ನ್ಯಾಷನಲ್ ಹೆರಾಲ್ಡ್ ಮನಿ ಲಾಂಡರಿಂಗ್ ಪ್ರಕರಣ: 751.9 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ
ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಕಾಂಗ್ರೆಸ್’ನ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರಿಗೆ ಸಂಬಂಧಿಸಿದ ಯಂಗ್ ಇಂಡಿಯನ್ ಕಂಪನಿಗೆ ಸೇರಿದ ಹಲವು ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.
ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಗಾಂಧಿ ಕುಟುಂಬಕ್ಕೆ ಸೇರಿದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL) ದೆಹಲಿ, ಮುಂಬೈ , ಲಖನೌ ಸೇರಿದಂತೆ ಕೆಲ ನಗರದಲ್ಲಿರುವ ಸ್ಥಿರ ಆಸ್ತಿ ರೂಪದ ಆದಾಯ 661.69 ಕೋಟಿ ರೂಪಾಯಿ ಹಾಗೂ ಯಂಗ್ ಇಂಡಿಯಾ ಸಂಸ್ಥೆಯ ಈಕ್ವಿಟಿ ಷೇರುಗಳಲ್ಲಿ ಹೂಡಿಕೆ ಮಾಡಿರುವ 90.21 ಕೋಟಿ ರೂಪಾಯಿಯನ್ನು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL) ಹಾಗೂ ಯಂಗ್ ಇಂಡಿಯನ್(YI) ಸಂಸ್ಥೆಯ ಒಟ್ಟು 752 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ಥಿ ಹಾಗೂ ಹೂಡಿಕೆ ರೂಪದ ಅಕ್ರಮ ಆದಾಯದವನ್ನು ಮನಿ ಲಾಂಡರಿಂಗ್ ಪ್ರಕರಣದಲ್ಲಿ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲು ಇಡಿ ಆದೇಶ ಹೊರಡಿಸಿದೆ. ದೆಹಲಿ, ಮುಂಬೈ, ಲಖನೌ ಸೇರಿದಂತೆ ಇತರ ನಗರಗಳಲ್ಲಿನ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಇಡಿ ಟ್ವೀಟ್ ಮಾಡಿದೆ.
ಕಾಂಗ್ರೆಸ್ಸಿನ ಮುಖವಾಣಿಯಾಗಿರುವ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಅಕ್ರಮ ಹಣ ವರ್ಗಾವಣೆ ಕುರಿತು ಇಡಿ ತನಿಖೆ ನಡೆಸುತ್ತಿದೆ. ನ್ಯಾಷನಲ್ ಹೆರಾಲ್ಡ್ ಕಂಪನಿ ಸಹಸ್ರಾರು ಕೋಟಿ ರೂಪಾಯಿ ಆಸ್ತಿ ಹೊಂದಿದೆ. ಅದರ ಮಾಲೀಕತ್ವವನ್ನು ಸದ್ಯ ಯಂಗ್ ಇಂಡಿಯನ್ ಸಂಸ್ಥೆ ಹೊಂದಿದೆ. ಈ ಯಂಗ್ ಇಂಡಿಯನ್ ಸಂಸ್ಥೆಯಲ್ಲಿ ಕೇವಲ ಮಲ್ಲಿಕಾರ್ಜುನ ಖರ್ಗೆ ಮಾತ್ರ ಉದ್ಯೋಗಿಯಾಗಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣ ಬರೋಬ್ಬರಿ 2,000 ಕೋಟಿ ರೂಪಾಯಿ ಹಗರಣವಾಗಿದೆ. ದೆಹಲಿಯ ಐಟಿಒ ಬಳಿ ಬಹಾದ್ದೂರ್ ಶಾ ಜಾಫರ್ ಮಾರ್ಗದಲ್ಲಿರುವ ‘ಹೆರಾಲ್ಡ್ ಹೌಸ್’ ಈ ಪತ್ರಿಕೆಯ ಕೇಂದ್ರ ಕಚೇರಿ. ತೀವ್ರ ನಷ್ಟದಲ್ಲಿದ್ದ ಅಸೋಸಿಯೇಟೆಡ್ ಜರ್ನಲ್ (ಎಜೆಎಲ್)ಗೆ 2001-02 ಹಾಗೂ 2010-11ರ ನಡುವೆ ಕಾಂಗ್ರೆಸ್ 90 ಕೋಟಿ ರು. ಸಾಲ ನೀಡಿತ್ತು. ಇದಕ್ಕೆ ಪ್ರತಿಯಾಗಿ ಸೋನಿಯಾ, ರಾಹುಲ್ ಮುನ್ನಡೆಸುತ್ತಿದ್ದ ಯಂಗ್ ಇಂಡಿಯನ್ ಕಂಪನಿಗೆ ಎಜೆಎಲ್ ಷೇರುಗಳನ್ನು ಹಂಚಿಕೆ ಮಾಡಲಾಗಿತ್ತು. ನೂರಾರು ಕೋಟಿ ರು. ಬೆಲೆ ಬಾಳುವ ಆಸ್ತಿಯನ್ನು ಕೇವಲ 90 ಕೋಟಿ ರು. ಸಾಲ ಕೊಟ್ಟಂತೆ ಮಾಡಿ ಖರೀದಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಇ.ಡಿ. ಪ್ರಕರಣ ದಾಖಲಿಸಿಕೊಂಡಿತ್ತು.
ಈ ಸಂಬಂಧ ಸಿಬಿಐ ಈಗಾಗಲೇ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿದೆ. ರಾಜಕೀಯ ದುರುದ್ದೇಶಕ್ಕಾಗಿ ಕೇಂದ್ರವು ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್, ಅಕ್ರಮ ಹಣ ವರ್ಗಾವಣೆ ಅಥವಾ ಯಾವುದೇ ವಿತ್ತೀಯ ವಿನಿಮಯಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಪ್ರತಿಪಾದಿಸಿದೆ.