Mahila Samman : ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯಲ್ಲಿ ಗರಿಷ್ಠ ವಾರ್ಷಿಕ 7.5% ಬಡ್ಡಿ
ದಾವಣಗೆರೆ : ಕೇಂದ್ರ ಸರಕಾರ ಹೊಸದಾಗಿ ಜಾರಿಗೊಳಿಸಿರುವ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆ ಮಹಿಳೆಯರು ಆರ್ಥಿಕ ಭದ್ರತೆ ಸಾಧಿಸಲು ಸಹಕಾರಿಯಾಗಿದ್ದು, ಈ ಯೋಜನೆಗೆ ಬೆಣ್ಣೆನಗರಿಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ವಿಶೇಷವಾಗಿ ಮಹಿಳೆಯರು, ಬಾಲಕಿಯರಿಗಾಗಿ ಜಾರಿಗೊಳಿಸಿರುವ ಈ ಯೋಜನೆಯಡಿ ವಾರ್ಷಿಕ ಶೇ.7.5 ಗರಿಷ್ಠ ಬಡ್ಡಿ ದರ ಒದಗಿಸಲಿದ್ದು, ಆರ್ಥಿಕ ಭವಿಷ್ಯ ರಕ್ಷಿಸಿಕೊಳ್ಳಲು ಹಾಗೂ ಮಹಿಳಾ ಸಬಲೀಕರಣಕ್ಕೆ ಪೂರಕವಾಗಿದೆ. ಮಹಿಳೆಯರು ಅಥವಾ ಬಾಲಕಿಯರ ಹೆಸರಿನಲ್ಲಿ ಮಾತ್ರ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆ ಖಾತೆ ತೆರೆಯುವ ಅವಕಾಶವಿದೆ. ಇಲ್ಲಿ ಯಾವುದೇ ವಯೋಮಿತಿ ಇಲ್ಲ, ಕನಿಷ್ಠ 1 ಸಾವಿರದಿಂದ 2 ಲಕ್ಷದವರೆಗೆ ಹೂಡಿಕೆ ಮಾಡಿ ಉತ್ತಮ ರಿಟರ್ನ್ ಪಡೆಯಬಹುದಾಗಿದೆ.
ಈಗಾಗಲೇ ಕೇಂದ್ರ ಸರಕಾರ ಸುಕನ್ಯಾ ಸಮದ್ಧಿ ಯೋಜನೆ ಜಾರಿಯಲ್ಲಿದ್ದರೂ ಫಲಾನುಭವಿಗೆ ಕನಿಷ್ಠ 18 ವರ್ಷ ಆಗುವವರೆಗೂ ಹಣ ಪಡೆಯುವಂತಿಲ್ಲ, ಆದರೆ ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಯನ್ನು 2 ವರ್ಷಕ್ಕೆ ಸೀಮಿತಗೊಳಿಸಲಾಗಿದೆ. ಕಳೆದ ಏಪ್ರಿಲ್ 1 ರಿಂದ ಈ ಯೋಜನೆ ಅನುಷ್ಟಾನಗೊಂಡಿದ್ದು, 2025 ಮಾರ್ಚ್ 31 ರವರೆಗೆ ಖಾತೆ ತೆರೆಯಬಹುದಾಗಿದೆ. ಕನಿಷ್ಠ 1 ಸಾವಿರದಿಂದ ಗರಿಷ್ಠ 2 ಲಕ್ಷದ ಮಿತಿಯೊಳಗೆ ಒಬ್ಬರು ಈ ಯೋಜನೆಯಡಿ ಎಷ್ಟು ಖಾತೆಗಳನ್ನಾದರೂ ತೆರೆಯಬಹುದಾಗಿದೆ. ಅಸ್ಥಿತ್ವದಲ್ಲಿರುವ ಖಾತೆ ಹಾಗೂ ಇನ್ನೊಂದು ಖಾತೆಯನ್ನು ತೆರೆಯುವ ನಡುವೆ ಮೂರು ತಿಂಗಳ ಸಮಯದ ಅಂತರ ಇರಬೇಕು. ಈ ಠೇವಣಿಯು ತೆರೆದ ದಿನಾಂಕದಿಂದ ಎರಡು ವರ್ಷಗಳು ಪೂರ್ಣಗೊಂಡ ನಂತರ ಹಣ ಪಡೆಯಬಹುದಾಗಿದೆ.
ಖಾತೆದಾರರು ಖಾತೆ ತೆರೆದ ದಿನಾಂಕದಿಂದ ಒಂದು ವರ್ಷದ ಅವಧಿ ಮುಗಿದ ನಂತರ ಖಾತೆ ಮುಕ್ತಾಯದ ಮೊದಲು ಅರ್ಹ ಬ್ಯಾಲೆನ್ಸ್‌ನ ಗರಿಷ್ಠ ನಲವತ್ತು ಪ್ರತಿಶತದವರೆಗೆ ಒಂದು ಬಾರಿ ಹಿಂಪಡೆಯಲು ಅರ್ಹರಾಗಿರುತ್ತಾರೆ. ಖಾತೆದಾರರ ಮರಣದ ನಂತರ ಅಥವಾ ಗಾರ್ಡಿಯನ್ ಮರಣದಂತಹ ಸಂದರ್ಭಗಳಲ್ಲಿ ಹಾಗೂ ಖಾತೆದಾರರ ಮಾರಣಾಂತಿಕ ಕಾಯಿಲೆಗಳ ಸಂದರ್ಭದಲ್ಲಿ ವೈದ್ಯಕೀಯ ನೆರವಿಗಾಗಿ ಈ ಖಾತೆಯನ್ನು ಅಕಾಲಿಕವಾಗಿ ಮುಚ್ಚಬಹುದು. ಖಾತೆಯನ್ನು ಅಕಾಲಿಕವಾಗಿ ಈ ಮೇಲಿನ ಕಾರಣಕ್ಕಾಗಿ ಮುಚ್ಚಿದರೆ, ಅಸಲು ಮೊತ್ತದ ಮೇಲಿನ ಬಡ್ಡಿಯನ್ನು ಈ ಯೋಜನೆಗೆ ಅನ್ವಯಿಸುವ ದರದಲ್ಲಿ ಪಾವತಿಸಲಾಗುವುದು. ಆದರೆ ಖಾತೆ ತೆರೆದ ದಿನಾಂಕದಿಂದ 6 ತಿಂಗಳು ಪೂರ್ಣಗೊಂಡ ನಂತರ ಯಾವುದೇ ಸಮಯದಲ್ಲಿ ಖಾತೆಯನ್ನು ಅಕಾಲಿಕವಾಗಿ ಮುಚ್ಚಬಹುದು. ಆ ಸಂದರ್ಭದಲ್ಲಿ ಈ ಯೋಜನೆಯಲ್ಲಿ ನಿರ್ದಿಷ್ಟಪಡಿಸಿದ ಬಡ್ಡಿ ದರದಲ್ಲಿ ಶೇಕಡ 2 ರಷ್ಟು ಕಡಿತಗೊಳಿಸಲಾಗುತ್ತದೆ.
ಶೇ.7.5ರಷ್ಟು ಬಡ್ಡಿ : ಕೇಂದ್ರ ಸರಕಾರವು 2023ರ ಬಜೆಟ್‌ನಲ್ಲಿ ಜಾರಿ ಮಾಡಲಾದ ಭಾರತ ಸರಕಾರದ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯು ಹೊಸ ಸಣ್ಣ ಉಳಿತಾಯ ಯೋಜನೆಯಾಗಿದೆ. ಇದು 2025 ಮಾರ್ಚ್‌ವರೆಗೆ ಅಂದರೆ 2 ವರ್ಷದ ಅವಧಿ ಯೋಜನೆಯಾಗಿದೆ. ಈ ಯೋಜನೆಯಡಿ ಮಹಿಳೆಯರು ಸುಮಾರು 2 ಲಕ್ಷ ರೂ. ಮೊತ್ತವನ್ನು 2 ವರ್ಷದವರೆಗೆ ಡೆಪಾಸಿಟ್ ಮಾಡಬಹುದಾಗಿದೆ. ಈ ಯೋಜನೆಯಡಿ ತ್ರೈಮಾಸಿಕ ಆಧಾರದ ಮೇಲೆ ಶೇ.7.5ರಷ್ಟು ಬಡ್ಡಿ ನೀಡಲಾಗುತ್ತದೆ.