ಬಿಜೆಪಿಗೆ ಆರ್.ಎಸ್.ಎಸ್ ಬೆಂಬಲದ ಅನಂತ್ ಕುಮಾರ್ ಹೆಗಡೆ ವಿರುದ್ಧ ಕ್ರಮಕೈಗೊಳ್ಳುವ ದಮ್ಮು – ತಾಖತ್ ಇಲ್ಲ

ಬೆಂಗಳೂರು: ಸಂಸದ ಅನಂತಕುಮಾರ ಹೆಗಡೆ ಸಂವಿಧಾನಕ್ಕೆ ವಿರುದ್ದವಾಗಿ ಮಾತನಾಡಿರುವುದು ವೈಯಕ್ತಿಕ ಹೇಳಿಕೆ ಎಂದು ಭಾರತೀಯ ಜನತಾ ಪಕ್ಷ ತಳ್ಳಿಹಾಕಿರುವುದು ನಾಚಿಕೆಗೇಡಿನ ನಡೆಯ ಪ್ರತೀಕ ಮಾತ್ರವಲ್ಲ ನೆಲದ ಕಾನೂನಿನ ಬಗ್ಗೆ ಅವರಿಗಿರುವ ತಿರಸ್ಕಾರವೂ ಹೌದು.. ಈ ಹೇಳಿಕೆಯನ್ನು ಹೆಗಡೆ ತಮ್ಮ ಮನೆಯ ಅಡುಗೆಕೋಣೆಯಲ್ಲಿ ನೀಡಿದ್ದಲ್ಲ, ಸಾರ್ವಜನಿಕ ಸಮಾರಂಭದಲ್ಲಿ ಸಂಸದನಾಗಿ ಮಾತನಾಡಿರುವುದು. ಈ ವ್ಯತ್ಯಾಸ ತಿಳಿಯದಷ್ಟು ಬಿಜೆಪಿ ನಾಯಕರು ಮೂರ್ಖರಲ್ಲ, ಇವರಿಗೆ ಆರ್ ಎಸ್ ಎಸ್ ಬೆಂಬಲದ ಅನಂತಕುಮಾರ ಹೆಗಡೆ ವಿರುದ್ಧ ಕ್ರಮಕೈಗೊಳ್ಳುವ ದಮ್ಮು ತಾಖತ್ ಇಲ್ಲ ಅಷ್ಟೆ.

ನರೇಂದ್ರ ಮೋದಿಯವರೂ ಸೇರಿದಂತೆ ಬಿಜೆಪಿ ನಾಯಕರ ಮುಂದೆ ಈಗ ಇರುವುದು ಎರಡೇ ಆಯ್ಕೆ. ಒಂದೋ ಹೆಗಡೆಯನ್ನು ತಕ್ಷಣ ಪಕ್ಷದಿಂದ ವಜಾಗೊಳಿಸಬೇಕು ಇಲ್ಲವೇ ಅವರ ಹೇಳಿಕೆಗೆ ತಮ್ಮ ಸಹಮತ ಇದೆ ಎಂದು ಘೋಷಿಸಬೇಕು. ನೋಡೋಣ ಇದೇ ವಿಷಯದ ಮೇಲೆ ಈ ಬಾರಿಯ ಲೋಕಸಭಾ ಚುನಾವಣೆ ನಡೆಯಲಿ.

ಅನಂತಕುಮಾರ ಹೆಗಡೆ ನಿರಂತರವಾಗಿ ಸಂವಿಧಾನದ ವಿರುದ್ಧ ಮಾತ್ರ ಹೇಳಿಕೆ ನೀಡಿದ್ದಲ್ಲ ಮೀಸಲಾತಿಯನ್ನು ರದ್ದುಗೊಳಿಸಬೇಕೆಂದು ಹೇಳಿದ್ದಾರೆ, ದಲಿತರನ್ನು ನಾಯಿಗಳು ಎಂದು ದೂಷಿಸಿದ್ದಾರೆ. ಮನುಸ್ಮೃತಿಯನ್ನು ಬಹಿರಂಗವಾಗಿ ಸಮರ್ಥಿಸಿದ್ದಾರೆ. ವಿರೋಧ ಪಕ್ಷದ ನಾಯಕರನ್ನು ತುಚ್ಚೀಕರಿಸಿ ಮಾತನಾಡಿದ್ದಾರೆ. ಆಗಲೂ ಬಿಜೆಪಿ ಹೆಗಡೆ ವಿರುದ್ಧ ಕ್ರಮ ಕೈಗೊಂಡಿಲ್ಲ. ಯಾಕೆಂದರೆ ಹೆಗಡೆ ಮಾತುಗಳು ಬಿಜೆಪಿ ಮತ್ತು ಆರ್ ಎಸ್ ಎಸ್ ನ ಮನದ ಮಾತುಗಳೂ ಆಗಿತ್ತು.

ಅನಂತಕುಮಾರ್ ಹೆಗಡೆ ಸಂವಿಧಾನದ ವಿರುದ್ಧ ನೀಡುತ್ತಿರುವ ಹೇಳಿಕೆಗೆ ಅವರ ಬಿಜೆಪಿಯ ನಿಜವಾದ ‘‘ಹೈಕಮಾಂಡ್’’ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಪೂರ್ಣ ಬೆಂಬಲ ಇದೆ. ಆರ್.ಎಸ್.ಎಸ್ ಬಹಿರಂಗವಾಗಿ ಸಂವಿಧಾನಕ್ಕೆ ಬದ್ಧತೆ ಸಾರಿದ್ದರೂ ಅಂತರಂಗದಲ್ಲಿ ಎಂದೂ ಸಂವಿಧಾನವನ್ನಾಗಲಿ, ಅದರ ರಚನಕಾರರಾದ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಒಪ್ಪಿಕೊಂಡಿಲ್ಲ. ಹೆಗಡೆ ಹೇಳಿರುವುದನ್ನೇ ಕಾಲಕಾಲಕ್ಕೆ ಆರ್.ಎಸ್.ಎಸ್ ನಾಯಕರು ಹೇಳಿದ್ದರು. ಹೆಗಡೆ ಒಂದು ಮುಖವಾಡ ಅಷ್ಟೆ, ನಿಜವಾದ ಮುಖ ಆರ್.ಎಸ್.ಎಸ್.

ಸಂಸದನಾಗಿ ತಮ್ಮ ಸ್ವಂತ ಕ್ಷೇತ್ರಕ್ಕೆ ನಯಾಪೈಸೆಯಷ್ಟು ಕೆಲಸವನ್ನು ಮಾಡದ ಮತ್ತು ಲೋಕಸಭೆಯಲ್ಲಿ ಬಾಯಿ ಮುಚ್ಚಿಕೊಂಡೇ ಐದು ವರ್ಷಗಳನ್ನು ಪೂರ್ಣಗೊಳಿಸಿರುವ ಅನಂತ್ ಕುಮಾರ್ ಹೆಗಡೆ ವಿರುದ್ಧ ಉತ್ತರ ಕನ್ನಡದಾದ್ಯಂತ ಜನರಲ್ಲಿ ಆಕ್ರೋಶವಿದೆ. ಇದಕ್ಕಾಗಿ ಹಿಂದುತ್ವ ಅಪಾಯದಲ್ಲಿದೆ ಎಂಬ ಹುಸಿಭೀತಿಯನ್ನು ಜನರಲ್ಲಿ ಹುಟ್ಟಿಸಿ ಕೋಮುಭಾವನೆಯನ್ನು ಕೆರಳಿಸಿ ಮತಗಳ ಧ್ರುವೀಕರಣಗೊಳಿಸುವುದು ಅವರ ಉದ್ದೇಶವಾಗಿದೆ. ಇದಕ್ಕೆ ಆರ್.ಎಸ್.ಎಸ್ ಬೆಂಬಲ ಇರುವುದರಿಂದ ಬಿಜೆಪಿಯನ್ನೇ ಯಾಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಅವರು ಲೆಕ್ಕಕ್ಕಿಟ್ಟಿಲ್ಲ.

ಕಾರವಾರ ಕ್ಷೇತ್ರದಲ್ಲಿ ಹಿಂದುಳಿದ ಜಾತಿಗಳು, ಅಲ್ಪಸಂಖ್ಯಾತರು ಮತ್ತು ದಲಿತರು ಬಹುಸಂಖ್ಯೆಯಲ್ಲಿದ್ದಾರೆ. ಮೀಸಲಾತಿಯ ರದ್ದುಗೊಳಿಸುವ ದುರುದ್ದೇಶದಿಂದಲೇ ಅನಂತ್ ಕುಮಾರ್ ಹೆಗಡೆ ಅವರು ಸಂವಿಧಾನದ ಬದಲಾವಣೆಯ ಬಗ್ಗೆ ವಕಾಲತು ಮಾಡುತ್ತಿದ್ದಾರೆ ಎಂಬ ಅರಿವು ಅವರಲ್ಲಿ ಮೂಡಬೇಕಾಗಿದೆ. ಹೆಗಡೆಯವರಿಗೆ ಮಾತ್ರವಲ್ಲ ಇಂತಹ ಮನುಷ್ಯ ವಿರೋಧಿ ನಡೆಯನ್ನು ಬೆಂಬಲಿಸುತ್ತಿರುವ ಬಿಜೆಪಿಗೂ ಸರಿಯಾದ ಪಾಠ ಕಲಿಸುವ ಕಾಲ ಸನ್ನಿಹಿತವಾಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!