ಮಂಗಳೂರು: ನ್ಯಾಚುರಲ್‌ ಐಸ್‌ ಕ್ರೀಂ ಸಂಸ್ಥಾಪಕ ರಘುನಂದನ್‌ ಕಾಮತ್‌ ಇನ್ನಿಲ್ಲ

ಮಂಗಳೂರು: ನ್ಯಾಚುರಲ್‌ ಐಸ್‌ ಕ್ರೀಂ ಸಂಸ್ಥಾಪಕ, ಮಂಗಳೂರು ಮೂಲದ ರಘುನಂದನ್‌ ಕಾಮತ್‌ (70) ಅವರು ಮೇ 17ರಂದು ಮುಂಬಯಿಯಲ್ಲಿ ಕೊನೆಯುಸಿರೆಳೆದಿದ್ದಾರೆ.

ರಘುನಂದನ್‌ ಅವರು 1954ರಲ್ಲಿ ಮೂಲ್ಕಿಯಲ್ಲಿ ಬಡ ಕುಟಂಬವೊಂದರಲ್ಲಿ ಜನಿಸಿದ್ದರು. ಕಾಮತ್‌ ಅವರ ತಂದೆ ಹಣ್ಣಿನ ವ್ಯಾಪಾರಿಯಾಗಿದ್ದರು. ತಂದೆಯೊಂದಿಗೆ ವ್ಯಾಪಾರದಲ್ಲಿ ಕೈ ಜೋಡಿಸಿದ ಅವರು ಬಳಿಕ ಮಂಗಳೂರಿನಿಂದ ತನ್ನ 14ನೇ ವಯಸ್ಸಿನಲ್ಲೇ ಬಾಂಬೆಗೆ ತೆರಳಿದರು. ಅಣ್ಣನ ಹೋಟೆಲ್ನಲ್ಲಿ ಕೆಲ ಕಾಲ ಕೆಲಸ ಮಾಡಿ ಬಳಿಕ 1984 ರಲ್ಲಿ ಕಾಮತ್ ಅವರು ತಮ್ಮ ಮೊದಲ ನ್ಯಾಚುರಲ್ಸ್ ಐಸ್ ಕ್ರೀಮ್ ಮುಂಬೈನ ಜುಹುದಲ್ಲಿ ಸ್ಥಾಪಿಸಿದರು. ಅದು ದೇಶಾದ್ಯಂತ ಜನಪ್ರಿಯವಾಗಿ ದೊಡ್ಡ ಉದ್ಯಮವಾಗಿ ಬೆಳೆದಿದೆ.

1984 ರಲ್ಲಿ ಕೇವಲ 4 ಮಂದಿ ಸಿಬ್ಬಂದಿ ಜತೆ ನ್ಯಾಚುರಲ್ ಐಸ್ ಕ್ರೀಂ ಸಂಸ್ಥೆಯನ್ನು ಆರಂಭಿಸಿದರು. 40ಕ್ಕೂ ಅಧಿಕ ನಗರಗಳಲ್ಲಿ 140ಕ್ಕೂ ಅಧಿಕ ಮಳಿಗೆಗಳನ್ನು ನ್ಯಾಚುರಲ್ ಐಸ್‌ಕ್ರೀಂ ತನ್ನ ಔಟ್‌ಲೆಟ್‌ಗಳನ್ನು ಹೊಂದಿದ್ದು, 400 ಕೋಟಿ ರೂ.ಗಳಿಗೂ ಅಧಿಕ ವ್ಯವಹಾರ ನಡೆಸುತ್ತಿದೆ. ಕಾಮತ್ ಅವರು ಸ್ವತಃ ಕುಂಡಗಳಲ್ಲಿ ಹಣ್ಣುಗಳನ್ನು ಬೆಳೆಸುವ ಆಸಕ್ತಿ ಹೊಂದಿದ್ದು ಮಾವು, ಗೇರು, ಹಲಸು ಸಹಿತ ಹಲವಾರು ಹಣ್ಣಿನ ಗಿಡಗಳನ್ನು ಮನೆಯ ತಾರಸಿಯಲ್ಲಿ ಸ್ವತಃ ಬೆಳೆಸಿ ಯಶಸ್ಸು ಕಂಡಿದ್ದರು.

ಐಸ್‌ಕ್ರೀಂಗಳಲ್ಲಿ ಕೃತಕ ಸಾಮಗ್ರಿಗಳು ಇಲ್ಲದ ಸ್ಥಳೀಯ ಸ್ವಾದದ ಬ್ರಾಂಡ್‌ಗಳನ್ನು ಸೃಷ್ಟಿಸಿ ಅಪಾರ ಜನಪ್ರಿಯತೆಯನ್ನು ಗಳಿಸಿದ್ದರು. ನಾಲ್ಕು ದಶಕಗಳ ಹಿಂದೆ ಐಸ್ ಕ್ರೀಂ ಎನ್ನುವುದು ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿತ್ತು. ಕಾಮತ್ ಅವರು ಐಸ್‌ಕ್ರೀಂ ಅನ್ನು ಜಯಪ್ರಿಯಗೊಳಿಸಿ ಎಲ್ಲರಿಗೂ ಲಭ್ಯವಾಗುವಂತೆ ಮತ್ತು ಅದು ಸಮಾರಂಭಗಳಲ್ಲಿ ಒಂದು ಅಗತ್ಯದ ಪದಾರ್ಥ ಎಂಬಷ್ಟರ ಮಟ್ಟಿಗೆ ಬೆಳೆಸಿದರು.

ಐಸ್‌ಕ್ರೀಂನ ಗುಣಮಟ್ಟ ಮತ್ತು ಗ್ರಾಹಕರ ಸಂತೃಪ್ತಿಗೆ ಪ್ರಥಮ ಆದ್ಯತೆ ನೀಡಿದ್ದರು. ಅವರು ಹಲಸು, ಸೀಯಾಳ, ಗೇರುಹಣ್ಣು, ಇತ್ಯಾದಿ ಸ್ಥಳೀಯವಾದ ರುಚಿಗಳನ್ನು ಪರಿಚಯಿಸಿದ್ದರು. ಅವರು ಐಸ್‌ಕ್ರೀಂ ಮ್ಯಾನ್ ಆಫ್ ಇಂಡಿಯಾ ಎಂದೇ ಪ್ರಸಿದ್ಧಿ ಗಳಿಸಿದ್ದರು.

ಅಲ್ಪಕಾಲದ ಅಸೌಖ್ಯದಿಂದ ಮೃತರಾದ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!