ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ: ಪೌಷ್ಟಿಕ ಆಹಾರ ಕೊರತೆಯಾಗದಂತೆ ಪೂರೈಸಲು ಸೂಚನೆ
ದಾವಣಗೆರೆ; ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರಿಗೆ ನೀಡುವ ಪೌಷ್ಠಿಕ ಆಹಾರದ ಕೊರತೆಯಾಗದಂತೆ ನೋಡಿಕೊಳ್ಳವುಂತೆ ಕೈಗಾರಿಕಾಭಿವೃದ್ಧಿ ಆಯುಕ್ತರು ಮತ್ತು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ನಿರ್ದೇಶಕರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗುಂಜನ್ ಕೃಷ್ಣ ಅವರು ತಿಳಿಸಿದರು.
ಗುರುವಾರ ಜಿಲ್ಲಾ ಪಂಚಾಯತ್ ಕಚೇರಿ ಮುಖ್ಯ ಸಭಾಂಗಣದಲ್ಲಿ ಜರುಗಿದ ಪ್ರಗತಿ ಪರಿಶೀಲನಾ ಸಭೆ ಹಾಗೂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರಿಗೆ ಪೌಷ್ಠಿಕ ಆಹಾರದ ಅಗತ್ಯ ಹೆಚ್ಚಾಗಿದ್ದು, ಅವರಿಗೆ ಕೊರತೆ ಬಾರದಂತೆ ಹಾಗೂ ಆರೋಗ್ಯದಲ್ಲಿ ಏರುಪೇರು ಉಂಟಾದಲ್ಲಿ ತುರ್ತಾಗಿ ಆರೋಗ್ಯ ಸೌಲಭ್ಯ ಒದಗಿಸುವಂತೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಮತ್ತು ಆರೋಗ್ಯಾಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯಲ್ಲಿ ಚಿಕನ್ ಗುನ್ಯಾ ಮತ್ತು ಡೇಂಗ್ಯು ರೋಗ ಹೆಚ್ಚಾಗಿ ಕಂಡು ಬರುತ್ತಿದ್ದು, ಈ ಬಗ್ಗೆ ಆರೋಗ್ಯ ಇಲಾಖೆಯಿಂದ ಮನೆ-ಮನೆಗೂ ತೆರಳಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಅರಿವು ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದರು. ರಾಜ್ಯ ಸರ್ಕಾರದ ಶಕ್ತಿ ಯೋಜನೆಯು ಮಹಿಳೆಯರಿಗೆ ಉಪಯುಕ್ತವಾಗಿದ್ದು, ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ವ್ಯವಸ್ಥಿತ ರೀತಿಯಲ್ಲಿ ಬಸ್‍ಗಳ ವ್ಯವಸ್ಥೆ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಇದ್ದು, ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ವಸತಿ ನಿಲಯದ ಸೌಲಭ್ಯವನ್ನು ಕಲ್ಪಿಸಬೇಕು ಹಾಗೂ ಹಾಸ್ಟೆಲ್‍ಗಳಲ್ಲಿ ಕೊಠಡಿಗಳ ಕೊರತೆಯಿದ್ದು, ಆದಷ್ಟು ಶೀಘ್ರವಾಗಿ ಬಗೆಹರಿಸುತ್ತೇವೆ, ರೈತರಿಗೆ ಬೆಳೆ ವಿಮೆ ಹಾಗೂ ಸರ್ಕಾರವು ಕೃಷಿಗೆ ಮೀಸಲಿರಿಸಿದ ಯೋಜನೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಬೇಕು. ಶಿಕ್ಷಣ ಇಲಾಖೆಯು ಪ್ರಾಥಮಿಕ ಮತ್ತು ಪ್ರೌಡ ಶಾಲೆಯ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಪಠ್ಯ ಹಾಗೂ ಸಮವಸ್ತ್ರದ ಪೂರೈಕೆ ಮಾಡಬೇಕು ಹಾಗೂ ಶಾಲೆ ಬಿಟ್ಟ ಮಕ್ಕಳನ್ನು ಮರು ಕರೆತರುವ ಪ್ರಯತ್ನ ಮಾಡಬೇಕು.
ಜಿಲ್ಲೆಯಲ್ಲಿ ಸರ್ವೇ ಕಾರ್ಯವನ್ನು ಡ್ರೋನ್ ಗಳ ಸಹಾಯದಿಂದ ವೇಗವಾಗಿ ಪೂರ್ಣಗೊಳಿಸಬೇಕು. ಕೇಂದ್ರದ ಎನ್.ಆರ್.ಎಲ್.ಎಂ. ಯೋಜನೆಯು ಗ್ರಾಮೀಣ ಜೀವನೋಪಾಯದ ಉದ್ದೇಶವಾಗಿದ್ದು, ಫಲಾನುಭವಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಸೌಲಭ್ಯಗಳನ್ನು ಕ್ರಮಬದ್ಧವಾಗಿ ಒದಗಿಸಬೇಕು ಎಂದರು. ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮಾತನಾಡಿ ಅಣಜಿ ಗ್ರಾಮದ ಕೆರೆ ತುಂಬಿದಾಗ ರಸ್ತೆಯ ಮೇಲೆ ನೀರು ಹರಿದು ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿತ್ತು. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಮಾಯಕೊಂಡ ಸಮೀಪದ ಕೊಡಗನೂರು ಭದ್ರಾ ಕಾಲುವೆಯ ದುರಸ್ಥಿ ಕಾರ್ಯ ಕೈಗೊಂಡು ಸುತ್ತಮುತ್ತಲಿನ ಜಮೀನುಗಳಿಗೆ ನೀರಾವರಿ ವ್ಯವಸ್ಥೆಗೆ ಅನುಕೂಲ ಮಾಡಿಕೊಡಲಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಕೆ. ಇಟ್ನಾಳ್, ಉಪ ಕಾರ್ಯದರ್ಶಿ ಕೃಷ್ಣ ನಾಯ್ಕ್, ಮುಖ್ಯ ಲೆಕ್ಕಾಧಿಕಾರಿ ಸೌಮ್ಯಶ್ರೀ, ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.