ಅನುಕಂಪದ ಉದ್ಯೋಗಕ್ಕಾಗಿ ಪತಿಯ ಕೊಲೆ: ಪತ್ನಿಗೆ ಜೀವಾವಧಿ ಶಿಕ್ಷೆ

ಅನುಕಂಪದ ಉದ್ಯೋಗಕ್ಕಾಗಿ ಪತಿಯ ಕೊಲೆ: ಪತ್ನಿಗೆ ಜೀವಾವಧಿ ಶಿಕ್ಷೆ

ಚಾಯ್‌ಬಾಸ: ಅನುಕಂಪದ ಉದ್ಯೋಗ ಪಡೆಯಲು ಪತಿಯನ್ನು ಕೊಲೆ ಮಾಡಿದ ಪತ್ನಿಗೆ ಜಾರ್ಖಾಂಡ್‌ನ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿದೆ.
ಅನಿತಾ ಕುಮಾರಿ ಅಲಿಯಾಸ್‌ ಅನಿತಾ ಸಿಂಗ್‌ ಎಂಬವರೇ ಜೀವಾವಧಿ ಶಿಕ್ಷೆಗೆ ಗುರಿಯಾದವರಾಗಿದ್ದು, ರೈಲ್ವೆಯಲ್ಲಿ ಉದ್ಯೋಗಿಯಾಗಿದ್ದ ತಮ್ಮ ಪತಿ ರಾಜೀವ್‌ ಕುಮಾರ್‌ ಸಿಂಗ್‌ ಎಂಬವರನ್ನು 2017ರ ಜನವರಿ 25 ರಂದು ಕೊಲೆ ಮಾಡಿದ್ದರು. ಅನುಕಂಪದ ಆಧಾರದಲ್ಲಿ ಪತಿಯ ನೌಕರಿ ತನಗೆ ಸಿಗಲಿದೆ ಎನ್ನುವ ಕಾರಣಕ್ಕೆ ಕೃತ್ಯ ಎಸಗಿದ್ದರು.
ಕೊಲೆ ಮಾಡಿದ ಬಳಿಕ ಮೃತದೇಹವನ್ನು ಸೀಲಿಂಗ್‌ ಫ್ಯಾನ್‌ಗೆ ನೇತು ಹಾಕಿದ್ದರು. ಪ್ರಕರಣದಲ್ಲಿ ಅನಿತಾ ಪಾತ್ರವಿರುವುದು ತನಿಖೆಯಲ್ಲಿ ಗೊತ್ತಾದ ಬಳಿಕ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.
ರೈಲ್ವೆಯ ಕ್ವಾಟ್ರಸ್‌ನಲ್ಲಿ ತನ್ನ ಮಗಳೊಂದಿಗೆ ದಂಪತಿ ವಾಸವಾಗಿದ್ದರು. ಇಲ್ಲಿಯೇ ಅನಿತಾ ಪತಿಯನ್ನು ಕೊಲೆ ಮಾಡಿ ಸೀಲಿಂಗ್‌ ಫ್ಯಾನ್‌ಗೆ ತೂಗು ಹಾಕಿದ್ದರು.
2007ರಲ್ಲಿ ರಾಜೀವ್‌ – ಅನಿತಾ ಅವರ ವಿವಾಹ ನಡೆದಿತ್ತು. ಆದರೆ ಅವರಿಬ್ಬರ  ನಡುವಿನ ಸಂಬಂಧ ಚೆನ್ನಾಗಿರಲಿಲ್ಲ. ಹೀಗಾಗಿ ಬೇರೆ ಬೇರೆಯಾಗಿ ವಾಸ ಮಾಡುತ್ತುದ್ದರು. ಈ ನಡುವೆ 2013ರಲ್ಲಿ ರಾಜೀವ್‌ ಅವರಿಗೆ ರೈಲ್ವೆಯಲ್ಲಿ ಡಿ ಗ್ರೂಪ್‌ ನೌಕರನಾಗಿ ನೌಕರಿ ಲಭಿಸಿತ್ತು. ಹೀಗಾಗಿ ಅನಿತಾ ಮತ್ತೆ ತಮ್ಮ ಪತಿ ಬಳಿ ಬಂದಿದ್ದರು.
ಸುದೀರ್ಘ ತನಿಖೆ ಬಳಿಕ ಇದೀಗ ಅನಿತಾ ಅವರ ಮೇಲಿದ್ದ ಆರೋಪ ಸಾಬೀತಾಗಿದ್ದು, ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಲಯದ ನ್ಯಾಯಮೂರ್ತಿ ವಿಶ್ವನಾಥ್‌ ಶುಕ್ಲಾ ಅನಿತಾಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಜತೆಗೆ 10,000 ದಂಡವನ್ನೂ ವಿಧಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!