ಪೊಲೀಸರು ಶೋಧಕ್ಕೆ ಮುಂದಾಗುತ್ತಿದ್ದಂತೆ ಮನೆಯೊಳಗೆ ಭೀಕರ ಸ್ಫೋಟ

huge-blast-huge-blast-destroys-home-in-washington-dc-suburbs

ಅಮೆರಿಕದ ವಾಷಿಂಗ್ಟನ್ ಡಿಸಿಯ ಉಪನಗರದ ಮನೆಯೊಂದರಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಪೊಲೀಸರು ಶೋಧ ವಾರಂಟ್ ಜಾರಿಗೊಳಿಸುತ್ತಿದ್ದಾಗ ಈ ಸ್ಫೋಟ ನಡೆದು ಒಂದು ಮನೆ ಸಂಪೂರ್ಣ ನಾಶವಾಗಿದೆ. ಸರ್ಚ್ ವಾರಂಟ್ ಜಾರಿಗೊಳಿಸಲು ಮನೆಯೊಳಗೆ ಪ್ರವೇಶಿಸಲು ಪ್ರಯತ್ನಿಸಿದ ಅಧಿಕಾರಿಗಳ ಮೇಲೆ ಮನೆಯೊಳಗಿನ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದಾನೆ. ಬಳಿಕ ಸ್ಫೋಟ ನಡೆದಿದೆ ಎಂದು ವರ್ಜೀನಿಯಾದ ಆರ್ಲಿಂಗ್ಟನ್ ಪೊಲೀಸರು ತಿಳಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಮನೆಯ ಪರಿಶೀಲನೆಗಾಗಿ ಪೊಲೀಸರು ಆಗಮಿಸಿದ ಈ ವೇಳೆ ಸ್ಫೋಟ ಸಂಭವಿಸಿದೆ. ಸೋಮವಾರ ರಾತ್ರಿ ಸಂಭವಿಸಿದ ಈ ಘಟನೆಯಿಂದ ಸಾವುನೋವುಗಳು ಸಂಭವಿಸಿವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಶಂಕಿತನನ್ನು ಬಂಧಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಸ್ಥಳೀಯರು, ಸ್ಫೋಟದಿಂದ ತಮ್ಮ ಮನೆಗಳು ನಡುಗುತ್ತಿರುವಂತೆ ಭಾಸವಾಯಿತು ಎಂದು ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಇಲಾಖೆ ಕೂಡಲೇ ತಲುಪಿದ್ದು, ಅಧಿಕಾರಿಗಳು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

“ಅಧಿಕಾರಿಗಳು ನಿವಾಸದಲ್ಲಿ ಶೋಧ ನಡೆಸಲು ವಾರಂಟ್ ಜಾರಿಗೊಳಿಸಲು ಪ್ರಯತ್ನಿಸುತ್ತಿದ್ದಾಗ ಶಂಕಿತನು ಮನೆಯೊಳಗೆ ಹಲವಾರು ಸುತ್ತು ಗುಂಡು ಹಾರಿಸಿದ. ಬಳಿಕ ನಿವಾಸದಲ್ಲಿ ಸ್ಫೋಟ ಸಂಭವಿಸಿದೆ ಮತ್ತು ಸ್ಫೋಟದ ಸಂದರ್ಭಗಳ ಬಗ್ಗೆ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ” ಎಂದು ಆರ್ಲಿಂಗ್ಟನ್ ಕೌಂಟಿ ಕಚೇರಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಿಳಿಸಿದೆ.

Video of the explosion. Hope everyone was out of the house#Arlington #ballston @ARLnowDOTcom @RealTimeNews10 pic.twitter.com/JSZE7LkoTD

— c “” maj (@connormaj) December 5, 2023

ಪೊಲೀಸರು ಕೂಡಲೇ ಕೆಲವು ನಿವಾಸಿಗಳನ್ನು ಸ್ಥಳಾಂತರಿಸಿದರು. “ನಾನು 50 ವರ್ಷಗಳಿಂದ ಇಲ್ಲಿದ್ದೇನೆ ಮತ್ತು ನಾನು ಇಂತಹ ಶಬ್ಧವನ್ನು ಎಂದಿಗೂ ಕೇಳಿಲ್ಲ. ಇದು ಹೊಸ ಅನುಭವ” ಎಂದು ಸ್ಥಳೀಯ ನಿವಾಸಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ʼʼ2011ರಲ್ಲಿ ಡಿಸಿ ಪ್ರದೇಶದಲ್ಲಿ ಸಂಭವಿಸಿದ ಭೂಕಂಪದಂತೆಯೇ ಇದು ಭಾಸವಾಯಿತುʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. ಈ ಪ್ರದೇಶವು ವಿಲ್ಸನ್ ಬೌಲೆವಾರ್ಡ್‌ನ ಉತ್ತರದಲ್ಲಿರುವ ಬಾಲ್‌ಸ್ಟನ್‌-ಎಂಯು ಮೆಟ್ರೋ ನಿಲ್ದಾಣದಿಂದ ಅರ್ಧ ಮೈಲಿ ದೂರದಲ್ಲಿದೆ.

ಸ್ಫೋಟದ ತೀವ್ರತೆಗೆ ಕನಿಷ್ಠ 10ಕ್ಕಿಂತ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ತನಿಖಾಧಿಕಾರಿಗಳು ತನಿಖೆ ನಡೆಸಲು ಪ್ರಾರಂಭಿಸಿದ್ದಾರೆ. ಸ್ಫೋಟಕ್ಕೆ ಕಾರಣವನ್ನು ಇನ್ನೂ ನಿರ್ಧರಿಸಲಾಗಿಲ್ಲ. ಸದ್ಯ ಸಣ್ಣ ಪುಟ್ಟ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲ ವಿಧದಲ್ಲೂ ತನಿಖೆ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ. ಸ್ಫೋಟದ ಮೊದಲು ಯಾವುದೇ ಅನಿಲ ಸೋರಿಕೆಯಾದ ಬಗ್ಗೆ ಮಾಹಿತಿ ಇಲ್ಲ.

ಮನೆಯಲ್ಲಿ ಮದ್ದುಗುಂಡುಗಳು ಮತ್ತು ಬಂದೂಕುಗಳನ್ನು ದಾಸ್ತಾನು ಇಡಲಾಗಿತ್ತು ಎಂದು ನೆರೆಹೊರೆಯವರು ಹೇಳಿದ್ದಾರೆ. ಆದರೆ ಇದು ಸ್ಫೋಟಕ್ಕೆ ಕಾರಣವಾಗಿರಲಾರದು ಎಂದು ಅಗ್ನಿಶಾಮಕ ಅಧಿಕಾರಿಗಳು ಹೇಳುತ್ತಾರೆ. ಸದ್ಯ ಮನೆ ಇದ್ದ ಜಾಗದಲ್ಲಿ ಅವಶೇಷ ಮಾತ್ರ ಇದೆ. “ಇದು ಕೇವಲ ಕೇವಲ ಇಟ್ಟಿಗೆಗಳ ರಾಶಿ. ಮನೆಯಲ್ಲಿ ಏನೂ ಉಳಿದಿಲ್ಲ” ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಸದ್ಯ ಸ್ಫೋಟದ ವಿಡಿಯೊ ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!