ಹೆಲಿಕಾಪ್ಟರ್ ದುರ್ಬಳಕೆ ಮಾಡಿದರೇ ಸಿಎಂ ಬೊಮ್ಮಾಯಿ? ನ್ಯಾಯಾಂಗ ತನಿಖೆಗೆ ರಮೇಶ್ ಬಾಬು ಆಗ್ರಹ

ಹೆಲಿಕಾಪ್ಟರ್ ದುರ್ಬಳಕೆ ಮಾಡಿದರೇ ಸಿಎಂ ಬೊಮ್ಮಾಯಿ

ಬೆಂಗಳೂರು  :ಬೆಂಗಳೂರು ಮುಖ್ಯಮಂತ್ರಿ ಕೆಲವು ಸಂದರ್ಭಗಳಲ್ಲಿ ರಾಜ್ಯದ ಹಿತಾಸಕ್ತಿಯ ವಿಷಯದಲ್ಲಿ ಮತ್ತು ಅತಿವೃಷ್ಠಿ, ಅನಾವೃಷ್ಠಿಯ ಸಂದರ್ಭಗಳಲ್ಲಿ ವಿಮಾನಯಾನ, ವಿಶೇಷ ವಿಮಾನಯಾನ ಮತ್ತು ಹೆಲಿಕಾಪ್ಟರ್ ಬಳಕೆಗೆ ಸರ್ಕಾರದ ವೆಚ್ಚದಲ್ಲಿ ಬಳಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ಇಂತಹ ಬಳಕೆಯನ್ನು ಖಾಸಗಿ ಕಾರ್ಯಕ್ರಮಗಳಿಗೆ ಅಥವಾ ವೈಯಕ್ತಿಕ ಕಾರಣಗಳಿಗೆ ಬಳಕೆ ಮಾಡಿದರೆ ಅದು ಕಾನೂನುಬಾಹಿರವಾಗುತ್ತದೆ ಎಂದು‌ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಹೇಳಿದ್ದಾರೆ.

ಕರ್ನಾಟಕದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳು ಕಳೆದ ಮೂರು ವರ್ಷದಲ್ಲಿ ಸಾಮಾನ್ಯ ವೆಚ್ಚಗಳ ಅಡಿಯಲ್ಲಿ ಅತಿಥಿ ಸತ್ಕಾರಕ್ಕೆ ಸುಮಾರು 167.92 ಕೋಟಿ ರೂಪಾಯಿ ಖರ್ಚು ಮಾಡಿರುತ್ತಾರೆ. ಇತರೆ ಪಕ್ಷಗಳನ್ನು ಅತಿಥಿ ಸತ್ಕಾರಕ್ಕೆ ಟೀಕೆ ಮಾಡುವ ಬಿಜೆಪಿ ನಾಯಕರು ತಮ್ಮ ಸರ್ಕಾರ ಮಾಡಿರುವ ಖರ್ಚಿನ ಬಗ್ಗೆ ಬಾಯಿಗೆ ಬೀಗ ಜಡಿದುಕೊಂಡಿರುತ್ತಾರೆ. ಬಾಯಿಬಿಟ್ಟರೆ ಬಣ್ಣಗೇಡು! ಎಂಬುದು ಬಿಜೆಪಿ ನಾಯಕರಿಗೆ ಅರ್ಥವಾಗಿದೆ ಎಂದು ರಮೇಶ್ ಬಾಬು ಟೀಕಿಸಿದ್ದಾರೆ.


ಸ್ವಯಂ ಘೋಷಿತ ಕಾಮನ್ ಮ್ಯಾನ್ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರು ಕಳೆದ ಒಂದುವರೆ ವರ್ಷದಲ್ಲಿ ಸುಮಾರು 26 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದ್ದಾರೆ. 29.07.2021ರಿಂದ ಇಲ್ಲಿಯವರೆಗೆ ಮುಖ್ಯಮಂತ್ರಿಗಳು ಹಲವಾರು ಬಾರಿ ವಿಶೇಷ ವಿಮಾನ ಸೇವೆ ಮತ್ತು ಹೆಲಿಕಾಪ್ಟರ್ ಬಳಕೆ ಮಡಿದ್ದಾರೆ. ಬಹುತೇಕ ಸಂದರ್ಭಗಳಲ್ಲಿ ತಮ್ಮ ವಿಧಾನಸಭಾ ಕ್ಷೇತ್ರವಾದ ಶಿಗ್ಗಾಂವ್ ಗೆ ಭೇಟಿ ನೀಡಲು ಹುಬ್ಬಳ್ಳಿ ಮುಖಾಂತರ ಪ್ರಯಾಣ ಮಾಡಿದ್ದಾರೆ. ಅವರು ಬಳಕೆ ಮಾಡಿರುವ ವಿಶೇಷ ವಿಮಾಣ ಸೇವೆ ಮತ್ತು ಹೆಲಿಕಾಪ್ಟರ್‌ಗಳು ರಾಜ್ಯದ ಹಿತಾಸಕ್ತಿಯ ಬದಲು ಅವರ ಖಾಸಗಿ ಕಾರ್ಯಕ್ರಮಗಳಿಗೆ ಮತ್ತು ಪಕ್ಷದ ಕಾರ್ಯಕ್ರಮಗಳಿಗೆ ಬಳಕೆ ಆಗಿರುತ್ತದೆ ಎಂದು ಮಾಜಿ‌ ಶಾಸಕರೂ ಆದ ರಮೇಶ್ ಬಾಬು ದೂರಿದ್ದಾರೆ.

ಅಧಿಕೃತವಾಗಿ ಸರ್ಕಾರಿ ಕಾರ್ಯಕ್ರಮವನ್ನು ಪ್ರವಾಸ ಕಾರ್ಯಕ್ರಮದಲ್ಲಿ ತೋರಿಸಿ, ವಿಶೇಷ ವಿಮಾನವನ್ನು ತಮ್ಮ ಖಾಸಗಿ ಮತ್ತು ರಾಜಕೀಯ ಕಾರ್ಯಕ್ರಮಗಳಿಗೆ ಬಳಸಿಕೊಂಡು ಸರ್ಕಾರದ ವತಿಯಿಂದ ಹಣ ಪಾವತಿಸಲಾಗಿದೆ. ಇದರ ಜೊತೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳ ಪ್ರವಾಸದ ಜೊತೆಗೆ ಗಣ್ಯ ವ್ಯಕ್ತಿಗಳ ಹೆಸರಿನಲ್ಲಿ ವಿಶೇಷ ವಿಮಾನ ಮತ್ತು ಹೆಲಿಕಾಪ್ಟರ್ ಸೇವೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದ್ದು, ಇಲ್ಲಿಯವರೆಗೆ ಕೋಟ್ಯಾಂತರ ರೂಪಾಯಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಬೆಂಗಳೂರಿನಿಂದ ಒಂದು ತಾಸಿನಲ್ಲಿ ರಸ್ತೆ ಪ್ರಯಾಣ ಮಾಡಬಹುದಾದ ತುಮಕೂರಿನಂತಹ ಪ್ರದೇಶಗಳಿಗೂ ಸರ್ಕಾರಿ ಹಣದಲ್ಲಿ ಹೆಲಿಕಾಪ್ಟರ್ ಬಳಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.


ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿಗಳು ತಮ್ಮ ವೈಯಕ್ತಿಕ ಮತ್ತು ರಾಜಕೀಯ ಕಾರಣಗಳಿಗೆ ಸರ್ಕಾರಿ ಹಣದಲ್ಲಿ ವಿಶೇಷ ವಿಮಾನ ಮತ್ತು ಹೆಲಿಕಾಪ್ಟರ್ ಬಳಕೆ ಮಾಡಿರುವುದನ್ನು ಖಂಡಿಸುತ್ತದೆ ಎಂದಿರುವ ರಮೇಶ್ ಬಾಬು, ಬೇರೆ ಪಕ್ಷಗಳಿಗಿಂತ ತಾನು ವಿಭಿನ್ನ ಎಂದು ಹೇಳಿಕೊಳ್ಳುವ ಭಾರತೀಯ ಜನತಾ ಪಕ್ಷದ ನಾಯಕರು ಸರ್ಕಾರಿ ಹಣವನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳಬಹುದೆಂದು ಪದೇ ಪದೇ ಸಾರ್ವಜನಿಕವಾಗಿ ಸಾಬೀತುಪಡಿಸುತ್ತಿದ್ದಾರೆ ಎಂದು ದೂರಿದ್ದಾರೆ.

ತಮಗೆ ನೈತಿಕತೆ ಇದ್ದರೆ ಮತ್ತು ಸಂಘ ಪರಿವಾರದ ಆದರ್ಶಗಳಿಗೆ ಬದ್ದವಾಗಿದ್ದರೆ ಸರ್ಕಾರಿ ಹಣದಲ್ಲಿ ತಮ್ಮ ಖಾಸಗಿ ಮತ್ತು ರಾಜಕೀಯ ಕಾರಣಗಳಿಗೆ ವಿಶೇಷ ವಿಮಾನ ಹಾಗೂ ಹೆಲಿಕಾಪ್ಟರ್ ದುರ್ಬಳಕೆಯ ಹಗರಣವನ್ನು ನ್ಯಾಯಾಂಗ ತನಿಖೆಗೆ ವಹಿಸಲಿ ಅಥವಾ 26 ಕೋಟಿ ಹಣವನ್ನು ಸರ್ಕಾರಿ ಖಜಾನೆಗೆ ವಾಪಸ್ಸು ತುಂಬಲಿ ಎಂದು ರಮೇಶ್ ಬಾಬು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!