ಭಾರತದ ಭವಿಷ್ಯವಾಗಿರುವ ಮಕ್ಕಳ ಪ್ರತಿಭೆಯನ್ನು ಗುರುತಿಸುವ ಕಾರ್ಯವಾಗಬೇಕು : ರಾಜೇಶ್ವರಿ ಎನ್. ಹೆಗಡೆ

ದಾವಣಗೆರೆ: ದೇಶದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ ಆದರೆ ಅವುಗಳನ್ನು ಸರಿಯಾಗಿ ಗುರುತಿಸುವ ಮತ್ತು ಪೋಷಿಸುವ ಕೆಲಸವಾಗಬೇಕಾಗಿದೆ, ಪ್ರತಿಭೆಗಳನ್ನುಪ್ರೋತ್ಸಾಹಿಸುವುದು ಮತ್ತು ಪೋಷಿಸುವುದು ಆಯಾ ಸಂಸ್ಥೆಗಳ ನೈತಿಕ ಜವಾಬ್ದಾರಿ. ಅಂತಹ ಜವಾಬ್ದಾರಿಯನ್ನು ದಾವಣಗೆರೆ ಜಿಲ್ಲಾ ವಕೀಲರ  ಸಂಘ ಸಮರ್ಥವಾಗಿ ನಿಭಾಯಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರನ್ಯಾಯಾಧೀಶರಾದ ರಾಜೇಶ್ವರಿ ಎನ್ ಹೆಗಡೆ ತಿಳಿಸಿದರು.ಅವರು ವಕೀಲರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ 77ನೇ  ಸ್ವಾತಂತ್ರ‍್ಯ ದಿನಾಚರಣೆ ಮತ್ತು ವಕೀಲರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದರು.

ಸ್ವಾತಂತ್ರ‍್ಯ ಸಂಗ್ರಾಮದಿಂದ  ವರ್ತಮಾನ ಭಾರತದ ರಾಜಕಾರಣದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿರುವ ವಕೀಲರ ಸಮುದಾಯ ಅಭಿನಂದನೀಯವಾಗಿದೆ. ಹಾಗೂ ಹತ್ತು ವರ್ಷಗಳಿಗೂ ಹೆಚ್ಚು ಅವಧಿ ಕಾಲ ಇತ್ಯರ್ಥವಾಗದೇ ಇರುವ ಬಾಕಿ ಪ್ರಕರಣಗಳಿಗೆ ಆದ್ಯತೆ ನೀಡಬೇಕೆಂದರು. ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ರಾಮಚಂದ್ರಕಲಾಲ್, ಎನ್. ಜಯದೇವನಾಯ್ಕ, ಕೆ.ಎನ್. ನಾರಪ್ಪ, ಡಿ.ಪಿ. ಬಸವರಾಜ ಮತ್ತು  ರಜ್ವಿ ಖಾನ್‌ರವರು ಸ್ವಾತಂತ್ರ‍್ಯ ಭಾರತದ ಅವಲೋಕನವನ್ನು ಮಾಡುತ್ತಲೇ ವರ್ತಮಾನ ಭಾರತದ ಕಡೆಗೆ ಎಚ್ಚರಿಕೆಯ ಹೆಜ್ಜೆಗಳನ್ನು ಇಡುವುದರ ಕುರಿತು ಆತ್ಮವಿಮರ್ಶೆಯ ಮಾತುಗಳನ್ನಾಡಿದರು.

ಕಾರ್ಯಕ್ರಮದ ಅಥ್ಯಕ್ಷತೆ  ವಹಿಸಿ ಮಾತನಾಡಿದ ಜಿಲ್ಲಾ ವಕೀಲ ಸಂಘದ ಅಧ್ಯಕ್ಷರಾದ ಎಲ್.ಹೆಚ್. ಅರುಣ್‌ಕುಮಾರ್ ಅವರು  ಸ್ವಾತಂತ್ರ‍್ಯ ಪೂರ್ವದಿಂದ  ಸ್ವಾತಂತ್ರೋತ್ತರ  ನಿರ್ಮಾಣದಲ್ಲಿ ನ್ಯಾಯವಾದಿಗಳ ಪಾತ್ರ ಅನನ್ಯವಾದುದು, ನ್ಯಾಯವಾದಿಗಳು ಮತ್ತು ನ್ಯಾಯಾಂಗದ ಸಿಬ್ಬಂದಿಗಳ ಸಹಕಾರದಿಂದ ಮುಂದಿನ ದಿನಗಳಲ್ಲಿ ಇನ್ನೂ ಹಲವು ಉತ್ತಮ ಕಾರ್ಯಗಳನ್ನು ಸಂಘವು ಕೈಗೆತ್ತಿಕೊಳ್ಳಲಿದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರುಗಳಾದ ವಿಜಯಾನಂದ, ಶ್ರೀಪಾದ್, ಪ್ರವೀಣ್‌ಕುಮಾರ್ ಹಾಗೂ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ದಶರಥ್ ಮುಂತಾದವರು ಉಪಸ್ಥಿತರಿದ್ದರು.

ವಕೀಲರಾದ ಭಾವನಾ ಪತಂಗಿ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ  ಬಸವರಾಜ್ ಗೋಪನಾಳ್ ಸ್ವಾಗತಿಸಿದರು, ಕಾರ್ಯದರ್ಶಿ ಎಸ್. ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು. ಸಹಕಾರ್ಯದರ್ಶಿ ಎ.ಎಸ್. ಮಂಜುನಾಥ್ ವಂದಿಸಿದರು, ಸಮಾರಂಭದಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರಾದ ಭಾಗ್ಯಲಕ್ಷ್ಮಿ, ವಾಗೀಶ್ ಕಟಗಿಹಳ್ಳಿ ಮಠ, ಎಲ್. ನಾಗರಾಜ್,ಮಧುಸೂದನ್, ನೀಲಕಂಠಯ್ಯ, ಸಂತೋಷ್ ಕುಮಾರ್,ಚೌಡಪ್ಪ, ಅಜಯ್ ಆವರಗೆರೆ, ಮುಂತಾದವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!