ದಾವಣಗೆರೆ : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜುಲೈ 20 ರಿಂದ ಸೆಪ್ಟೆಂಬರ್ 6 ವರೆಗೆ ನಗರದ ಅರಳಿಮರ ಸರ್ಕಲ್‍ನಿಂದ ಅಶೋಕ ಚಿತ್ರಮಂದಿರ (ಕೆ.ಆರ್. ರಸ್ತೆ) ವರೆಗೆ ಕುಡಿಯುವ ನೀರಿನ ಪೈಪುಗಳನ್ನು ಅಳವಡಿಸುವ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಕಾಮಗಾರಿ ನಿರ್ವಹಿಸಲು ಸಹಕರಿಸುವಂತೆ ಸಾರ್ವಜನಿಕರಲ್ಲಿ ಮಹಾನಗರ ಪಾಲಿಕೆ ಆಯುಕ್ತರು ಮನವಿ ಮಾಡಿದ್ದಾರೆ.
ಏಷಿಯನ್ ಅಭಿವೃದ್ಧಿ ಬ್ಯಾಂಕ್‍ನ ನೆರವು ಹಾಗೂ ಅಮೃತ್ ಯೋಜನೆಯಡಿ ಮಹಾನಗರ ಪಾಲಿಕೆ ಹಾಗೂ ಕೆ.ಯು.ಐ.ಡಿ.ಎಫ್.ಸಿ., ಇಲಾಖೆಯ ವತಿಯಿಂದ ಕೈಗೊಂಡಿರುವ 24×7 ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆ(ಜಲಸಿರಿ ಯೋಜನೆ) ಯನ್ನು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲಾಗಿದೆ. ನಿಗಧಿತ ಮಾರ್ಗಗಳ ರಸ್ತೆಯ ಎರಡೂ ಬದಿಗಳಲ್ಲಿ ನೆಲ ಅಗೆತ ಹಾಗೂ ಯೋಜನೆಯ ಅವಶ್ಯಕತೆಗನುಗುಣವಾಗಿ ರಸ್ತೆಯನ್ನು ಕತ್ತರಿಸಿ ಪೈಪುಗಳನ್ನು ಅಳವಡಿಸಲಾಗುವುದು.
ಜಲಸಿರಿ ಕಾಮಗಾರಿಯನ್ನು ಪ್ರತಿದಿನ ಬೆಳಿಗ್ಗೆ 6.30 ರಿಂದ ರಾತ್ರಿ 9.30 ರವರೆಗೆ ಕೈಗೊಳ್ಳಲಾಗುತ್ತಿದ್ದು, ಕಾಮಗಾರಿ ಅವಧಿಯಲ್ಲಿ ಸಾರ್ವಜನಿಕರ ಮನೆಗಳು, ಅಂಗಡಿ ಮುಂಗಟ್ಟುಗಳು, ಸರ್ಕಾರಿ ಕಛೇರಿಗಳು, ನಗರದ ಮಾರುಕಟ್ಟೆ ಪ್ರದೇಶಗಳನ್ನು ಸಂಪರ್ಕಿಸುವ ರಸ್ತೆಗಳು, ಖಾಸಗಿ ಬಸ್ ನಿಲ್ದಾಣಗಳು ಹಾಗೂ ಇನ್ನಿತರ ಪ್ರದೇಶಗಳಲ್ಲಿ ಪೈಪುಗಳನ್ನು ಅಳವಡಿಸಲು ನೆಲ ಅಗೆತ ಮಾಡಿರುವ ಸ್ಥಳಗಳಲ್ಲಿ ಬ್ಯಾರಿಕೇಡ್, ಸಂಚಾರ ಸೂಚನಾ ಫಲಕಗಳು ಹಾಗೂ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಆದ್ದರಿಂದ ವಿವಿಧ ಅಂಗಡಿ ಮುಂಗಟ್ಟು ಮಾಲೀಕರು ಮತ್ತು ಸಾರ್ವಜನಿಕರು ತಮ್ಮ ವಾಹನಗಳನ್ನು ಬೇರೆ ಸ್ಥಳದಲ್ಲಿ ನಿಲ್ಲಿಸಬೇಕು ಮತ್ತು ಕಾಮಗಾರಿ ನಡೆಸುವ ಮಾರ್ಗಗಳಲ್ಲಿ ಸಂಚರಿಸುವ ಸಾರ್ವಜನಿಕರು, ಹಿರಿಯ ನಾಗರೀಕರು ಶಾಲೆಗಳಿಗೆ ತೆರಳುವ ಮಕ್ಕಳು ಹಾಗೂ ವಾಹನ ಸವಾರರು ನಾಮ ಫಲಕದಲ್ಲಿ ಸೂಚಿಸಿದ ಸೂಚನೆಗಳನ್ನು ಪಾಲಿಸಿ, ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಅವರು ತಿಳಿಸಿದ್ದಾರೆ.
