Human Traffic : ಮಾನವ ಕಳ್ಳ ಸಾಗಾಣೆ ತಡೆಗಟ್ಟಲು ಅಧಿಕಾರಿಗಳು ಸರ್ಕಾರದ ಕಣ್ಣು, ಕಿವಿಯಾಗಿ ಕಾರ್ಯನಿರ್ವಹಿಸಿ : ಡಾ. ವೆಂಕಟೇಶ್ ಎಂ.ವಿ

ಮಾನವ ಕಳ್ಳ ಸಾಗಾಣೆ ತಡೆಗಟ್ಟಲು ಅಧಿಕಾರಿಗಳು ಸರ್ಕಾರದ ಕಣ್ಣು, ಕಿವಿಯಾಗಿ ಕಾರ್ಯನಿರ್ವಹಿಸಿ : ಡಾ. ವೆಂಕಟೇಶ್ ಎಂ.ವಿ

ದಾವಣಗೆರೆ : ಮಹಿಳಾ ಮತ್ತು ಮಕ್ಕಳ ಕಳ್ಳ ಸಾಗಾಣೆ ತಡೆಗಟ್ಟಲು ಅಧಿಕಾರಿಗಳು ಸರ್ಕಾರದ ಕಣ್ಣು, ಕಿವಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಎಂ.ವಿ ಹೇಳಿದರು. ಸೋಮವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೋಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಜರುಗಿದ ಮಾನವ ಕಳ್ಳ ಸಾಗಾಣಿಕೆ ತಡೆ ಕುರಿತು ಜಾಗೃತಿ ಮೂಡಿಸುವ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಾನವ ಕಳ್ಳ ಸಾಗಾಣಿಕೆ ಎಂಬುದು ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ. ಅದರಲ್ಲೂ ಇದಕ್ಕೆ ಮಹಿಳೆಯರು ಮತ್ತು ಮಕ್ಕಳು ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಇದು ಕೇವಲ ರಾಜ್ಯ ಮತ್ತು ರಾಷ್ಟ್ರದ ಸಮಸ್ಯೆಯಾಗಿರದೇ ಇಡೀ ವಿಶ್ವದ ಸಮಸ್ಯೆಯಾಗಿದೆ. ಆದ್ದರಿಂದ  ಮಹಿಳೆ ಮತ್ತು ಮಕ್ಕಳ ಸುರಕ್ಷತೆಗಾಗಿ ಸರ್ಕಾರದಡಿ ಅನೇಕ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ, ಸ್ವಾಧಾರ ಕೇಂದ್ರಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಣ್ಗಾವಲು ಸಮಿತಿಯನ್ನು ರಚಿಸಲಾಗಿದೆ. ಸರ್ಕಾರದೊಂದಿಗೆ ಸಮಾಜದ ಪ್ರತಿಯೊಬ್ಬ ನಾಗರೀಕ ಹಾಗೂ ಸರ್ಕಾರಿ ಇಲಾಖೆಗಳು ಕೈ ಜೋಡಿಸಿ ಕ್ರಿಯಾಶೀಲತೆಯಿಂದ ಕೆಲಸ ಮಾಡಿದರೆ ಮಾತ್ರ ಇದನ್ನು ನಿಯಂತ್ರಿಸಬಹುದು ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ಎನ್. ಹೆಗಡೆ ಮಾತನಾಡಿ 2013 ರಲ್ಲಿ ವಿಶ್ವ ಸಂಸ್ಥೆಯಲ್ಲಿ ಜೂನ್ 30 ರಂದು ಮಾನವ ಕಳ್ಳ ಸಾಗಾಣಿಕೆ ತಡೆ ದಿನವನ್ನಾಗಿ ಆಚರಿಸುವಂತೆ ಕರೆ ನೀಡಿತು, ಇದರ ಮುಖ್ಯ ಉದ್ದೇಶವೆಂದರೆ ಸಮಾಜದ ಯಾವೊಬ್ಬ ವ್ಯಕ್ತಿಗೆ ಆಗಲಿ ಸಂವಿಧಾನದಲ್ಲಿರುವ ಹಕ್ಕು, ಸ್ವಾತಂತ್ರ್ಯಗಳಿಂದ ವಂಚಿತರಾಗಬಾರದು ಅದನ್ನು ಒದಗಿಸುವ ನಿಟ್ಟಿನಲ್ಲಿ ಶ್ರಮಿಸುವುದಾಗಿದೆ.

ರಾಜ್ಯದ ಕಳೆದ 5 ವರ್ಷಗಳಲ್ಲಿ ಕಳೆದು ಹೋದ ಬಾಲಕ ಬಾಲಕಿಯರಲ್ಲಿ 21,187 ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೋಲೀಸ್ ಇಲಾಖೆ , ಕಾನೂನು ಸೇವಾ ಪ್ರಾಧಿಕಾರ ಹಾಗೂ ಇತರ ಇಲಾಖೆಗಳ ಸಹಯೋಗದೊಂದಿಗೆ ರಕ್ಷಿಸಲಾಗಿದೆ. ಆದ್ದರಿಂದ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಸಂವಿಧಾನದಲ್ಲಿ ಹಲವಾರು ಕಾನೂನುಗಳಿದ್ದು, ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಅವಕಾಶವಿದೆ, ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ. ಅರುಣ್. ಕೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಮಹಾವೀರ್.ಎಂ. ಕರೆಣ್ಣವರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರಾಮಾನಾಯ್ಕ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅರುಣ್‍ಕುಮಾರ್.ಎಲ್.ಹೆಚ್, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!