ಹರಿಹರ ಹಾಸ್ಟೆಲ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಸಹಪಾಠಿಯ ಕಿರುಕುಳ ಕಾರಣ
ಹರಿಹರ: ಸಹಪಾಠಿಗಳ ಕಿರುಕುಳದಿಂದಲೇ ನಗರದ ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ಮಹಿಳೆಯರ ಹಾಸ್ಟೆಲ್ ನಿವಾಸಿ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ದಾವಣಗೆರೆ ತಾಲ್ಲೂಕು ಎಚ್.ಬಸಾಪುರದ ನಿವಾಸಿ ಶಿವಣ್ಣ ಅವರ ಪುತ್ರಿ ವರ್ಷಾ ಮಂಗಳವಾರ ಹಾಸ್ಟೆಲ್‌ನ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದರು. ವರ್ಷಾಳ ಪೋಷಕರು ಹಾಸ್ಟೆಲ್ ವಾರ್ಡನ್ ಹಾಗೂ ಇಲಾಖೆ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದರು.
ನಗರದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿದ್ದ ವರ್ಷಾಳ ಸಹಪಾಠಿ ಕುರುಬರಹಳ್ಳಿ ರಮೇಶ್ ಕಾರಣ ಎಂದು ಮೃತ ವರ್ಷಾ ಅವರ ಅಕ್ಕ ರಂಜಿತಾ ಬುಧವಾರ ನಗರ ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಪ್ರೀತಿ ಮಾಡುವುದಾಗಿ ನಂಬಿಸಿ ನನ್ನ ತಂಗಿಗೆ ಫೋನ್ ಕೊಡಿಸಿದ್ದ ರಮೇಶ್ ಹಲವು ಬಾರಿ ಫೋನ್ ಮಾಡಿ ಬೈಯುತ್ತಾ ಪೀಡಿಸುತ್ತಿದ್ದ. ಹಾಸ್ಟೆಲ್‌ನಿಂದ ಹೊರಕ್ಕೆ ಬರುವಂತೆ ಬಲವಂತ ಮಾಡುತ್ತಿದ್ದ, ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದ. ಈ ಎಲ್ಲಾ ವಿಷಯವನ್ನು ತಂಗಿ ಮಂಗಳವಾರ ಬೆಳಿಗ್ಗೆ 11.30ಕ್ಕೆ ನನಗೆ ಫೋನ್ ಮಾಡಿ ಹೇಳಿಕೊಂಡು ಅತ್ತಿದ್ದಳು. ನನ್ನ ತಂಗಿಯ ಹಣೆ, ಕುತ್ತಿಗೆ, ಕೈಯ ಮೇಲೆ ಗಾಯದ ಗುರತುಗಳಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.