ಡಾ. ಪ್ರಭಾ ಮಲ್ಲಿಕಾರ್ಜುನ್ ಗೆಲುವು: ಕಾಂಗ್ರೆಸ್ ಪಾಲಿಕೆ ಸದಸ್ಯರ ಸಂಭ್ರಮಾಚರಣೆ

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಮುಂಭಾಗ ಪಾಲಿಕೆಯ ಕಾಂಗ್ರೆಸ್ ಸದಸ್ಯರು
ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಈ ವೇಳೆ ಮಾತನಾಡಿದ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ಮಾಜಿ ನಾಯಕ ಹಾಗೂ ಆಡಳಿತ ಪಕ್ಷದ ಸದಸ್ಯ ಗಡಿಗುಡಾಳ್ ಮಂಜುನಾಥ್ ಅವರು. ದಾವಣಗೆರೆ ಜಿಲ್ಲೆಯಲ್ಲಿ ಇದುವರೆಗೆ ಆಗದ ಅಭಿವೃದ್ಧಿ ಕಾರ್ಯಗಳು
ಮುಂದಿನ ದಿನಗಳಲ್ಲಿ ಆಗಲಿವೆ. ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ನೂತನ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ದಾವಣಗೆರೆಯನ್ನು ಸಿಂಗಾಪುರ ಆಗಿಸುವ ಪಣ ತೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕಾರ್ಯನಿರ್ವಹಿಸಲಿದ್ದು, ಅಭಿವೃದ್ಧಿ ಪರ್ವವೇ ಹರಿದು ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದಾವಣಗೆರೆ ಜಿಲ್ಲೆಯಲ್ಲಿ ಕಳೆದ 25 ವರ್ಷಗಳಿಂದಲೂ ಲೋಕಸಭಾ ಸದಸ್ಯರಾಗಿದ್ದವರು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಒಂದೇ ಒಂದು ಹೇಳಿಕೊಳ್ಳುವಂಥ ದೊಡ್ಡ ಕೈಗಾರಿಕೆಯೂ ಸಹ ಇಲ್ಲ. ನೀರಾವರಿ ಯೋಜನೆಗಳು, ಶಿಕ್ಷಣ ಸುಧಾರಣೆ ಸೇರಿದಂತೆ ಯಾವ ಕೆಲಸಗಳು ಆಗಿರಲಿಲ್ಲ. ಈಗ ಕಾಂಗ್ರೆಸ್ ನ ಪ್ರಭಾ ಮಲ್ಲಿಕಾರ್ಜುನ್ ಅವರ ಮೇಲೆ ಸಾಕಷ್ಟು ನಿರೀಕ್ಷೆ ಇದ್ದು, ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ನಿರ್ವಹಿಸಲಿದ್ದಾರೆ. ದಾವಣಗೆರೆ ಉತ್ತರ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಶಾಸಕರಿದ್ದು, ಜಿಲ್ಲಾ ಉಸ್ತುವಾರಿ ಸಚಿವರೂ ಇದ್ದಾರೆ. ಹಾಗಾಗಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಗಲಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿಯೂ ಏಳು ಶಾಸಕರಿದ್ದು, ಲೋಕಸಭಾ ಸದಸ್ಯರ ವೇಗಕ್ಕೆ ತಕ್ಕಂತೆ ಕೆಲಸ ನಿರೀಕ್ಷೆ ಮಾಡಬಹುದು. ದಾವಣಗೆರೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿಯೂ ಅಭಿವೃದ್ಧಿ ಕಾರ್ಯಗಳಿಗೆ ಚುರುಕು ಪಡೆಯಲಿದ್ದು, ಜನರು ಸಹ ಇದನ್ನೇ ನಿರೀಕ್ಷಿಸಿದ್ದಾರೆ. ಬಿಜೆಪಿಯು ಅಧಿಕಾರ ನಡೆಸಿದರೂ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಲಿಲ್ಲ. ಮುಂಬರುವ ದಿನಗಳಲ್ಲಿ ಆಗುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಜನರೇ ಖುಷಿಪಡಲಿದ್ದಾರೆ ಎಂದು ಹೇಳಿದರು.

ಸಂಭ್ರಮಾಚರಣೆ ವೇಳೆ ಪಾಲಿಕೆಯ ಮೇಯರ್ ವಿನಾಯಕ್ ಪೈಲ್ವಾನ್, ಕಾಂಗ್ರೆಸ್ ಪಾಲಿಕೆಯ ಸದಸ್ಯರಾದ ಅಬ್ದುಲ್ ಲತೀಫ್, ಕೆ. ಚಮನ್ ಸಾಬ್, ಸವಿತಾ ಹುಲ್ಲುಮನಿ ಗಣೇಶ್, ಮೀನಾಕ್ಷಿ ಜಗದೀಶ್, ಕಾಂಗ್ರೆಸ್ ಮುಖಂಡರಾದ ಹುಲ್ಲುಮನಿ ಗಣೇಶ್, ಜಗದೀಶ್, ಗೋಪಿನಾಯ್ಕ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!