ಪ್ರಧಾನಿ ಮೋದಿಗೆ ಚೊಂಬು ತೋರಿಸಲು ಬಂದ ನಲಪಾಡ್ ನನ್ನು ಬಂಧಿಸಿದ ಪೊಲೀಸರು

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚೊಂಬು ತೋರಿಸಲು ಯತ್ನಿಸಿದ ಯುವ ಕಾಂಗ್ರೆಸ್ ಮುಖಂಡ ಮೊಹಮದ್‌ ನಲಪಾಡ್ ಅವರನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ರಾಜ್ಯ ರಾಜಧಾನಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಎಂಟ್ರಿ ಕೊಟ್ಟಿದ್ದಾರೆ.  ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದ ವಿಜಯ ಸಂಕಲ್ಪ ಸಮಾವೇಶದಲ್ಲಿ ಮೋದಿ ಪಾಲ್ಗೊಂಡಿದ್ದರು. ಸಮಾವೇಶವನ್ನು ಮುಗಿಸಿಕೊಂಡು ಮೇಕ್ರಿ ಸರ್ಕಲ್ ಬಳಿ ಪ್ರಧಾನಿ ಮೋದಿ ಹಿಂದಿರುಗುತ್ತಿದ್ದರು, ಈ ವೇಳೆ ಚೊಂಬು ಪ್ರದರ್ಶನಕ್ಕೆ ಕಾಂಗ್ರೆಸ್ ಮುಖಂಡರು ಯತ್ನಿಸಿದ್ದರು.

ಮೇಕ್ರಿ ಸರ್ಕಲ್ ಬಳಿ ಪ್ರಧಾನಿ ಮೋದಿ ಹಾದು ಹೋಗುತ್ತಿದ್ದಾಗ ಪ್ರಧಾನಿ ಮೋದಿ ಅವರಿಗೆ ಚೊಂಬು ಪ್ರದರ್ಶನಕ್ಕೆ ಮೊಹಮ್ಮದ್ ನಲಪಾಡ್ ಮುಂದಾಗಿದ್ದರು. ಕೂಡಲೇ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ದೌಡಾಯಿಸಿ ಮೊಹಮ್ಮದ್ ನಲಪಾಡ್ ಸೇರಿದಂತೆ ಇಬ್ಬರು ಕಾಂಗ್ರೆಸ್ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ನಲಪಾಡ್‌ ಚೊಂಬು ಪ್ರದರ್ಶನ ಮಾಡೋದು ತಪ್ಪಾ ಅಂತಾ ಆಕ್ರೋಶ ಹೊರಹಾಕಿದರು.

ಮೋದಿ ತೆರಳುವ ರಸ್ತೆ ಮಾರ್ಗದಲ್ಲಿ (ಮೇಖ್ರಿ ಸರ್ಕಲ್‌) ಅರ್ಧಗಂಟೆ ಮುಂಚೆಯೇ ಬಂದಿದ್ದ ನಲಪಾಡ್‌ ನಂಬರ್‌ ಇಲ್ಲದ ಕಾರಿನಲ್ಲಿ ಕಾದು ಕುಳಿತಿದ್ದರು. ಕಪ್ಪು ಬಣ್ಣದ ಲ್ಯಾಂಡ್ರೋವರ್ ಡಿಫೆಂಡರ್ ಕಾರಿನಲ್ಲಿ ನಲಪಾಡ್‌ ಜೊತೆಗೆ 8 ಜನ ಇದ್ದರು. ಮೋದಿ ತೆರಳುವ ಸಂದರ್ಭದಲ್ಲೇ ಚೊಂಬು ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!