ಸುಳ್ಯ ಕೊಡಗು ಗಡಿಭಾಗವಾದ ಕೂಜಿಮಲೆ ವ್ಯಾಪ್ತಿಯಲ್ಲಿ ನಕ್ಸಲರು ಪ್ರತ್ಯಕ್ಷ..!
ಸುಳ್ಯ; ಕೊಡಗು ದಕ್ಷಿಣಕನ್ನಡ ಗಡಿ ಭಾಗದಲ್ಲಿ ನಕ್ಸಲರು ಪ್ರತ್ಯಕ್ಷ ವಾಗಿದ್ದಾರೆ ಎನ್ನಲಾಗಿದೆ. ಮಡಿಕೇರಿ ತಾಲೂಕು ಕಡಮಕಲ್ಲು ಬಳಿಯ ಕೂಜಿಮಲೆ ರಬ್ಬರ್ ಎಸ್ಟೇಟ್ ಬಳಿ ನಕ್ಸಲರು ಕಾಣಿಸಿಕೊಂಡಿದ್ದಾರೆ.
ಶನಿವಾರ ಸಂಜೆ 8 ಮಂದಿ ನಕ್ಸಲರ ತಂಡ ಕೂಜಿಮಲೆ ಬಳಿ ಕಾಣಿಸಿಕೊಂಡಿದ್ದಾರೆ. ಕೂಜಿಮಲೆ ಅಂಗಡಿಯೊಂದರಿಂದ 3500 ನಗದು ನೀಡಿ ದಿನಸಿ ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ. ಕೂಜಿಮಲೆ ದಕ್ಷಿಣ ಕನ್ನಡ ಜಿಲ್ಲೆಯ ಗುತ್ತಿಗಾರು, ಕೊಲ್ಲಮೊಗರಿಗೆ ಹೊಂದಿಕೊಂಡಿರುವ ಪ್ರದೇಶವಾಗಿದ್ದು, ಕೂಜಿಮಲೆ ರಬ್ಬರ್ ಎಸ್ಟೇಟ್ ಪ್ರದೇಶದ ಬಳಿ ನಕ್ಸಲರ ಸಂಚಲನವಲನ ಕಂಡುಬಂದಿದೆ.
ಇದು ಚಿಕ್ಕಮಗಳೂರು – ಕೊಡಗು – ದಕ್ಷಿಣ ಕನ್ನಡ – ಕೇರಳಕ್ಕೆ ಹೊಂದಿಕೊಂಡ ದಟ್ಟ ಅರಣ್ಯ ಪ್ರದೇಶವಾಗಿದ್ದು, ಪಶ್ಚಿಮ ಘಟ್ಟ ಪ್ರದೇಶದ ಇದೇ ಅರಣ್ಯ ಭಾಗದಲ್ಲಿ ಆಗಾಗ ನಕ್ಸಲರ ಹೆಜ್ಜೆಗುರುತು ಪತ್ತೆಯಾಗಿವೆ.
ಇದಕ್ಕೂ ಮೊದಲು 2012ರಲ್ಲಿ ಕಾಲೂರು ಗ್ರಾಮದಲ್ಲಿ ನಕ್ಸಲರು ಪ್ರತ್ಯಕ್ಷಗೊಂಡಿದ್ದರು. ಬಳಿಕ 2018ರ ಫೆಬ್ರವರಿಯಲ್ಲಿ ಸಂಪಾಜೆಯ ಗುಡ್ಡೆಗದ್ದೆ ಭಾಗದಲ್ಲಿ ಸುಳಿದಾಟ ಕಂಡುಬಂದಿತ್ತು. ಇದಾದ 5 ವರ್ಷದ ಬಳಿಕ ಕೂಜಿಮಲೆ ಭಾಗದಲ್ಲಿ ನಕ್ಸಲರ ಸುಳಿದಾಟ ಕಾಣಿಸಿಕೊಂಡಿದೆ.
ಲೋಕಸಭಾ ಚುನಾವಣೆಯ ಸಂದರ್ಭದಲ್ಲೇ ನಕ್ಸಲರು ಆಕ್ಟಿವ್ ಆಗಿದ್ದಾರೆ. ಹೀಗಾಗಿ ಕೊಡಗು ಜಿಲ್ಲಾ ಪೊಲೀಸರಿಂದ ಅರಣ್ಯಕ್ಕೆ ಹೊಂದಿಕೊಂಡ ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಕಟ್ಟೆಚ್ಚರವಹಿಸಿದ್ದಾರೆ.