ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮಾಧ್ಯಮದ ಜವಾಬ್ದಾರಿ ಹೆಚ್ಚು: ಕೆಯುಡಬ್ಲ್ಯೂಜೆ ಕಾರ್ಯಕ್ರಮದಲ್ಲಿ ಎಚ್. ಬಿ.ದಿನೇಶ್ ಅಭಿಮತ

ಬೆಂಗಳೂರು: ಸವಾಲುಗಳ ನಡುವೆ ಮಾಧ್ಯಮ ಸಾಗುತ್ತಿದೆ. ಹಾಗೆ ಪತ್ರಕರ್ತರ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ ಎಂದು ವಾರ್ತಾ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಎಚ್.ಬಿ.ದಿನೇಶ್ ಹೇಳಿದ್ದಾರೆ.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಕೆಯುಡಬ್ಲ್ಯೂಜೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರಳವಾಗಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಒಂದು ಕಾಲಘಟ್ಟದ ಮಾಧ್ಯಮ ಈಗ ಬಹಳಷ್ಟು ಬದಲಾಗಿದೆ. ಪತ್ರಕರ್ತರು ಕೂಡ ಹೊಸ ನೈಪುಣ್ಯತೆಗೆ ತೆರೆದುಕೊಳ್ಳಬೇಕಿದೆ ಎಂದರು.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಮಾಡುತ್ತಿರುವ ಕೆಲಸ ಶ್ಲಾಘನೀಯ. ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರ ನೆರವಿಗೆ ಗಟ್ಟಿಯಾಗಿ ನಿಂತು ಪರಿಹಾರ ಕೊಡಿಸಿದ್ದು ದಾಖಲೆ ಕೆಲಸ. ಅದಕ್ಕಾಗಿ ಶಿವಾನಂದ ತಗಡೂರು ಅಭಿನಂದನಾರ್ಹರು ಎಂದರು.

ಈ ಸಂಜೆ ಸಂಪಾದಕರಾದ ಟಿ.ವೆಂಕಟೇಶ್ ಅವರು ಮಾತನಾಡಿ, ಸದಾ ಸಮಾಜಮುಖಿಯಾಗಿ ಪತ್ರಕರ್ತರು ತೊಡಗಿಸಿಕೊಳ್ಳಬೇಕು. ಕೆಯುಡಬ್ಲ್ಯೂಜೆ ಮಾಡುತ್ತಿರುವ ಕೆಲಸಗಳನ್ನು ಹತ್ತಿರದಿಂದ ಗಮನಿಸಿದ್ದು ನಮ್ಮೆಲ್ಲರಿಗೂ ಹೆಮ್ಮೆಯಾಗುವ ರೀತಿಯಲ್ಲಿ ಕೆಲಸ ಮಾಡುತ್ತಿರುವುದು ಪ್ರಶಂಸನೀಯ ಎಂದರು.

ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಅವರು ಮಾತನಾಡಿ, ಪತ್ರಕರ್ತರು ಎಂದು ತಮ್ಮ ಹೆಗಲ‌ ಮೇಲಿರುವ ಹೊಣೆಗಾರಿಕೆ ಮರೆಯದೆ, ವೃತ್ತಿ ಬದ್ಧತೆ ಕಾಪಾಡಿಕೊಂಡು ಬರಬೇಕು ಎಂದು ಕರೆ ನೀಡಿದರು.

ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ಕಲಬುರಗಿಗೆ ಬರಲಾಗದ ಕಾರಣ ಇಂದು ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದರು.

ಈ ಸಂಜೆ ಸಂಪಾದಕರಾದ ವೆಂಕಟೇಶ್ ಅವರು ತಮ್ಮ ಸಂಸ್ಥೆ ಅಭಿಮಾನಿ ಪ್ರಕಾಶನ ಹೆಸರಿನಲ್ಲಿ ಪ್ರಶಸ್ತಿಗಾಗಿ, ಒಂದು ಲಕ್ಷ ನೀಡಿದ್ದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದರು.

ನಾಡು ನುಡಿಗೆ ಸೇವೆ ಸಲ್ಲಿಸಿದ ಪತ್ರಕರ್ತರಿಗೆ ಮಾ.ರಾಮಮೂರ್ತಿ ಹೆಸರಿನಲ್ಲಿ ನೀಡುವ ಪ್ರಶಸ್ತಿಯನ್ನು ಈ ಸಂಜೆ ಸಂಪಾದಕರಾದ ಟಿ.ವೆಂಕಟೇಶ್ ಅವರಿಗೆ, ನಾಡಿಗೇರ ಕೃಷ್ಣರಾಯ ಅವರ ಹೆಸರಿನ ಪ್ರಶಸ್ತಿಯನ್ನು ಸಮಾಜಮುಖಿ ಸಂಪಾದಕ ಚಂದ್ರಕಾಂತ ವಡ್ಡು ಅವರಿಗೆ, ಬೆಸ್ಟ್ ಫೋಟೋಗ್ರಾಫರ್ ಪ್ರಶಸ್ತಿಯನ್ನು ವಿಶ್ವನಾಥ್ ಸುವರ್ಣ ಅವರಿಗೆ ಪ್ರದಾನ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಹಂಪಿ ವಿವಿ ಯಿಂದ ಡಾಕ್ಟರೇಟ್ ಪದವಿ ಪಡೆದ ಪ್ರಜಾವಾಣಿ ನಿಕಟಪೂರ್ವ ಸಂಪಾದಕರಾದ ಪದ್ಮರಾಜ ದಂಡಾವತಿ ಅವರನ್ನು ಗೌರವಿಸಲಾಯಿತು.

ಪ್ರೊಫೆಸರ್ ಚಂದ್ರಶೇಖರ ಪಾಟೀಲ (ಚಂಪ) ಅವರಿಗೆ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು, ಉಪಾಧ್ಯಕ್ಷ ಮತ್ತಿಕೆರೆ ಜಯರಾಂ, ಕಾರ್ಯದರ್ಶಿ ಬಂಗ್ಲೆ ಮಲ್ಲಿಕಾರ್ಜುನ, ಖಜಾಂಚಿ ಡಾ.ಉಮೇಶ್ವರ್, ಬೆಂಗಳೂರು ನಗರ ಘಟಕ ಅಧ್ಯಕ್ಷ ಸೋಮಶೇಖರ ಗಾಂಧಿ, ಪ್ರಧಾನ ಕಾರ್ಯದರ್ಶಿ ದೇವರಾಜ್ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!