ಪತ್ರಕರ್ತರ ನಿಂದನೆ: ನಾಸೀರ್ ಹುಸೇನ್ ವಾಜಾಕ್ಕೆ ಪತ್ರಕರ್ತರ ಆಗ್ರಹ
ರಾಮನಗರ: ವಿಧಾನಸೌಧದಲ್ಲಿ ಪತ್ರಕರ್ತರನ್ನು ಬಹಿರಂಗವಾಗಿ ನಿಂದಿಸಿದ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಪತ್ರಕರ್ತರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಮನಗರ ಜಿಲ್ಲಾ ಪತ್ರಕರ್ತರು ಜಿಲ್ಲಾಧಿಕಾರಿಗಳ ಮನವಿ ಸಲ್ಲಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಎದುರು ನಾಸೀರ್ ಹುಸೇನ್ ನಡೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪತ್ರಕರ್ತರು, ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಧಾನಸೌಧದಲ್ಲಿ ರಾಜ್ಯಸಭಾ ಚುನಾವಣೆಯ ಫಲಿತಾಂಶ ಬಂದ ಬಳಿಕ ನೂತನ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಬೆಂಬಲಿಗರು ಸಂಭ್ರಮಾಚರಣೆ ವೇಳೆ “ಪಾಕಿಸ್ತಾನ್ ಜಿಂದಾಬಾದ್” ಎಂಬ ಘೋಷಣೆ ಕೂಗಿದ ಆರೋಪದ ಹಿನ್ನಲೆಯಲ್ಲಿ ಈ ಬಗ್ಗೆ ನಾಸೀರ್ ಹುಸೇನ್ ರವರ ಬಳಿ ಸ್ಪಷ್ಟನೆ ಕೇಳಲು ಮಾಧ್ಯಮದವರು ಮುಂದಾದ ವೇಳೆ ಮಾಧ್ಯಮದವರಿಗೆ ನಾಸೀರ್ ಹುಸೇನ್ “ಹೇಯ್ ಯಾರೋ ಅವನು.. ಹೋಗೋ.. ಅವನು ಹುಚ್ಚ” ಎಂಬ ಪದಗಳಿಂದ ನಿಂದಿಸಿದ್ದಾರೆ.
ಇದು ಸಂವಿಧಾನದ ನಾಲ್ಕನೆ ಅಂಗ ಎಂದು ಕರೆಸಿಕೊಳ್ಳುವ ಮಾಧ್ಯಮ ಮೇಲಿನ ದಬ್ಬಾಳಿಕೆಯಾಗಿದ್ದು, ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ.
ವಿಧಾನಸೌಧದಲ್ಲಿ ಮಾಧ್ಯಮದವರ ಮೇಲೆ ಈ ರೀತಿಯ ಪದ ಬಳಕೆ ಮಾಡಿ ನಿಂದಿಸಿದ ನಾಸೀರ್ ಹುಸೇನ್ ಬಹಿರಂಗವಾಗಿ ಪತ್ರಕರ್ತರಲ್ಲಿ ಕ್ಷಮೆ ಯಾಚಿಸಬೇಕು, ಸರ್ಕಾರ ಈ ಕೂಡಲೇ ನಾಸೀರ್ ಹುಸೇನ್ ಅವರನ್ನು ರಾಜ್ಯಸಭಾ ಸದಸ್ಯ ಸ್ಥಾನದಿಂದ ವಜಾ ಮಾಡಿ, ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಳ್ಳಲಾಯಿತು.