ಯಶಸ್ಸಿನ ಹಾದಿಯಲ್ಲಿ ‘ನಮೋ ಭೂತಾತ್ಮ-2’ – ಕೋಮಲ್ ಅಭಿಮಾನಿಗಳು, ಪ್ರೇಕ್ಷಕರು ಜೈಕಾರ ಹಾಕಿ ಸ್ವಾಗತ

ದಾವಣಗೆರೆ; ’ನಮೋ ಭೂತಾತ್ಮ’ ಚಿತ್ರವು 9 ವರ್ಷಗಳ ಹಿಂದೆ ತೆರೆಕಂಡು ಹಿಟ್ ಆಗಿತ್ತು. ಈಗ ’ನಮೋ ಭೂತಾತ್ಮ-2’ ಶುಕ್ರವಾರ ಬಿಡುಗಡೆಗೊಂಡು ಎಲ್ಲಾ ಕಡೆಗಳಿಂದಲೂ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಇದಕ್ಕಾಗಿ ತಂಡವು ಖುದ್ದು ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡುತ್ತಿದೆ. ಪ್ರಥಮ ಹಂತವಾಗಿ ದಾವಣಗೆರೆಯ ತ್ರಿಶೂಲ್ ಚಿತ್ರಮಂದಿರಕ್ಕೆ ಹೋದ ಸಂದರ್ಭದಲ್ಲಿ ಕೋಮಲ್‌ಕುಮಾರ್ ಅಭಿಮಾನಿಗಳು, ಪ್ರೇಕ್ಷಕರು ಜೈಕಾರ ಹಾಕಿ ಸ್ವಾಗತಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೋಮಲ್, ಜಾನರ್ ಅದೇ ಆಗಿದ್ದರೂ ಕಥೆ ಮತ್ತು ಪಾತ್ರಗಳು ಬೇರೆಯದೆ ಆಗಿರುತ್ತದೆ. ಎಲ್ಲಾ ಯಶಸ್ಸಿನ ಸ್ಟೋರಿಗಳ ಹಿಂದೆ ಭಯಾನಕ ಕಥೆ ಅಲ್ಲದೆ ಹಾಸ್ಯ ಉತ್ತಮವಾಗಿ ಸಾಥ್ ನೀಡುತ್ತದೆ ಎನ್ನುವುದಕ್ಕೆ ಇಂತಹ ಚಿತ್ರಗಳೆ ಸಾಕ್ಷಿಯಾಗಿದೆ.ಬಹುತೇಕ ಶೂಟಿಂಗ್ ರಾತ್ರಿ ವೇಳೆ ನಡೆಸಲಾಗಿದೆ. ಎಲ್ಲಾ ವರ್ಗದವರು ನೋಡಬಹುದಾದ ಸಿನಿಮಾ. ನಿಮ್ಮಗಳ ಸಹಕಾರದಿಂದ ಚಿತ್ರವು ಗೆದ್ದಿದೆ. ಹೊಸ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಪ್ರಾರಂಭದಲ್ಲಿ 104 ಕೆಜಿ ತೂಕ ಇದ್ದು, ವಿರಾಮಾದ ತರುವಾಯ 77 ಕೆಜಿಗೆ ಬದಲಾದೆ. ಇದರಿಂದ ಒಂದಷ್ಟು ಜನರು ಹಳೇ ಕೋಮಲ್ ಎಲ್ಲಿ ಅಂತ ಕೇಳುತ್ತಿದ್ದರು.
’ಗೋವಿಂದಾಯ ನಮ:’ ಸಿನಿಮಾ ಇದೇ ಟಾಕೀಸ್‌ದಲ್ಲಿ 100 ದಿನ ಪೂರೈಸಿತ್ತು. ಅದರಿಂದಲೇ ಪ್ರಚಾರ ಕಾರ್ಯವನ್ನು ಇಲ್ಲಿಂದಲೇ ಶುರು ಮಾಡಿದ್ದೇವೆ.ಮುಂದೆ ಬೇರೆ ಜಿಲ್ಲಾ ಕೇಂದ್ರಗಳಿಗೆ ಹೋಗುವ ಇರಾದೆ ಇದೆ ಎಂದರು. ನಿರ್ದೇಶಕ ಮುರಳಿ, ನಟ ಮಾಂತೇಶ್, ಸಂತೋಷ್ ಉಪಸ್ತಿತರಿದ್ದರು ಎಂ.ಎಸ್.ಗೋಲ್ಡನ್ ಸಿನಿಮಾದ ಮೂಲಕ ನಿರ್ದೇಶಕರ ಅಕ್ಕನ ಮಗ ಸಂತೋಷ್‌ಶೇಖರ್ ಹಾಗೂ ಮುರಳಿ ಜಂಟಿಯಾಗಿ ನಿರ್ಮಿಸಿದ್ದಾರೆ. ತಾರಾಗಣದಲ್ಲಿ ಲೇಖಾಚಂದ್ರ, ಮೋನಿಕಾ, ಜಿ.ಜಿ.ರುದ್ರೇಶ್, ಮಾಂತೇಶ್, ವರುಣ್ ಮುಂತಾದವರು ನಟಿಸಿದ್ದಾರೆ.