Nagaraj Talavar; ಮುರಿದ ಕನಸಿಗೆ ಮತ್ತೆ ಮರುಗುತ್ತಿದೆ ಮರು ಜೀವದ ಮನಸ್ಸು!

ಸ್ನೇಹಿತರೇ,

ಕನಸುಗಳಿಲ್ಲದ ವ್ಯಕ್ತಿ ಯಾರೂ ಇಲ್ಲ. ಕನಸುಗಳನ್ನು ಕಾಣದ ವ್ಯಕ್ತಿ ನಿರ್ಜೀವವೇ ಸರಿ. ಇಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಕನಸುಗಳ ಗುಚ್ಚಗಳಿರುತ್ತವೆ. ಬೇಕಿದ್ರೆ ನೀವು ಅವಲೋಕಿಸಿ ನೋಡಿ ನಮ್ಮ ಸುತ್ತಮುತ್ತಲಿನವರೆಲ್ಲರಲ್ಲೂ ಬಹುತೇಕ ತಮ್ಮದೇ ಆದ ಸಣ್ಣಪುಟ್ಟ ಕನಸುಗಳಿರುತ್ತವೆ. ಅಂಥಹವುಗಳಲ್ಲಿ ಕೇವಲ ವೈಯಕ್ತಿಕ ಕನಸುಗಳನ್ನು ಕಟ್ಟಿಕೊಂಡವರೇ ಜಾಸ್ತಿ. ಆದ್ರೆ ತೀರಾ ಎಲ್ಲೋ ಅಲ್ಲೊಬ್ಬ ಇಲ್ಲೊಬ್ಬರು ಮಾತ್ರ ತಮ್ಮ ವೈಯಕ್ತಿಕ ಬದುಕಿನಾಚೆ ತಾವು ಬದುಕಿರುವ ಈ ಭೂಮಿಗೆ ಅಥವಾ ಸಮಾಜಕ್ಕೆ ಏನಾದ್ರೂ ಅಳಿಲು ಸೇವೆ ಸಲ್ಲಿಸಿ ಕೃತಾರ್ಥರಾಗುವ ಕನಸುಗಳನ್ನ ಕಟ್ಟಿಕೊಳ್ತಾರೆ. ಅಂಥಹ ವ್ಯಕ್ತಿಗಳನ್ನ ನಾವೆಲ್ಲ, ಸಮಾಜ ಸೇವಕ, ಪರೋಪಕಾರಿ, ಚಿಂತಕ ಹೀಗೆ ಹಲವು ಹೆಸರುಗಳನ್ನಿಟ್ಟು ಮುನ್ನಡೆದುಬಿಡ್ತೀವಿ. ಅಂಥಹವರ ಮನಸ್ಸಿನ ತುಮುಲುಗಳನ್ನ ನಾವು ಕೇಳಿಸಿಕೊಳ್ಳುವುದೇ ಕಡಿಮೆ. ನಿಜಕ್ಕೂ ಅಂಥಹ ವ್ಯಕ್ತಿಗಳಿರ್ತಾರಲ್ಲಾ ಅವರು ಯಾರ ಅನುಕಂಪವನ್ನೋ, ಅನುದಾನವನ್ನೋ ಅಥವಾ ಹೊಗಳಿಕೆಯನ್ನೋ ನಿರೀಕ್ಷಿಸದೆ ಕೇವಲ ತಮ್ಮ ಸೇವೆ ಪೂರ್ಣಗೊಳಿಸುವತ್ತ ಚಿತ್ತ ನೆಟ್ಟುಬಿಟ್ಟಿರ್ತಾರೆ. ಇಂಥಹ ವ್ಯಕ್ತಿಗಳ ಸಾಲಿಗೆ ಸೇರಬಹುದಾದ ವ್ಯಕ್ತಿಯ ಹೆಸರು ನಾಗರಾಜ್‌ ತಳವಾರ್!‌ (Nagaraj Talavar)

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನಲ್ಲಿ ದೂಪದಹಳ್ಳಿ ಅನ್ನೋದೊಂದು ಹಳ್ಳಿಯಿದೆ. ಬೇಕಿದ್ರೆ ನೀವು ಈ ಗ್ರಾಮಕ್ಕೆ ಭೇಟಿ ನೀಡಿ ಈ ಹೆಸರನ್ನ ಹೇಳಿನೋಡಿ ಎಂಥಹವರೂ ಇವರ ತೋಟದ ಮನೆಯನ್ನ ತೋರಿಸಿಬಿಡ್ತಾರೆ. ಆ ತೋಟದ ಮನೆಯಲ್ಲೇನಿದೆ ವಿಶೇಷ ಅನ್ನೋದು ಇಡೀ ಗ್ರಾಮಕ್ಕೇ ಗೊತ್ತು. ಅಸಲಿಗೆ ಈ ನಾಗರಾಜ್‌ ತಳವಾರ್‌ ಓರ್ವ ಹವ್ಯಾಸಿ ಪತ್ರಕರ್ತ, ಬರಹಗಾರ. ಓರ್ವ ಸಾಮಾನ್ಯ ಪೋಸ್ಟ್‌ ಮಾಸ್ಟರ್‌ ಮಗನಾಗಿದ್ದರೂ ಕೂಡಾ ಸಾಹಿತ್ಯ, ಎಡ ಪಂತೀಯತೆಯನ್ನು ನೆಚ್ಚಿಕೊಂಡಿರುವಾತ. ತಂದೆಯ ಅನಿಶ್ಚಿತತೆಯ ಬದುಕಿನ ನೆರಳಿನಲ್ಲಿಯೇ ಊರಿಂದೂರಿಗೆ ಸಾಗಿ ಬಾಲ್ಯ ಕಳೆದಾತ. ಮನೆಯ ಆರ್ಥಿಕ ಸ್ಥಿತಿ ಮನಸ್ಸಿನಲ್ಲಿಯೇ ಮಡುಗಟ್ಟಿದ್ದರಿಂದ ವಿದ್ಯಾರ್ಥಿ ದೆಸೆಯಲ್ಲಿಯೇ ದುಡುಮೆಗಿಳಿದಾತ. ಆ ಸಣ್ಣ ವಯಸ್ಸಿನಲ್ಲಿಯೇ ಪುಡಿಗಾಸಿಗಾಗಿ ಮಾರ್ಕೆಟ್ಟಲ್ಲಿ ಐಸ್‌ ಕ್ರೀಂ ಮಾರಿ, ಸಂತೆಯಲ್ಲಿ ಬೆಳ್ಳುಳ್ಳಿ ಮಾರಿ, ಅಂಗೈಯಲ್ಲಿ ಪುಡಿಗಾಸನ್ನಿಡಿದು ಮನೆಗೆ ಬಂದಾತ. ಇಂಥಹ ವ್ಯಕ್ತಿಗೆ ಸಾಹಿತ್ಯದ ಸೊಗಡು ತಾಕಿ ಪತ್ರಿಕಾ ರಂಗದ ಅಂಗಳಕ್ಕೆ ಬಂದು ನಿಲ್ತಾನೆ. ಆ ಮೂಲಕವೇ ರಾಜ್ಯದ ಹಲವಾರು ಹಿರಿಯ ಪತ್ರಕರ್ತರು ಸಾಹಿತಿಗಳ ಒಡನಾಟ ದೊರಕಿ ಬದುಕು ಒಂದೇ ದಿಕ್ಕಿನಲ್ಲಿ ಸಾಗುತ್ತಿದ್ದಾಗಲೇ ಈತನಿಗೆ ಅದೊಂದು ಪ್ರಶ್ನೆ ಕಾಡುತ್ತೆ. ಅರೆ! ಬದುಕಿನ ಅಲೆದಾಟಕ್ಕೆ ಸಿಲುಕಿ ನನ್ನ ಕುಟುಂಬ, ನನ್ನೂರು ಎಲ್ಲವನ್ನೂ ಅಂತರದಲ್ಲಿಟ್ಟು ನಾನು ಸಾಗುತ್ತಿರುವುದಾದರೂ ಎತ್ತ ? ಮನೆ ಗೆದ್ದು ಮಾರು ಗೆಲ್ಲು ಅನ್ನೋ ಗಾದೆನೇ ಇದೆಯಲ್ಲಾ ! ನನಗೆ ಇಷ್ಟೆಲ್ಲವನ್ನೂ ನೀಡಿದ ಮನೆಗೆ, ನನ್ನ ಹುಟ್ಟೂರಿಗೆ ನಾನು ಏನನ್ನಾದರೂ ಸೇವೆ ಸಲ್ಲಿಸದೇ ಹೋದ್ರೆ, ನನ್ನದಿನ್ನೆಂಥಹ ಆದರ್ಶ ಬದುಕಾದೀತು ? ಕಟ್ಟಬೇಕಿನ್ನು ನಾನು ಗಂಟು ಮೂಟೆಯನ್ನ. ನನ್ನ ಮನೆಯೆಡೆಗೆ, ನನ್ನೂರಿನೆಡೆಗೆ ಅಂತ ತೀರ್ಮಾನಿಸಿದಾಗಲೇ ನಾಗರಾಜ್‌ ಬೆಂಗಳೂರಿನಿಂದ ತನ್ನೂರಿಗೆ ವಾಪಸ್‌ ಆಗ್ತಾನೆ ಪರ್ಮನೆಂಟಾಗಿ.

ಸರಿ, ಹುಟ್ಟೂರಿಗೆ ಬಂದು ಸೇರಿದ್ದಾಯ್ತು.(Nagaraj Talavar)

ಮುಂದೇನು?

ನನ್ನ ಗ್ರಾಮಕ್ಕೆ ನಾನು (Nagaraj Talavar) ಯಾವ ಸೇವೆ ಮಾಡಿದ್ರೆ ಉತ್ತಮ ? ಶಾಲೆಯಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಿದ್ರೆ ಸಾಕಾ? ಗ್ರಾಮವನ್ನ ಮದ್ಯಮುಕ್ತವಾಗಿಸಿದ್ರೆ ಮುಗೀತಾ? ಆಸ್ಪತ್ರೆ ವಿಷ್ಯ ? ಪಂಚಾಯ್ತಿ ಉಸಾಬರಿ? ಊರಲ್ಲಿನ ಹಿಂದುಳಿದವರಿಗೆ ನೆರವಾಗಲು ನಾನೆಷ್ಟು ಶಕ್ತ ? ಹೌದು. ಈ ಯಾವ ವಿಚಾರಕ್ಕೂ ಕೈ ಹಾಕುವ ಮೊದಲು ನಾನಷ್ಟು ಶಕ್ತನಾಗಬೇಕೆಂದುಕೊಂಡ ನಾಗರಾಜ್‌ ಮೊದಲು ತಮ್ಮ ಖುಷ್ಕಿ ಜಮೀನನ್ನು ನೀರಾವರಿಯನ್ನಾಗಿಸಿಕೊಂಡು ತೋಟದಲ್ಲಿ ಮಾವು, ತೆಂಗು, ಮೀನು ಸಾಕಾಣಿಕೆ ಹೀಗೆ ಹಲವು ಬೆಳೆಗಳಿಗೆ ಬಂಡವಾಳ ಜೋಡಿಸಿ ಟೆಕ್ನಾಲಜಿ ಬಳಸಿಕೊಂಡು ತೋಟಕ್ಕೆ ನಾಲ್ಕು ಕ್ಯಾಮರಾಗಳನ್ನ ಹಗಲು ರಾತ್ರಿ ಕಾವಲಿಗಿಟ್ಟು ತನಗೂ ತನ್ನ ಕುಟುಂಬಕ್ಕೂ ಒಂದಷ್ಟು ಆದಾಯದ ಮೂಲಗಳನ್ನ ಕಂಡುಕೊಳ್ತಾನೆ. ತಾನು ಏನೇ ಮಾಡಿದ್ರೂ ತನ್ನ ಕನಸನ್ನ ಮಾತ್ರ ಹಾಗೇ ಕಾಪಿಟ್ಟುಕೊಂಡಿದ್ದ ನಾಗರಾಜ್‌ ಗೆ ಅದೊಂದು ಯೋಚನೆ ಸೂಕ್ತ ಅನ್ನಿಸುತ್ತೆ. ತಾನು ಗ್ರಾಮದ ಯಾವ ಸಮಸ್ಯೆಯನ್ನಾದ್ರೂ ಸರಿಪಡಿಸಬಲ್ಲೆ ಅಥವಾ ಕಾಲ ಕ್ರಮೇಣ ಕೆಲವು ಸಮಸ್ಯೆಗಳು ತಂತಾನೇ ಸರಿ ಹೋಗಲೂ ಬಹುದು. ಆದ್ರೆ ಎಷ್ಟೇ ಪ್ರಜ್ಞಾವಂತರೂ ಕೂಡಾ ಇದೊಂದು ದಿಕ್ಕಿನತ್ತ ಆಲೋಚಿಸಿರಲಾರರು. ಅದಾವ ದಿಕ್ಕು ಅಂದ್ರೆ, ಹಿರಿಯ ಜೀವಿಗಳ ಹಾರೈಕೆ. 60 ರ ನಂತರ ಎಲ್ಲರೂ ಮರಳಿ ಮಕ್ಕಳಂತಾಗ್ತಾರೆ. ಆಗ ಅವರಿಗೆ ತಮ್ಮ ತಮ್ಮ ಸಂತಾನಗಳೇ ಹೆತ್ತವರಂತೆ, ಸ್ನೇಹಿತರಂತೆ ಹಿರಿಯರ ಜೀವನದ ಇಳಿಸಂಜೆಗೆ ಜೊತೆ ನಿಲ್ಲಬೇಕು. ಆದ್ರೆ ಎಲ್ಲಾ ಹಿರಿಯರಿಗೂ ಅಂಥಹ ಸಾಥ್‌ ಸಿಗಬೇಕಲ್ಲಾ? ನಿಜ. ಯಾವ ಹಿರಿಯ ಜೀವಿ ಸಂಕಷ್ಟದಲ್ಲಿರುತ್ತಾರೋ ಅಂಥಹವರಿಗೆ ನಾನು ಊರುಗೋಲಾದರೆ ಸಾಕು ಅವರ ನೆಮ್ಮದಿಯ ದಿನಗಳು ನನ್ನ ಕಣ್ಣೆದಿರೇ ನಡೆಯಲಿ ಅಂತ ತೀರ್ಮಾನಿಸುತ್ತಲೇ ತನ್ನ ಕನಸನ್ನು ನನಸು ಮಾಡುವ ದಾರಿಗಳನ್ನ ಹುಡುಕುತ್ತಾನೆ.

ganga kalyan yojana; ಗಂಗಾ ಕಲ್ಯಾಣ ಬೋರ್ ವೆಲ್; ಅರ್ಜಿ ಆಹ್ವಾನ

ದುರ್ದೈವವಶಾತ್ ಒಂದೆಡೆ ನಾಗರಾಜ್‌ ಹಿರಿಯ ನಾಗರೀಕರ ಸೇವೆಗೆ ಕಟಿಬದ್ಧನಾಗಿ ಕಾರ್ಯ ಪ್ರವೃತ್ತನಾಗಿದ್ದಾಗಲೇ‌ ತನ್ನ ತಂದೆಯನ್ನ ಕಳೆದುಕೊಳ್ತಾನೆ. ಮೊದಲೇ ತಾಯಿಯನ್ನು ಕಳೆದುಕೊಂಡಿದ್ದ ನಾಗರಾಜ್ ತಂದೆಯ ಅಗಲಿಕೆಯ ನಂತರವೂ ಆತ್ಮಸ್ಥೈರ್ಯ ಕಳೆದುಕೊಳ್ಳದೆ ತನ್ನದೇ ಸಮಾನ ಮನಸ್ಕ ಸ್ನೇಹಿತರನ್ನು ಸಂಪರ್ಕಿಸಿ ತನ್ನ ಕನಸನ್ನ ಹಂಚಿಕೊಳ್ತಾನೆ. ಈತನ ಕನಸಿಗೆ ಬೆಂಗಾವಲಾಗಿ ಹೆಗಲಿಗೆ ಹೆಗಲು ಕೊಡಲು 30 ಸ್ನೇಹಿತರು ಒಗ್ಗೂಡಿ ನಿಲ್ತಾರೆ. ಈ 30 ಸ್ನೇಹಿತರೂ ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದವರೇ. ಎಲ್ಲರೂ ಒಮ್ಮತದಿಂದ ನಾಗರಾಜ್‌ ಕನಸಿಗೆ ಪ್ರತಿ ತಿಂಗಳು ಐದತ್ತು ಸಾವಿರಗಳಷ್ಟು ಹಣ ನೀಡಲು ನಿರ್ಧರಿಸ್ತಾರೆ. ಆಗಲೇ ನಾಗರಾಜ್‌ ತೋಟದಲ್ಲಿ ತಲೆಎತ್ತಿ ನಿಲ್ಲೋದು ಸರ್ವ ಧರ್ಮ ವೃದ್ಧಾಶ್ರಮ!

ಅಯ್ಯೋ ವೃದ್ಧಾಶ್ರಮನಾ ? ಅಂದ್ಕೋಬೇಡಿ. (Nagaraj Talavar)

ಇಲ್ಲಿ ನಾಗರಾಜ್‌ ಕಟ್ಟಿರುವ ವೃದ್ಧಾಶ್ರಮಕ್ಕೆ ಸರ್ಕಾರದ ಬಿಡಿಗಾಸೂ ಸಿಕ್ಕಿಲ್ಲ. ಇದು ದುಡ್ಡು ಗಳಿಸೋದಕ್ಕೆ ಕಂಡುಕೊಂಡ ಸೇವೆಯ ಸೋಗಿನ ಆಶ್ರಮವಲ್ಲ. ಕೇವಲ ಸ್ನೇಹಿತರ ಸಹಕಾರದಿಂದ ತನ್ನದೇ ತೋಟದಲ್ಲಿ ತನ್ನ ಬಂಡವಾಳವನ್ನೂ ಹೂಡಿ ಸುಸಜ್ಜಿತವಾದ ವೃದ್ಧಾಶ್ರಮವನ್ನ ೨೦೧೪ ರಲ್ಲಿ ಕಟ್ಟಿಸ್ತಾನೆ. ಎಂಟು ಎಕರೆ ತೋಟದಲ್ಲಿ ನಾಲ್ಕು ಕ್ಯಾಮರಾಗಳ ಹದ್ದಿನ ಕಣ್ಣಿನ ಕಣ್ಗಾವಲಲ್ಲಿ, ಲೌಕಿಕ ಜೀವನದ ಹುಸಿ ಆಸೆಗಳ ಅಸಲಿಯತ್ತನ್ನು ಬಿಂಬಿಸುವ ಫಲಕಗಳ ದಾರಿಯಲ್ಲಿ, ಟ್ರಾಫಿಕ್ಕು, ಜನನಿಬಿಡ ಗೋಜಲುಗಳಿಂದ ದೂರದಲ್ಲಿ, ಸ್ವಚ್ಛಂದ ಪರಿಸರದ ಮಡಿಲಲ್ಲಿ ನಿರ್ಮಾಣಗೊಳ್ಳುತ್ತೆ ಸರ್ವ ಧರ್ಮ ಆಶ್ರಮ.

ಸುದ್ದಿ ಗ್ರಾಮಸ್ಥರಿಗೆ ಆ ಮೂಲಕ ತಮ್ಮ ತಮ್ಮ ಸಂಬಂಧಿಗಳ ಗ್ರಾಮಸ್ಥರಿಗೆ, ಹಲವಾರು ಪತ್ರಿಕೆಗಳ ಮೂಲಕ ಹಲವಾರು ಜಿಲ್ಲೆಗಳಿಗೆ ತಲುಪುತ್ತೆ. ಮೊದಲ ವರ್ಷದಲ್ಲಿಯೇ ನಾಗರಾಜ್‌ ನಿರೀಕ್ಷೆಯಂತೆ 17 ಹಿರಿಯ ನಾಗರೀಕರು ಈ ಆಶ್ರಮದಲ್ಲಿ ನೆಮ್ಮದಿಯ ದಿನಗಳನ್ನ ಕಾಣ್ತಾರೆ. ಅವರಾದರೂ ಎಂಥಹವರು ಅಂತೀರಿ ! ಹಿರಿಯ ನಾಗರೀಕರು ಅಂದ್ರೆನೇ ಕಸುವು ಕಳೆದುಕೊಂಡವರು. ಕಣ್ಣು ಮಸುಕಾದವರು, ಕುಟುಂಬಕ್ಕೆ ಹೊರೆ ಎಂದುಕೊಂಡವರು, ಅನಾಥರು, ವಿಶೇಷ ಚೇತನರು, ಸಮಾಜದಿಂದ ನಿರ್ಲಕ್ಷಕ್ಕೊಳಗಾದವರು. ಹೀಗೆ ಇಂಥಹ ದಯನೀಯ ಸ್ಥಿತಿಯಲ್ಲಿ ಬದುಕನ್ನ ಕೈ ಚೆಲ್ಲಿ ಕೂತವರಿಗೆ ನಾಗರಾಜ್‌ ಆಶ್ರಮ ಆಶ್ರಯ ನೀಡುತ್ತೆ. ಬಾಲ್ಯದಿಂದಲೂ ಮಾರ್ಕೆಟ್ಟಲ್ಲಿ, ಬೀದಿ ಬೀದಿಗಳಲ್ಲಿ ಬದುಕಿನ ಸಂಜೆಯಲ್ಲಿರುವ ಹಿರಿಯ ಜೀವಿಗಳ ದಯನೀಯ ಬದುಕನ್ನು ಕಂಡು ಕನಲಿದ್ದ ನಾಗರಾಜ್‌ ಈಗ ತನ್ನ ಜೊತೆ ಇಷ್ಟು ಹಿರಿಯ ನಾಗರೀಕರು ನೆಮ್ಮದಿಯಿಂದ ಇದ್ದಾರಲ್ಲಾ ನನಗಷ್ಟೇ ಸಾಕು ಬಿಡು ಎಂದುಕೊಂಡು ದಿನಗಳೆಯುತ್ತಿದ್ದಾಗಲೇ ವಿಧಿ ಈತನ ಬದುಕಿಗೊಂದು ಹೊಡೆತ ಕೊಟ್ಟು ಬಿಡುತ್ತೆ.

೨೦೧೬ ರಲ್ಲಿ ಇದ್ದಕ್ಕಿದ್ದಂತೆ ತನ್ನ ಆರೋಗ್ಯಕ್ಕೇನೋ ಪೆಟ್ಟು ಬಿದ್ದಿದೆ ಅನ್ನೋ ಸುಳಿವು ನಾಗರಾಜ್‌ ಗೆ ಸಿಗುತ್ತೆ. ಮುಂಜಾಗ್ರತೆಗಾಗಿ ವೈದ್ಯರನ್ನ ಸಂಪರ್ಕಿಸಿದ ನಾಗರಾಜ್‌ ಗೆ ಬರಸಿಡಿಲಿನಂಥ ವರದಿ ಸಿಗುತ್ತೆ. ದುಶ್ಚಟಗಳ ಗೊಡವೆಗಳಿಲ್ಲದ, ಕ್ರಮಬದ್ಧವಾದ ಜೀವನ ಸಾಗಿಸ್ತಾಇದ್ದ ನಾಗರಾಜ್‌ ಗೆ ಕ್ಯಾನ್ಸರ್‌ ಖಾಯಿಲೆ ಇದೆ ಅಂತ ಹೇಳಿರುತ್ತೆ ರಿಪೋರ್ಟ್!‌

ಈ ಖಾಯಿಲೆಯ ಹೆಸರು ಕೇಳಿದ್ರೆನೇ ಫೈನಲ್‌ ರಿಸಲ್ಟ್‌ ಏನು ಅನ್ನೋದನ್ನ ಎಲ್ರೂ  ಹೇಳ್ತಾರೆ. ಇನ್ನು ನಾಗರಾಜ್‌ ಗೆ ಯಾರಾದ್ರೂ ಹೇಳಿ ಕೊಡ್ಬೇಕಾ? ಡಾಕ್ಟರ್‌ ರಿಪೋರ್ಟ್‌ ನೋಡಿದ ನಾಗರಾಜ್‌ ಮನಸ್ಥಿತಿ ಏನಾಗಿರಬೇಡ ? ಆತನ ಕುಟುಂಬದವರ ಪರಿಸ್ಥಿತಿ ? ತಾನು ಕಂಡ ಕನಸುಗಳ ಸ್ಥಿತಿಗತಿ? ಪ್ರೀತಿ ಮತ್ತು ಖಾಳಜಿಯಿಂದ ನಿರ್ಮಿಸಿದ ವೃದ್ಧಾಶ್ರಮದ ಗತಿ ? ಆಶ್ರಮವನ್ನೇ ನಂಬಿಕೊಂಡ ಆ ಹಿರಿಯ ಜೀವಿಗಳ ಪರಿಸ್ಥಿತಿ ? ಈತನ ಕನಸಿಗೆ ಹೆಗಲು ಕೊಟ್ಟ ಸಮಾನ ಮನಸ್ಕರ ಮನಸ್ಥಿತಿ? ಎಲ್ಲವೂ ಒಂದು ಕ್ಷಣ ತಲ್ಲಣಗೊಂಡಿರಬಹುದು. ಬಹುಶಃ ಎಲ್ಲರೂ ನಾಗರಾಜ್‌ ಬದುಕಿನ ಬಗ್ಗೆ ಮರುಕವನ್ನೋ, ಅನುಕಂಪವನ್ನೋ ವ್ಯಕ್ತಪಡಿಸಿರಬಹುದು. ಆದ್ರೆ ನಾಗರಾಜ್‌ಗೆ ತನ್ನ ಮೇಲೆ ತನಗೆ ಅಚಲ ವಿಶ್ವಾಸವಿತ್ತು. ಜೀವನದಲ್ಲಿ ಎಂತೆಂಥಹ ಪರಿಸ್ಥಿತಿಗಳನ್ನ ಎದುರಿಸಿ ಬಂದಿಲ್ಲ ನಾನು? ಎಂತೆಂಥಹ ಸವಾಲುಗಳಿಗೆ ಸವಾಲಾಗಿ ನಿಂತಿಲ್ಲ ನಾನು? ಇದೊಂದು ಖಾಯಿಲೆಯನ್ನ ಗೆಲ್ಲರಾರೆನಾ ? ಅಂದ್ಕೊಳ್ತಾನೆ. ಸರಿ, ಆತ್ಮವಿಶ್ವಾಸವೇನೋ ಇದೆ. ಕುಟುಂಬ, ಸ್ನೇಹಿತರು, ಆಪ್ತರು, ಎಲ್ಲರ ಸಹಕಾರವೂ ಇದೆ. ಆದ್ರೆ

ಟ್ರೀಟ್‌ ಮೆಂಟ್‌ಗೆ ದುಡ್ಡು ಬೇಕಲ್ಲ ? (Nagaraj Talavar)

ತನ್ನ ಸುತ್ತಲಿನವರೆಲ್ಲ ಒಟ್ಟುಗೂಡಿಸಿದ್ರೂ ಎಷ್ಟೂಂತ ಹಣ ಕೊಟ್ಟಾರು ? ಕ್ಯಾನ್ಸರ್‌ ಮಾರಿಯ ಚಿಕಿತ್ಸೆ ಸಾವಿರಗಳನ್ನ ಕೇಳೋದಿಲ್ಲ. ಅದು ಲಕ್ಷಗಳನ್ನೇ ಕೇಳೋದು. ಅದೂ ಒಂದೇ ಬಾರಿಗೆ ಟ್ರೀಟ್‌ ಮೆಂಟ್‌ ಮುಗಿದುಬಿಡುತ್ತಾ, ಇಲ್ವಲ್ಲ ? ಮೊದ ಮೊದಲು ತನ್ನ ಮತ್ತು ತನ್ನವರ ಹಣದಲ್ಲಿ ಟ್ರೀಟ್‌ ಮೆಂಟ್‌ ನಡೆಯುತ್ತೆ. ಆಮೇಲೆ? ಅನ್ನೋ ಪ್ರಶ್ನೆ ಬಂದಾಗ ಸಾಲದ ಮೊರೆ ಹೋಗ್ತಾನೆ. ತಾನೇ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರೂ ಕೆಲ ಕಾಲ ವೃದ್ಧಾಶ್ರಮ ಹೇಗೋ ನಡೆದುಕೊಂಡು ಹೋಗುತ್ತೆ. ಆದ್ರೆ, ಯಾವಾಗ ನಾಗರಾಜನಿಗೆ ಇದು ತಾನಂದುಕೊಂಡಷ್ಟು ಕಾಲಾವಧಿಯಲ್ಲಿ ಕೈಬಿಡುವ ಖಾಯಿಲೆಯಲ್ಲ ಅನ್ನೋದು ಮನದಟ್ಟಾಗುತ್ತೋ ಆಗ ತನ್ನ ಆಶ್ರಮದಲ್ಲಿದ್ದ ಹಿರಿಯ ಜೀವಿಗಳೆಲ್ಲರನ್ನೂ ತನ್ನ ಸುತ್ತಮುತ್ತಲಿನ ಸುರಕ್ಷಿತ ಕೇಂದ್ರಗಳಿಗೆ ಕಳುಹಿಸಿ ಕೊಡ್ತಾನೆ. ಆಗ ಖಾಲಿಯಾಗಿ ಬಿಕೋ ಅನ್ನುತ್ತೆ ಸರ್ವಧರ್ಮ ಆಶ್ರಮ.

ಅದೆಷ್ಟು ನೊಂದಿರಬೇಕೋ ಈ ವ್ಯಕ್ತಿ ಆಗ. ಪರಿಸ್ಥಿತಿ ಹೀಗಿದ್ದಾಗಲೂ ಸತತ ಮೂರು ವರ್ಷಗಳ ಕಾಲ ಟ್ರೀಟ್‌ ಮೆಂಟ್‌ ಪಡೆದ ನಾಗರಾಜ್‌, ಆತ್ಮ ಸ್ಥೈರ್ಯದ ಬಲದಿಂದಲೋ, ಆಪ್ತರ ಹಾರೈಕೆಯಿಂದಲೋ, ಕುಟುಂಬದವರು ನೀಡಿದ ಬೆಂಬಲದಿಂದಲೋ, ತನ್ನ ಆಶ್ರಮದಲ್ಲಿದ್ದ ಆ ಹಿರಿಯ ಜೀವಿಗಳ ಆಶೀರ್ವಾದ, ಪ್ರಾರ್ಥನೆಯಿಂದಲೋ ಒಟ್ಟಿನಲ್ಲಿ ಕ್ಯಾನ್ಸರ್‌ ಮಾರಿಯನ್ನು ಗೆದ್ದು ಮನೆಗೆ ಬರ್ತಾನೆ ನಾಗರಾಜ್.‌ ಕ್ಯಾನ್ಸರ್‌ ನಿಂದ ಗುಣಮುಖನಾಗಿ ಬಂದರೂ ಕೂಡಾ ನಾಗರಾಜ್‌ ಜೀವನ ಶೈಲಿ ಬದಲಾಗೋದು ಸಹಜ. ಆದರೂ ಮನೆಗೆ ಬಂದ ಕೆಲ ವಾರಗಳ ಬಳಿಕ ಮತ್ತೆ ತನ್ನ ಕನಸಿನ ಆಶ್ರಮವನ್ನು ತೆರೆಯೋದಕ್ಕೆ ಯೋಚಿಸ್ತಾನೆ. ಅದೇ ಸಮಯಕ್ಕೆ ಸರಿಯಾಗಿ ಇಡೀ ಪ್ರಪಂಚಕ್ಕೆ ಕೊರೊನಾ ಅಪ್ಪಳಿಸುತ್ತೆ. ಆಮೇಲೆರಡು ವರ್ಷಗಳ ಕಾಲ ಎಲ್ಲ ಕನಸುಗಳು ನಿಂತಲ್ಲೇ ನಿಂತುಬಿಡ್ತವೆ. ಕೊರೊನಾದ ಕರಾಳ ದಿನಗಳನ್ನು ಮರೆತು ಎಲ್ಲರ ಬದುಕುಗಳೂ ಮತ್ತೆ ಹಳಿಗೆ ಮರಳಿವೆ. ಅಂತೆಯೇ ನಾಗರಾಜ್‌ ಕನಸುಗಳು ಕೂಡಾ ಮತ್ತೆ ಚುರುಕು ಪಡೆದಿವೆ. ಈ ಕಾರಣದಿಂದಾಗಿಯೇ ನಾಗರಾಜ್‌ ಮತ್ತೆ ಆಶ್ರಮದ ಬೀಗ ತೆಗೆದಿದ್ದಾನೆ. ವರ್ಷಗಟ್ಟಲೆ ಧೂಳು ಹಿಡಿದ ಆಶ್ರಮವನ್ನು ಮತ್ತೆ ಹಳೆಯ ಕಳೆಗೆ ತರುವ ನಿಟ್ಟಿನಲ್ಲಿ ನಿರತನಾಗಿದ್ದಾನೆ. ಇಲ್ಲಿಂದ ಭಾರದ ಮನಸ್ಸಿನಿಂದ ಮತ್ತು ನೋವಿನಿಂದ ಬೇರೆ ಬೇರೆ ಸುರಕ್ಷಿತ ಕೇಂದ್ರಗಳಿಗೆ ಹೋಗಿದ್ದವರಿಗೂ ಈ ಸುದ್ದಿ ಗೊತ್ತಾಗಿದೆ. ಈಗ ಅವರೆಲ್ಲರೂ ಮತ್ತೆ ಇದೇ ಆಶ್ರಮಕ್ಕೆ ಮರಳೋದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಸಾವಿನ ಹೊಸ್ತಿಲವರೆಗೂ ಹೋಗಿ ಮರಳಿರುವ ನಾಗರಾಜ್‌ ವಿಶ್ವಾಸ ನೂರ್ಮಡಿಸಿದೆ. ಹಳಬರಷ್ಟೇ ಅಲ್ಲದೆ ಇನ್ನೂ ಯಾರಾದರೂ ಹೊಸದಾಗಿ ಆಶ್ರಮಕ್ಕೆ ಬರುವುದಾದರೆ ಸದಾ ಸ್ವಾಗತ ಅಂತಲೂ ತಿಳಿಸಿದ್ದಾನೆ. ಇನ್ನು ಮುಂದೆ ಆಶ್ರಮದಲ್ಲಿನ ಹಿರಿಯರಿಗೆ ಯೋಗ ತರಬೇತಿ, ಪ್ರಕೃತಿ ಚಿಕಿತ್ಸೆ, ಮನರಂಜನಾ ಕಾರ್ಯಕ್ರಮಗಳಂಥಹ ಹಲವು ಹೊಸ ಯೋಜನೆಗಳನ್ನ ಹಮ್ಮಿಕೊಳ್ಳುವ ವಿಶ್ವಾಸವನ್ನ ವ್ಯಕ್ತಪಡಿಸಿದ್ದಾನೆ. ಜೀವನದಲ್ಲಿ ಅತಿ ದೊಡ್ಡ ಪೆಟ್ಟು ತಿಂದಿರುವ ನಾಗರಾಜನಿಗೆ ಲೌಕಿಕ ಬದುಕಿನ ಅಸಲಿಯತ್ತು ಗೊತ್ತಾಗಿದೆ. ಜೀವನದ ಸಾರ್ಥಕತೆಯನ್ನು ತಾನೇ ಹುಡುಕಿಕೊಂಡಿದ್ದಾನೆ. ಯಾವ ದಾನಿಗಳ ಬಾಗಿಲ ಬಳಿಯೂ ನಿಲ್ಲದೆ, ಸರ್ಕಾರದತ್ತ ಮುಖವನ್ನೂ ಮಾಡದೆ, ತನ್ನ ಕೈಲಾದುದ್ದರಲ್ಲಿಯೇ ಎಲೆ ಮರೆಯ ಕಾಯಿಯಂತೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ನಾಗರಜನಿಗೆ ಶುಭವಾಗಲಿ ಅನ್ನೋದೇ ಎಲ್ಲರ ಬಯಕೆ.

Leave a Reply

Your email address will not be published. Required fields are marked *

error: Content is protected !!