ರಾಜ್ಯದ ಉಚಿತ ಅಕ್ಕಿ, ಕೇಂದ್ರದ 29 ರೂ.ಗಳ ಅಕ್ಕಿಯಿಂದ ಭತ್ತದ ಬೆಲೆ ಕುಸಿತ: ಹುಚ್ಚವ್ವನಹಳ್ಳಿ ಮಂಜುನಾಥ್ ಆರೋಪ

ಉಚಿತ ಅಕ್ಕಿ

ದಾವಣಗೆರೆ– ರಾಜ್ಯ ಸರ್ಕಾರದ ಉಚಿತ ಅಕ್ಕಿ ವಿತರಣೆ, ಕೇಂದ್ರದಿಂದ 29 ರೂ.ಕೆಜಿಯಂತೆ ಅಕ್ಕಿ ವಿತರಣಾ ಕ್ರಮಗಳಿಂದ ರಾಜ್ಯದಲ್ಲಿ ಭತ್ತದ ಬೆಲೆ ಕುಸಿತ ಕಂಡಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಳ್ಳಿ ಮಂಜುನಾಥ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭತ್ತದ ಬೆಲೆ ಕುಸಿತದಿಂದಾಗಿ ರೈತರಿಂದ ಭತ್ತ ಖರೀದಿಸಿದ ಖರೀದಿದಾಗರು ಹಣ ಕೊಡಲು ಸಾಧ್ಯವಾಗುತ್ತಿಲ್ಲ. ಅವರೂ ಸಂಕಷ್ಟದಲ್ಲಿದ್ದಾರೆ. ಇತ್ತ ಭತ್ತದ ಹಣ ಬಾರದೇ ರೈತರೂ ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರ ಉಚಿತ ಹಾಗೂ ಕಡಿಮೆ ದರದಲ್ಲಿ ಅಕ್ಕಿ ವಿತರಿಸಲು ನಮ್ಮ ಅಭ್ಯಂತರವಿಲ್ಲ. ಆದರೆ ಇದಕ್ಕೂ ಮೊದಲು ರೈತರ ಬೆಳೆಗೆ ಈ ನಿರ್ಧಾರ ಅನುಕೂಲವೇ ಎಂದು ಗಮನದಲ್ಲಿಟ್ಟುಕೊಂಡು ಘೋಷಣೆ ಮಾಡಬೇಕು ಎಂದರು.
ಕೇಂದ್ರ ಸರ್ಕಾರ ಭತ್ತಕ್ಕೆ 2180 ರೂ. ಬೆಂಬಲ ಬೆಲೆ ಘೋಷಣೆ ಮಾಡಿದೆ. ಇದಕ್ಕೆ ಕನಿಷ್ಟ ಬೆಂಬಲ ಬೆಲೆ ಜಾರಿಗೊಳಿಸಬೇಕು. ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಖರೀದಿಸಿದವರ ಪರವಾನಗಿ ರದ್ದು ಹಾಗೂ ದಂಡ ವಿಧಿಸುವ ಕಾಯ್ದೆ ಜಾರಿಯಾಗಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಈಗಾಗಲೇ ಬಗರ್ ಹುಕ್ಕುಂ ಅರ್ಜಿಗಳನ್ನು ಶೀಘ್ರ ಇತ್ಯರ್ಥಗೊಳಿಸಿ ಹಕ್ಕುಪತ್ರ ನೀಡಬೇಕು. ಫಾರಂ ನಂ.57ರಲ್ಲಿನ ಅಂಶಗಳು ಮಾರಕವಾಗಿದ್ದು ಅವುಗಳನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಚನ್ನಗಿರಿ ತಾಲ್ಲೂಕಿನಲ್ಲಿ ಎಪಿಎಂ ಮಿಲ್‌ಗೆ ಲೀಸ್‌ಗೆ ಭೂಮಿ ನೀಡಲಾಗಿದ್ದು, ಲೀಸ್ ಅವಧಿ ಈಗಾಗಲೇ ಮುಗಿದ್ದಿದ್ದು, ಮತ್ತೆ ಲೀಸ್ ಮುಂದುವರೆಸದೆ ಈ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದ ರೈತರಿಗೆ ಬಗರ್ ಹುಕುಂ ಹಕ್ಕುಪತ್ರ ನೀಡಬೇಕು ಎಂದರು.
ಜಗಳೂರು ತಾಲ್ಲೂಕಿನಲ್ಲಿ 80ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಜಿಲ್ಲಾಡಳಿತ ಬೋರ್‌ವೆಲ್‌ಗಳನ್ನು ಕೊರೆದು ನೀರು ವಿತರಣೆಗೆ ಮುಂದಾಗಬೇಕು. ದನಕರುಗಳಿಗಾಗಿ ಗೋಶಾಲೆ ಆರಂಭಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಅಕ್ರಮ-ಸಕ್ರಮ ವಿದ್ಯುತ್ ಯೋಜನೆ ಮುಂದುವರೆಸಬೇಕು. ನಿವೇಶನ ರಹಿತ ಸಾವಿರಾರು ಕುಟುಂಬಗಳಿದ್ದು, ಜಿಲ್ಲಾ ಪಂಚಾಯ್ತಿಂದ ನಿವೇಶನ ನೀಡಬೇಕು ಎಂದು ಒತ್ತಾಯಿಸಿದರು.
ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇದೇ 19ರಂದು ಚನ್ನಗಿರಿ ತಾಲ್ಲೂಕು ನಲ್ಲೂರು ಗ್ರಾಮದಿಂದ ಬೃಹತ್ ಪಾದಯಾತ್ರೆ ಮೂಲಕ ಫೆ.22ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೈದಾಳ್ ರವಿಕುಮಾರ್, ಯಲೋದಹಳ್ಳಿ ರವಿಕುಮಾರ್, ಯರವನಾಗತಿಹಳ್ಳಿ ಬಾಲಾಜಿ, ಹಸ್ತಫನಹಳ್ಳಿ ಗಂಡುಗಲಿ, ನಿಟುವಳ್ಳಿ ಪೂಜಾರ್ ಅಂಜಿನಪ್ಪ, ಕಲ್ಕುಂಟೆ ಬಸಣ್ಣ, ಕೋಗಲೂರು ಕುಮಾರ್, ಹೂವಿನಮಡು ನಾಗರಾಜ್, ಕೃಷ್ಣಮೂರ್ತಿ, ಹನುಮಂತ್, ಪೂಜಾರ್ ನಾಗಣ್ಣ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!