ಸಿದ್ದರಾಮಯ್ಯಗೆ ಉಡುಪಿ ಕೃಷ್ಣನ ಶಾಪ – ಕೆ ಎಸ್ ಈಶ್ವರಪ್ಪ
ಉಡುಪಿ: ಸಿದ್ದರಾಮಯ್ಯಗೆ ಉಡುಪಿ ಕೃಷ್ಣನ ಶಾಪವಿದೆ. ಈಗಲಾದರೂ ಅವರು ಕೃಷ್ಣನ ದರ್ಶನ ಮಾಡಿದರೆ ಅವರಿಗೆ ಒಳ್ಳೆಯದಾಗಲಿದೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಸಲಹೆ ನೀಡಿದ್ದಾರೆ.
ಮಣಿಪಾಲದ ಕಂಟ್ರಿ ಇನ್ ಹೋಟೆಲ್‌ನಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಈಶ್ವರಪ್ಪ, ಉಡುಪಿ ಕೃಷ್ಣನ ಶಾಪದಿಂದ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಬೇಕಾಯಿತು, ಮುಖ್ಯಮಂತ್ರಿ ಪದವಿಯನ್ನೂ ಕಳೆದುಕೊಳ್ಳಬೇಕಾಯಿತು ಎಂದು ಹೇಳಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಹಲವು ಬಾರಿ ಉಡುಪಿಗೆ ಭೇಟಿ ನೀಡಿದರೂ ಒಮ್ಮೆಯೂ ಕೃಷ್ಣಮಠಕ್ಕೆ ತೆರಳಿ ದೇವರ ದರ್ಶನ ಪಡೆಯಲಿಲ್ಲ. ಕನಕ ದಾಸರಿಗೆ ಕೃಷ್ಣನ ಸ್ಫೂರ್ತಿ ಸಿಕ್ಕರೂ ಸಿದ್ದರಾಮಯ್ಯಗೆ ಮಾತ್ರ ಸಿಕ್ಕಿಲ್ಲ ಎಂಗಪು,
ಹಿಂದೆ ದೇವಸ್ಥಾನ, ಹಿಂದೂ ಧರ್ಮವನ್ನು ಟೀಕಿಸುತ್ತಿದ್ದ ಸಿದ್ದರಾಮಯ್ಯ ಈಗ ದೇವಸ್ಥಾನಗಳಿಗೆ ಹೋಗುತ್ತಿದ್ದಾರೆ, ದೇಗುಲಗಳಿಗೆ ಹಣವನ್ನೂ ಕೊಟ್ಟಿದ್ದಾರೆ. ಅವರ ಮೇಲೆ ವೈಯಕ್ತಿಕವಾಗಿ ದ್ವೇಷವಿಲ್ಲ; ಪಕ್ಷ, ಧರ್ಮದ ವಿಚಾರದಲ್ಲಿ ಟೀಕೆ ಮಾಡಿದಾಗ ಮಾತ್ರ ದ್ವೇಷಿಸುತ್ತೇನೆ ಎಂದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸಾಮಾಜಿಕ ಚಟುವಟಿಕೆಗಳಿಗೆ ಹಣ ಬಿಡುಗಡೆ ಮಾಡಿದ್ದಾರೆ. ಬಳಿಕ ನಾನು ಸಚಿವನಾಗಿದ್ದಾಗಲೂ ಅವರ ಬೇಡಿಕೆಗಳಿಗೆ ಸ್ಪಂದಿಸಿದ್ದೇನೆ. ಇಬ್ಬರ ನಡುವೆಯೂ ಉತ್ತಮ ಸ್ನೇಹ ಇದೆ ಎಂದು ಈಶ್ವರಪ್ಪ ಹೇಳಿದರು.