ಬಿಸಿಯೂಟ ತಯಾರಕರ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ

ದಾವಣಗೆರೆ: ಬಿಸಿಯೂಟ ತಯಾರಕರಿಗೆ ವೇತನ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ತಾಲ್ಲೂಕು ಸಮಿತಿಯ ನೇತೃತ್ವದಲ್ಲಿ ಬಿಸಿಯೂಟ ತಯಾರಕರು ಪ್ರತಿಭಟನೆ ನಡೆಸಿದರು.

ಇಲ್ಲಿನ ತಾಲ್ಲೂಕು ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಉಪತಹಸೀಲ್ದಾರ್ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು.

ಇದೇ ವೇಳೆ ಮಾತನಾಡಿದ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು, ಬಿಸಿಯೂಟ ತಯಾರಕರು ಕಳೆದ ಹತ್ತೊಂಬತ್ತು ವರ್ಷಗಳಿಂದ ಕನಿಷ್ಟ ವೇತನ ಇಲ್ಲದೆ ಗೌರವ ಸಂಭಾವನೆ ಪಡೆದು ದುಡಿಯುತ್ತಿರುವುದರಿಂದ ಜೀವನ ನಿರ್ವಹಿಸಲು ಕಷ್ಟವಾಗುತ್ತಿದೆ, ಆದ್ದರಿಂದ ಪ್ರಸಕ್ತ ಬಜೆಟ್ನಲ್ಲಿ ಕನಿಷ್ಟ ವೇತನ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.

ಉತ್ತರ ಪ್ರದೇಶ ರಾಜ್ಯದ ಅಲಹಾಬಾದ್ ಹೈಕೋರ್ಟ್ ಬಿಸಿಯೂಟ ತಯಾರಕರನ್ನು ಖಾಯಂಗೊಳಿಸಿ ಎಲ್ಲಾ ಸೌಲಭ್ಯಗಳನ್ನು ನೀಡುವಂತೆ ಆದೇಶ ನೀಡಿದೆ. ಅದೆ ಮಾದರಿಯಲ್ಲಿ ರಾಜ್ಯದ ಬಿಸಿಯೂಟ ತಯಾರಕರಿಗೂ ಕೆಲಸ ಖಾಯಂಗೊಳಿಸಬೇಕು. ಕನಿಷ್ಟ 21 ಸಾವಿರ ರು., ಮಾಸಿಕ ವೇತನ ನೀಡಬೇಕು, 60 ವರ್ಷ ಮೀರಿ ನಿವೃತ್ತಿಗೊಂಡವರಿಗೆ ಕನಿಷ್ಟ 2 ಲಕ್ಷ ಇಡಿಗಂಟು ನೀಡಬೇಕು ಎಂಬಿತ್ಯಾದಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.

ದಾವಣಗೆರೆ ತಾಲ್ಲೂಕು ಬಿಸಿಯೂಟ ತಯಾರಕರ ತಾಲೂಕು ಸಮಿತಿ ಅಧ್ಯಕ್ಷೆ ಕಾಂ.ಮಳಲಕೆರೆ ಜಯಮ್ಮ, ಕಾರ್ಯದರ್ಶಿ ಕಾಂ ಜ್ಯೋತಿಲಕ್ಷ್ಮಿ, ಖಜಾಂಚಿ ಕಾಂ ಪದ್ಮಾ ಜಿಲ್ಲಾ ಸಮಿತಿ ಉಪಾಧ್ಯಕ್ಷೆ ಕಾಂ. ಸರೋಜಾ ಜಿಲ್ಲಾ ಸಂಚಾಲಕರಾದ ಕಾಂ ಸಿ. ರಮೇಶ್ ಮುಖಂಡರಾದ ಕಾಂ ನರೇಗಾ ರಂಗನಾಥ್,ಪರಶುರಾಮ್,ವನಜಾಕ್ಷಮ್ಮ, ಶೋಭಾ, ಪಾರ್ವತಿಬಾಯಿ, ಮಂಜುಳ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!