ಹರೀಶ್ ಹಳ್ಳಿ ಸಾವು ಆತ್ಮಹತ್ಯೆಯಲ್ಲ ವ್ಯವಸ್ಥಿತ ಕೊಲೆ.! ಸಿಬಿಐ ತನಿಖೆಗೆ ಒತ್ತಾಯಿಸಿದ ಸ್ನೇಹಿತರ ಬಳಗ

ಹರೀಶ್ ಹಳ್ಳಿ ಸಾವು ಆತ್ಮಹತ್ಯೆಯಲ್ಲ ವ್ಯವಸ್ಥಿತ ಕೊಲೆ.! ಸಿಬಿಐ ತನಿಖೆಗೆ ಒತ್ತಾಯಿಸಿದ ಸ್ನೇಹಿತರ ಬಳಗ

ದಾವಣಗೆರೆ: ಸಾಮಾಜಿಕ ಕಾರ್ಯಕರ್ತ ಹರೀಶ್ ಹಳ್ಳಿ ಅವರ ಸಾವಿನ ಪ್ರಕರಣವನ್ನು ರಾಜ್ಯ ಸರ್ಕಾರವು ಸಿಬಿಐಗೆ ವಹಿಸುವಂತೆ ಹರೀಶ್ ಹಳ್ಳಿ ಸ್ನೇಹಿತ ಬಳಗ ಒತ್ತಾಯಿಸಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹರೀಶ್ ಹಳ್ಳಿ ಸ್ನೇಹಿತ, ಸಾಮಾಜಿಕ ಕಾರ್ಯಕರ್ತ ಗುರುಪಾದಯ್ಯ ಮಠದ್, ಹರೀಶ್ ಹಳ್ಳಿ ಅವರ ಸಾವು ಆತ್ಮಹತ್ಯೆಯಲ್ಲ ವ್ಯವಸ್ಥಿತ ಕೊಲೆ ಎಂದು ಅವರ ಕುಟುಂಬದವರು ಈಗಾಗಲೇ ದೂರು ನೀಡಿದ್ದಾರೆ. ತಪ್ಪಿತಸ್ಥ ಪೊಲೀಸರನ್ನು ಅಮಾನತು ಮಾಡಲಾಗಿದೆ. ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಆದರೆ ಸಿಐಡಿ ತನಿಖೆಯಿಂದ ನ್ಯಾಯ ಸಿಗುವ ಭರವಸೆ ಇಲ್ಲ ಎಂದು ಹೇಳಿದರು.

ಹರೀಶ್ ಹಳ್ಳಿ ಸಾವಿನ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ. ಇದೊಂದು ವ್ಯವಸ್ಥಿತ ಹತ್ಯೆ, ಇದರ ಹಿಂದೆ ಕಾಣದ ಕೈಗಳಿವೆ ಎಂಬ ಅನುಮಾನ ನಮ್ಮದಾಗಿದೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

ಹರೀಶ್ ಅವರ ಮೇಲೆ ಎಫ್ ಐ ಆರ್ ದಾಖಲಾಗ ಮೂರು ದಿನಗಳ ನಂತರ ಅದೂ ಮಧ್ಯರಾತ್ರಿ ಅವರ ಮನೆಗೆ ಹೋಗಿ ಅವರನ್ನು ಅರೆಸ್ಟ್ ಮಾಡುವ ಅಗತ್ಯ ಪೋಲೀಸರಿಗೆ ಇತ್ತೇ ಹಗಲು ಹೊತ್ತಿನಲ್ಲಿಯೇ ಅವರನ್ನು ಕರೆ ತರಬಹುದಿತ್ತು ಎಂದವರು ಪ್ರಶ್ನಿಸಿದರು.

ಅವರ ಮೇಲೆ ದಾಖಲಾಗಿದ್ದು 420 ಪ್ರಕರಣ. ಅದಕ್ಕಾಗಿ ಅವರು ಓಡಿ ಹೋಗುವ ಅಗತ್ಯವೂ ಇರಲಿಲ್ಲ. ಹರೀಶ್ ಹಳ್ಳಿ ಧೈರ್ಯವಂತ, ಹೋರಾಟಗಾರ. ಇಂತಹ ಚಿಕ್ಕ ಕೇಸ್ಗೆ ಹೆದರಿ ಓಡಿಹೋಗುವವನಲ್ಲ. ಆತ್ಮಹತ್ಯೆ ಮಾಡಿಕೊಳ್ಳುವ ಜಾಯಮಾನದವರೂ ಅಲ್ಲ ಎಂದರು.

ಕೊರೊನಾ ಸಮಯದಲ್ಲಿ ಅನಾಥ ಶವಗಳ ಮಾರಾಟ ಮಾಫಿಯಾ ಬಗ್ಗೆ ಹರೀಶ್ ಹಳ್ಳಿ ಬಯಲಿಗೆಳೆದ್ದರು. ಅಕ್ರಮ ಭೂ ಮಾಫಿಯಾ, ಅಕ್ರಮ ಗಣಿಗಾರಿಕೆ ಬಗ್ಗೆಯೂ ಅವರೂ ಹೋರಾಟ ನಡೆಸಿದ್ದರು. ಮೊಕದ್ದಮೆಗಳನ್ನೂ ಹೂಡಿದ್ದರು.ಇದರಿಂದಾಗಿ ಅವರು ಉನ್ನತ ಅಧಿಕಾರಿಗಳು ಹಾಗೂ ಕೆಲ ಪಟ್ಟಭದ್ರ ಹಿತಾಸಕ್ತಿಗಳ ವಿರೋಧ ಎದುರಿಸುತ್ತಿದ್ದರು. ಇಂದು ಅವರ ಸಾವು ಗೊಂದಲದ ಗೂಡಾಗಿದೆ ಹೋರಾಟ ಮಾಡುವವರ ಜೀವನಕ್ಕೆ ಬೆಲೆಯೇ ಇಲ್ಲವೇ ಎಂಬಂತಾಗಿದೆ. ಅವರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ಅಗತ್ಯವಿದೆ. ಈ ಹಿನ್ನೆಲೆಯಲ್ಲ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಇಲ್ಲದಿದ್ದರೆ ಅವರ ಪತ್ನಿಯೊಂದಿಗೆ ಕಾನೂನು ಹೋರಾಟ ನಡೆಸಲಾಗುವುದು ಎಂದರು.

ಎಂ.ಜಿ. ಶ್ರೀಕಾಂತ್ ಮಾತನಾಡಿ, ಹರೀಶ್ ಹಳ್ಳಿ ಅವರು ಭ್ರಷ್ಟಾಚಾರದ ಬಗ್ಗೆ ಹೋರಾಟ ನಡೆಸಿ, ಹಲವಾರು ಕೇಸುಗಳನ್ನು ದಾಖಲಿಸಿದ್ದರು. ಅವುಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕಿದೆ ಎಂದರು.

ಗಿರೀಶ್ ದೇವರ ಮನೆ ಮಾತನಾಡಿ, ಹರೀಶ್ ಅವರ ಸಾವಿನಿಂದಾಗಿ ಸಾಮಾಜಿಕ ಹೋರಾಟಗಾರರಲ್ಲಿ ಭಯ ಹುಟ್ಟಿಸುವ ವಾತಾವರಣ ನಿರ್ಮಾಣವಾಗಿದೆ. ಪೊಲೀಸ್ ಇಲಾಖೆ ಈ ಪ್ರಕರಣದಲ್ಲಿ ಗಂಭೀರ ಹೆಜ್ಜೆ ಇಡಬೇಕಿದೆ ಎಂದರು.

ಸಾಮಾಜಿಕ ಹೋರಾಟಗಾರರು ಪೊಲೀಸರನ್ನು ನಂಬಿಯೇ ಹೋರಾಟಕ್ಕೆ ಮುಂದಾಗುತ್ತಾರೆ. ಈ ರೀತಿಯಾದರೆ ಯಾರನ್ನು ನಂಬಬೇಕು. ಇದು ಕೇವಲ ಹರೀಶ್ ಹಳ್ಳಿಯಂತಹ ಹೋರಾಟಗಾರನ ವಿಷಯವಲ್ಲ.

ರಾಜ್ಯಾದ್ಯಂತ ಹೋರಾಟಗಾರರ ಪ್ರಶ್ನೆಯಾಗಿದೆ. ಈ ಪ್ರಕರಣ ಸಾಮಾಜಿಕ ಹೋರಾಟಗಾರರಮೇಲೆ ಪರಿಣಾಮ ಬೀರುತ್ತದೆ. ಮುಂದೊಂದು ದಿನ ಹೋರಾಟಗಾರರೇ ಇಲ್ಲವಾಗಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತರಾದ ಮಲ್ಲಿಕಾರ್ಜುನ್ ಇಂಗಳೇಶ್ವರ, ಚೇತನ್, ಬಲ್ಲೂರು ರವಿಕುಮಾರ್, ನಾಗರಾಜ ಸುರ್ವೆ, ವೀರಾಚಾರ್, ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!