್ರಿಯಾ ಆರೋಪ
ದಾವಣಗೆರೆ: ರಾಜ್ಯದ ಜನರಿಂದ ಬಹುಮತ ಪಡೆದು ಅಧ್ವಿತೀಯ ಜಯಭೇರಿ ಬಾರಿಸಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಕೆಡವಲು ವಿದೇಶದಲ್ಲಿ ಕುಳಿತು ಷಡ್ಯಂತ್ರ ರೂಪಿಸಿರುವುದು ಆಘಾತಕಾರಿ ಸಂಗತಿ. ಬಿಜೆಪಿ ಮತ್ತು ಜೆಡಿಎಸ್ ನಿಂದ ಪ್ರಜಾತಂತ್ರ ವ್ಯವಸ್ಥೆಗೆ ಬಗೆದ ದ್ರೋಹ ಎಂದು ಜವಾಹರ್ ಬಾಲ್ ಮಂಚ್ ಜಿಲ್ಲಾಧ್ಯಕ್ಷ ಮೊಹಮ್ಮದ್ ಜಿಕ್ರಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಹೊಸ ಕುತಂತ್ರ ರಾಜಕಾರಣಕ್ಕೆ ಕೈ ಹಾಕಿರುವ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಹಾಗೂ ರಾಜ್ಯ ಬಿಜೆಪಿ ನಾಯಕರು ಅಧಿಕಾರ ಕಳೆದುಕೊಂಡು ಹತಾಶರಾಗಿದ್ದಾರೆ. ಜನರಿಂದ ತಿರಸ್ಕೃತಗೊಂಡರೂ ಇನ್ನೂ ಪಾಠ ಕಲಿತಿಲ್ಲ. ವಿದೇಶದಲ್ಲಿ ಕುಳಿತು ಕರ್ನಾಟಕದಲ್ಲಿ ಬಹುಮತದ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂಬುದಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ಹೇಳಿದ್ದಾರೆ. ಇಂಥದ್ದೊಂದು ಸಂಚು ರೂಪಿಸಿರುವ ಈ ಎರಡೂ ಪಕ್ಷಗಳಿಗೆ ಜನರು ತಕ್ಕ ಉತ್ತರ ಕೊಡುವುದು ಖಚಿತ ಎಂದು ಹೇಳಿದ್ದಾರೆ.
ಜೆಡಿಎಸ್ ಪಕ್ಷವು ಕಳೆದ ವಿಧಾನಸಭಾ ಚುನಾವಣೆಯಲ್ಲಿ ೧೯ ಸ್ಥಾನ ಮಾತ್ರ ಪಡೆದಿದೆ. ಇನ್ನು ಬಿಜೆಪಿಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡುವಷ್ಟು ಯೋಗ್ಯತೆ ಇಲ್ಲ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಹೇಳಿಕೊಂಡು ಮತ ಕೇಳುವುದು ಬಿಟ್ಟರೆ ಬೇರೆ ಏನೂ ಕೆಲಸ ಮಾಡದ ರಾಜ್ಯ ನಾಯಕರು ರಾಜ್ಯ ಸರ್ಕಾರದ ಜನಪರ ಕೆಲಸ ಸಹಿಸದೇ ಇಂಥ ಕೆಲಸಕ್ಕೆ ಕೈ ಹಾಕಿರುವುದರಿಂದ ಯಶಸ್ವಿಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಕರ್ನಾಟಕದ ಜನರು ಪ್ರಜ್ಞಾವಂತರು. ಬಿಜೆಪಿ ಭ್ರಷ್ಟಾಚಾರ ಹಾಗೂ ಜೆಡಿಎಸ್ ನ ಕುಟುಂಬ ರಾಜಕಾರಣಕ್ಕೆ ಉತ್ತರ ಕೊಟ್ಟಿದ್ದಾರೆ. ಚುನಾವಣೆಗೆ ಮುನ್ನ ಹಾವು ಮುಂಗುಸಿಯಂತೆ ಕಾದಾಡುತ್ತಿದ್ದ ಜೆಡಿಎಸ್ ಹಾಗೂ ಬಿಜೆಪಿ ಜಂಟಿಯಾಗಿ ಹೋರಾಟ ಮಾಡುತ್ತೇವೆ ಎಂದು ಹೇಳುವುದು ಹಾಸ್ಯಾಸ್ಪದ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಕುಮಾರಸ್ವಾಮಿ ಹಾಗೂ ಅವರ ಕುಟುಂಬದ ವಿರುದ್ದ ಬಿಜೆಪಿಯವರು ಮುಗಿಬಿದ್ದಿದ್ದರು. ಆರೋಪಗಳ ಮೇಲೆ ಆರೋಪ ಮಾಡಿದ್ದರು. ಆದ್ರೆ, ಈಗ ಒಂದಾಗಿ ಹೋರಾಟ ನಡೆಸುತ್ತೇವೆ ಎನ್ನುವ ಮೂಲಕ ಅವಕಾಶವಾದಿ ರಾಜಕಾರಣ ಮಾಡುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುವ ವಿಚಾರ ಎಂದಿದ್ದಾರೆ.
ಜೆಡಿಎಸ್ ಹಾಗೂ ಬಿಜೆಪಿಯವರ ಆಟ ಹೆಚ್ಚು ದಿನ ನಡೆಯುವುದಿಲ್ಲ. ಇದೇ ರೀತಿ ಕುತಂತ್ರ ರಾಜಕಾರಣ ಮುಂದುವರಿಸಿದರೆ ಲೋಕಸಭಾ ಚುನಾವಣೆಯಲ್ಲಿ ಈ ಎರಡೂ ಪಕ್ಷಗಳಿಗೂ ತಕ್ಕ ಪಾಠ ಕಲಿಸಲಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯಡಿ ಕೆಲಸ ನಿರ್ವಹಿಸಲಿ. ಜನರು ಕೊಟ್ಟಿರುವ ತೀರ್ಪಿಗೆ ತಕ್ಕಂತೆ ನಡೆದುಕೊಳ್ಳಲಿ. ಅದನ್ನು ಬಿಟ್ಟು ರಾಜ್ಯದ ಜನರಿಗೆ ಅವಮಾನ ಮಾಡುವಂತೆ ವರ್ತಿಸಿದರೆ ತಕ್ಕ ಶಾಸ್ತಿ ಆಗುವುದು ಖಚಿತ ಎಂದು ಮೊಹಮ್ಮದ್ ಜಿಕ್ರಿಯಾ ಅವರು ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.