55 ಲಕ್ಷ ಸರ್ಕಾರಿ ಶಾಲೆ ಮಕ್ಕಳ ಮಾನಸಿಕ ದೈಹಿಕ ಆರೋಗ್ಯಕ್ಕಾಗಿ ರಾಗಿ ಮಾಲ್ಟ್ ವಿತರಣೆ ಉತ್ತಮ ಪೌಷ್ಠಿಕಾಂಶ ಉತ್ತಮ ಶಿಕ್ಷಣಕ್ಕೆ ರಹದಾರಿ

ಬೆಂಗಳೂರು ಫೆ 22: 55 ಲಕ್ಷ ಸರ್ಕಾರಿ ಶಾಲೆ ಮಕ್ಕಳ ಮಾನಸಿಕ ದೈಹಿಕ ಆರೋಗ್ಯಕ್ಕಾಗಿ ರಾಗಿ ಮಾಲ್ಟ್ ವಿತರಣೆ ಮಾಡಲು ಶುರು ಮಾಡಿದ್ದೇವೆ. ಉತ್ತಮ ಪೌಷ್ಠಿಕಾಂಶ ಉತ್ತಮ ಶಿಕ್ಷಣಕ್ಕೆ ರಹದಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಸಾಯಿ ಶ್ಯೂರ್ ರಾಗಿ ಹೆಲ್ತ್ ಮಿಕ್ಸ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಾಗಿ ಮಾಲ್ಟ್

2013 ರಲ್ಲಿ ನಮ್ಮ ಸರ್ಕಾರ ಬಂದಾಗ ನಮ್ಮಲ್ಲಿ ಹಾಲು ಉತ್ಪಾದನೆ ಹೆಚ್ಚಾಯಿತು. ಈ ಹೆಚ್ಚುವರಿ ಹಾಲಿನ ಮಾರಾಟ ಮತ್ತು ಹಾಲಿನ ಉಪ ಉತ್ಪನ್ನಗಳನ್ಮೂ ಹೆಚ್ಚುವರಿಯಾಗಿ ಉತ್ಪಾದನೆ ಮಾಡಲು ಸಾಧ್ಯವಿರಲಿಲ್ಲ. ಹೀಗಾಗಿ ಆ ಕೂಡಲೇ ಸರ್ಕಾರಿ ಶಾಲಾ ಮಕ್ಕಳಿಗೆ ವಾರದಲ್ಲಿ ಐದು ದಿನ ಹಾಲು ಕೊಡುವ ಕ್ಷೀರಭಾಗ್ಯ ಯೋಜನೆಯನ್ನು ಆರಂಭಿಸಿದೆ. KMF ಮೂಲಕ ಮಕ್ಕಳಿಗೆ ಹಾಲು ಹೋಗುತ್ತದೆ. ಈ ಹಾಲಿನ ಹಣವನ್ನು ಸರ್ಕಾರ KMF ಗೆ ನೀಡುತ್ತದೆ. ಆ ಮೂಲಕ KMF ಗೆ ಹಾಲು ಸರಬರಾಜು ಮಾಡುವ ರೈತರಿಗೆ ನೆರವಾಗುವ ತೀರ್ಮಾನ ಮಾಡಿದೆವು. ಇದರ ಜತೆಗೆ ಕಳೆದ ಬಜೆಟ್ ನಲ್ಲಿ ಶಾಲಾ ಮಕ್ಕಳಿಗೆ ವಾರಕ್ಕೆ ಎರಡು ದಿನ ಮೊಟ್ಟೆ ಕೊಡುವ ಕಾರ್ಯಕ್ರಮ ಶುರು ಮಾಡಿದೆವು ಎಂದು ವಿವರಿಸಿದರು.

ಈಗ ಅತ್ಯಂತ ಪೌಷ್ಠಿಕವಾದ ರಾಗಿ ಮಾಲ್ಟ್ ಕೊಡುವ ಕಾರ್ಯಕ್ರಮ ಶುರುವಾಗಿದೆ. ಇದರಿಂದ ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ. ಮಕ್ಕಳಿಗೆ ರಕ್ತಹೀನತೆ ಬರಲೇಬಾರದು. ಪೌಷ್ಠಿಕಾಂಶ ಕೊರತೆ ಆಗಲೇ ಬಾರದು. ಆಗ ಮಾತ್ರ ಮಕ್ಕಳು ಮಾನಸಿಕವಾಗಿ ಸದೃಡವಾಗಿ ಓದಿನಲ್ಲಿ ಹೆಚ್ಚು ಚುರುಕಾಗುತ್ತಾರೆ. ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳುತ್ತಾರೆ. ಶ್ರೀಮಂತರ ಮಕ್ಕಳ ರೀತಿ ಬಡವರು, ಶ್ರಮಿಕರು, ದಲಿತ, ಶೂದ್ರರ ಮಕ್ಕಳಿಗೂ ಉತ್ತಮ ಶಿಕ್ಷಣ ದೊರೆಯಬೇಕು. ಏಕೆಂದರೆ ಮಕ್ಕಳೇ ದೇಶದ, ಸಮಾಜದ ಭವಿಷ್ಯವನ್ನು ರೂಪಿಸುತ್ತಾರೆ ಎನ್ನುತ್ತಾ ಬುದ್ದ, ಬಸವ, ಅಂಬೇಡ್ಕರ್ ಮಾತುಗಳನ್ನು ಉಲ್ಲೇಖಿಸಿದರು.

ರಾಗಿ ಮಾಲ್ಟ್ ರಾಗಿ ಮಾಲ್ಟ್

ಶಿಕ್ಷಣದಿಂದ ಮಾತ್ರ ಸ್ವಾಭಿಮಾನ ಹೆಚ್ಚಾಗಲು ಸಾಧ್ಯ. ಜ್ಞಾನದ ಬೆಳವಣಿಗೆ ಶಿಕ್ಷಣದಿಂದ ಸಾಧ್ಯ. ಶಿಕ್ಷಣ ಅಂದರೆ ಕೇವಲ ಓದು, ಬರಹ ಕಲಿಸುವುದಲ್ಲ. ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ವೈಚಾರಿಕತೆಯುಳ್ಳ ಶಿಕ್ಷಣ ಅಗತ್ಯ. ಉನ್ನತ ಶಿಕ್ಷಣ ಪಡೆದ ವೈದ್ಯರು, ಎಂಜಿನಿಯರ್ ಗಳೂ ಈಗ ಮೌಡ್ಯಕ್ಕೆ ಜೋತು ಬಿದ್ದಿದ್ದಾರೆ. ಬಸವಾದಿ ಶರಣರು ಮೌಡ್ಯಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು. ವೈಚಾರಿಕ ಶಿಕ್ಷಣದಿಂದ ಮಾತ್ರ ಮೌಡ್ಯಮುಕ್ತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.

2023-24ನೇ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಬಹುಪೌಷ್ಠಿಕಾಂಶವುಳ್ಳ ಸಾಯಿ ಶ್ಯೂರ್ ರಾಗಿ ಮಾಲ್ಟ್ ಹೆಲ್ತ್ ಮಿಕ್ಸ್ ವಿತರಿಸುವ ಕಾರ್ಯಕ್ರಮದಲ್ಲಿ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಸೇರಿ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!