Sanehalli: ಸಾಣೇಹಳ್ಳಿಯಲ್ಲಿ ಯಶಸ್ವಿಯಾಗಿ ನಡೆದ “ದಂದಣ ದತ್ತಣ ಗೋಷ್ಠಿ”

ಚಿತ್ರದುರ್ಗ( Sanehalli ) : ಇಲ್ಲಿನ ಶ್ರೀ ಗುರುಪಾದೇಶ್ವರ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ದಿನಾಂಕ ಆಗಸ್ಟ್ 11 ರ ಶುಕ್ರವಾರದಂದು ಎರಡನೆಯ ದಂದಣ-ದತ್ತಣ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ಗೋಷ್ಠಿಯ ಆರಂಭದಲ್ಲಿ ನಾಗರಾಜ್ ಮತ್ತು ವಿದ್ಯಾರ್ಥಿಗಳು ವಚನ ಗಾಯನ ಹಾಗೂ ಸಾಮೂಹಿಕ ಪ್ರಾರ್ಥನೆಯನ್ನು ನಡೆಸಿಕೊಟ್ಟರು.

ವಿದ್ಯಾರ್ಥಿ ಭಾಷಣಕಾರರಾಗಿ ಪೂಜಾ ಎಸ್, ಕನ್ನಡ ನಾಡು- ನುಡಿ ವ್ಯುತ್ಪತ್ತಿ ಕುರಿತು ವರ್ಷ ಕೆ ಜೆ, ಕನ್ನಡ ಸಾಹಿತ್ಯ ಉಪಭಾಷೆಯ ಕುರಿತು, ಶಶಾಂಕ್ ಈ ಟಿ, ಕನ್ನಡ ಸಾಹಿತ್ಯ ಪ್ರಕಾರಗಳ ಕುರಿತು, ಸಚಿನ್ ಡಿ, ವಚನ ಸಾಹಿತ್ಯ, ಸಾಹಿತ್ಯ ಪ್ರಕಾರಗಳ ಕುರಿತು ಗೋಷ್ಠಿ ಮಂಡಿಸಿದರು.
ದಿವ್ಯಸಾನ್ನಿಧ್ಯ ವಹಿಸಿ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ. ಶ್ರೀಮಂತಿಕೆ ಎಂದ ತಕ್ಷಣ ಹಣ, ಮನೆ, ತೋಟ ಇಂಥವು ಎಂದಾಗುತ್ತದೆ.

ದಂದಣ ದತ್ತಣ ಗೋಷ್ಠಿ

ಭಾಷೆಯೂ ಕೂಡ ಒಂದು ಸಂಪತ್ತು. ಆ ಭಾಷೆಯಲ್ಲಿ ಜನರು ಪ್ರಾವೀಣ್ಯತೆ ಸಾಧಿಸಿದಾಗ, ಆ ಭಾಷೆಯಲ್ಲಿ ಸತ್ವಯುತವಾದ ಕೃತಿಗಳು ಹೊರಬಂದಾಗ, ಆ ಭಾಷೆಯ ಜನರು ತಲೆ ಎತ್ತಿ ನಡೆಯುವಂತಹ ವಾತಾವರಣ ನಿರ್ಮಾಣವಾದಾಗ ಮಾತ್ರ ಒಂದು ಭಾಷೆ ಸಂಪತ್ತಾಗುವುದು. ಆ ದೃಷ್ಟಿಯಿಂದ ಕನ್ನಡ ಭಾಷೆ ಇನ್ನಿತರ ಇಲ್ಲದಷ್ಟು ತನ್ನ ಘನತೆಯನ್ನು ಉಳಿಸಿಕೊಂಡು ಬಂದಿದೆ.

ಕನ್ನಡದ ಎಂಟು ಸಾಹಿತಿಗಳಿಗೆ ಜ್ಞಾನಪೀಠ ಪ್ರಶಸ್ತಿ ಲಭ್ಯವಾಗಿದೆ ಎಂದರೆ, ಕನ್ನಡ ಭಾಷೆಯ ಶ್ರೀಮಂತಿಕೆಯ ಸಂಕೇತವಾಗಿದೆ. ನಮ್ಮ ಭಾಷೆಯಲ್ಲಿ ಗದ್ಯ, ಪದ್ಯ, ಚುಟುಕು, ಕಥೆ, ಕಾದಂಬರಿ, ಕಾವ್ಯ, ಮುಂತಾದ ವೈವಿಧ್ಯಮಯವಾದ ಕ್ಷೇತ್ರಗಳನ್ನು ವ್ಯಾಪಿಸಿಕೊಂಡಿದೆ. ಆ ಭಾಷೆಯನ್ನು ಅರ್ಥೈಸಿಕೊಳ್ಳಲು ನಾವು ಬಹಳ ದೂರ ಹೋಗಬೇಕಾಗಿಲ್ಲ. ಹೆಚ್ಚು ಅಧ್ಯಯನಗೈಯ್ಯಬೇಕಾಗಿಲ್ಲ, ನಮ್ಮ ಮನೆಯಲ್ಲಿ ತಾಯಿ, ತಂದೆ, ನೆರೆ-ಹೊರೆಯವರು ಏನು ಮಾಡುತ್ತಿದ್ದಾರೆಂಬುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಆ ಪದಗಳು ನಮ್ಮೊಳಗೆ ಅಡಕವಾಗುತ್ತವೆ.

 

ಆ ಪದಗಳನ್ನೇ ನಾವು ಹೊಸ ಹೊಸ ವಾಕ್ಯಗಳನ್ನಾಗಿ ರಚಿಸುತ್ತಾ ಹೋದರೆ ಆ ವಾಕ್ಯಗಳು ವಿಶೇಷವಾದ ವಾಕ್ಯಗಳನ್ನು ನೀಡುತ್ತವೆ. ಆ ಮೂಲಕ ಭಾಷಾ ಸಂಪತ್ತು ಹೆಚ್ಚುತ್ತದೆ. ಅತಿಥಿಗಳು ಪ್ರಸ್ತಾಪಿಸಿದಂತೆ, ಕನ್ನಡ ಭಾಷೆಯ ಇತಿಹಾಸ ಅಪಾರವಿದ್ದರೂ, ಹನ್ನೆರಡನೆಯ ಶತಮಾನ ಕನ್ನಡ ಭಾಷೆಗೆ ಒಂದು ಘನತೆ, ಗೌರವವನ್ನು ತಂದುಕೊಟ್ಟಿದೆ.

 

 

ಮನುಷ್ಯ ತಲೆ ಎತ್ತಿ ಬಾಳುವಂತಾಗಿದೆ. ನವ್ಯ, ನವೋದಯ, ಪ್ರಗತಿಶ್ರೀಲ, ದಲಿತ, ಬಂಡಾಯ ಎಂದು ಸಾಹಿತ್ಯ ಪ್ರಕಾರಗಳಿದ್ದರೂ ಈ ಎಲ್ಲ ಅವಕಾಶಗಳಿಗೆ ಮೊದಲು ಅಪಾರ ಮನ್ನಣೆ ದೊರೆತಿದೆ. ವಚನ ಸಾಹಿತ್ಯದಲ್ಲಿ ಬಂಡಾಯ ದಲಿತ ಸಾಹಿತ್ಯ ಮುಪ್ಪುರಿಗೊಂಡಿದೆ. ವಚನ ಸಾಹಿತ್ಯ ರಚಿಸಿದ ಬಹುತೇಕ ವಚನಕಾರರು ಅತ್ಯಂತ ತಳ ಸಮುದಾಯದಿಂದ ಮೂಡಿ ಬಂದಂಥವರು.

ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಅಂಬಿಗರ ಚೌಡಯ್ಯ, ಸೂಳೆ ಸಂಕವ್ವೆ, ಆಯ್ದಕ್ಕಿ ಲಕ್ಕಮ್ಮ, ಕಾಳವ್ವೆ ಮೊದಲಾದ ಶಿವ ಶರಣರು ತಳ ಸಮುದಾಯದಿಂದ ಬಂದು ಉಪೇಕ್ಷೆಗೆ ಒಳಗಾದವರು. ಅನುಭವ ಮಂಟಪದ ಸಂಪರ್ಕದಿಂದ ಶ್ರೇಷ್ಠ ಸಾಹಿತಿಗಳೆಂದರೆ, ಶರಣರಾದರು. ಅವರ ವಚನಗಳನ್ನು ಅವಲೋಕಿಸಿದಾಗ ದಲಿತ, ಬಂಡಾಯ, ವೈಚಾರಿಕ ಪ್ರಜ್ಞೆ, ನವ್ಯ, ನವೋದಯ ಎಲ್ಲವೂ ವಚನ ಸಾಹಿತ್ಯದಲ್ಲಿ ಅಡಕವಾಗಿವೆ.

ಎಲ್ಲ ಸಾಹಿತ್ಯಕ್ಕಿಂತ ‘ವಚನ ಸಾಹಿತ್ಯ’ ಪೂರಕವಾಗಿದೆ. ಹಾಗಾಗಿ ಅದರ ಅಧ್ಯಯನ ಅಗತ್ಯವಾಗಿದೆ. ಅಲ್ಲಮಪ್ರಭುರವರ ವಚನಗಳನ್ನು ‘ಬೆಡಗಿನ ವಚನಗಳು’ ಎಂದು ಕರೆಯಲಾಗುತ್ತದೆ. ಅಲ್ಲಮರ ವಚನಗಳ ಬೆಡಗನ್ನು ಮತ್ತಾವ ಸಾಹಿತ್ಯದಲ್ಲೂ ಕಾಣಲು ಸಾಧ್ಯವಿಲ್ಲ.
ಇಂದು ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಉಳಿಸಿಕೊಳ್ಳುವಲ್ಲಿ ಸರ್ಕಾರ, ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಾಲಾ-ಕಾಲೇಜುಗಳು ಜವಾಬ್ದಾರಿಯನ್ನು ಹೊರಲು ಸಿದ್ಧರಿಲ್ಲ.

ಇಂದು ಕನ್ನಡ ಶಾಲೆಗಳನ್ನು ಮುಚ್ಚುವ ವಾತಾವರಣ ನಿರ್ಮಾಣವಾಗಿದೆ. ಆಂಗ್ಲ ಮಾಧ್ಯಮದ ಹುಚ್ಚು ಹೆಚ್ಚಾಗುತ್ತಿದೆ. ಕನ್ನಡ ಭಾಷೆಯನ್ನು ಪ್ರೀತಿಸಿ ಕಲಿತ ನಂತರ ಅನ್ಯ ಭಾಷೆಗಳನ್ನು ಕಲಿಯಲು ಅವಕಾಶವಾಗುತ್ತದೆ. ಕನ್ನಡದ ಅನೇಕ ಸಾಹಿತಿಗಳಿಗೆ ಆಂಗ್ಲ ಭಾಷಾ ಜ್ಞಾನವಿದ್ದರೂ ಸಹ ಕನ್ನಡ ಭಾಷೆಯಲ್ಲಿ ಹೆಚ್ಚು ಹೆಚ್ಚು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಭಾಷೆಯನ್ನು ಕರಗತ ಮಾಡಿಕೊಂಡರೆ, ಸುಲಭ, ಸರಳವಾಗಿ ಆಂಗ್ಲ, ಹಿಂದಿ ಭಾಷೆಗಳ ಕಲಿಕೆಯಾಗುತ್ತದೆ.

ನಾವು ಇಂದಿನ ‘ಕನ್ನಡ ಹೂರಣ’ ದಂದಣ ದತ್ತಣ ಗೋಷ್ಠಿಯಲ್ಲಿ ಭಾಗವಹಿಸಿದಾಗ ಬಹು ಸಂತೋಷವುಂಟಾಯಿತು. ವಿದ್ಯಾರ್ಥಿ ಭಾಷಣಕಾರರು ಹಾಗೂ ಅತಿಥಿಗಳು ಆಡಿದ ಮಾತುಗಳು ನಮ್ಮ ಬಾಲ್ಯಕ್ಕೆ ಕರೆದೊಯ್ದವು. ಮತ್ತೊಮ್ಮೆ ‘ಕನ್ನಡ ಸಾಹಿತ್ಯ ಚರಿತ್ರೆ’ಯ ಅಧ್ಯಯನ ಮಾಡಿದಂತೆ, ಮೆಲುಕು ಹಾಕುವಂತಾಯಿತು. ಕನ್ನಡ ಸಾಹಿತ್ಯ ಪರಂಪರೆ, ಕವಿ, ಕಾದಂಬರಿಕಾರರು, ನಾಟಕಕಾರರು, ಸಾಹಿತ್ಯದ ಮುಖೇನ ಹೊರಹೊಮ್ಮಿದರೆಂಬುದನ್ನು ಎಳೆ ಎಳೆಯಾಗಿ ಮಂಡಿಸಿದರು. ಮಕ್ಕಳು ತೊದಲು ನುಡಗಳನ್ನಾಡಿರಬಹುದು, ಅಧ್ಯಾಪಕರ ಮಾರ್ಗದರ್ಶನ, ಅಥವಾ ಕಂಠಪಾಠದಿಂದಾಡಿರಬಹುದು, ವಿಷಯ ಮಂಡಿಸುವ ರೀತಿ ನಮ್ಮ ಮನಸ್ಸಿಗೆ ಮುದ ನೀಡಿತು.

ನಮ್ಮ ಶಾಲೆಯ ಮಕ್ಕಳು ಇಷ್ಟು ರಸವತ್ತಾಗಿ ಕನ್ನಡ ಭಾಷೆಯನ್ನು ಓದುತ್ತಾರಲ್ಲ ಎಂಬುದು ಸಂತಸದಾಯಕವಾಗಿದೆ. ಲೇಖನಚಿಹ್ನೆಗಳನ್ನು ಬಳಸಿ ಓದುವ ರೀತಿ, ದೋಷರಹಿತ ಉಚ್ಚಾರಣೆ, ಕನ್ನಡ ಭಾಷೆಯನ್ನು ಓದುವ, ಬರೆಯುವ ಕಲೆಯನ್ನು ಕರಗತ ಮಾಡಿಕೊಂಡರೆ, ನಾಳೆ ವಿದ್ಯಾರ್ಥಿಗಳು ತಲೆ ಎತ್ತಿ ಬದುಕಲು ಸಾಧ್ಯ. ಯಾರು ಭಾಷೆಯನ್ನು ಚೆನ್ನಾಗಿ ಕರಗತ ಮಾಡಿಕೊಳ್ಳುತ್ತಾರೋ ಅವರು ಈ ಲೋಕದಲ್ಲಿ ತಲೆ ಎತ್ತಿ ಬಾಳುತ್ತಾರೆ. ಕನ್ನಡವೆಂದು ತಾತ್ಸಾರ ಮಾಡದೇ, ಅದರಲ್ಲಿ ಹೆಚ್ಚು ಅಂಕಗಳನ್ನು ಸಂಪಾದಿಸುವ ಅವಕಾಶವಿದೆ. ಕನ್ನಡೇತರ ಭಾಷೆಗಳನ್ನು ಕಲಿತರೂ ಕನ್ನಡ ಭಾಷೆಯ ಪ್ರಭುತ್ವವನ್ನು ಸಂಪಾದಿಸಿ, ಬೌದ್ಧಿಕ ಶ್ರೀಮಂತರಾಗಲು ಸಾಧ್ಯವಿದೆ.

ಇದೊಂದು ಅಪರೂಪದ ಗೋಷ್ಠಿ ಎಂದು ಪರಮಪೂಜ್ಯರು ಆಶೀರ್ವಾಣಿ ಕರುಣಿಸಿದರು. ಶ್ರೀ ಗುರುಪಾದೇಶ್ವರ ಪ್ರೌಢಶಾಲೆಯ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷರಾದ ಎ ಸಿ ಚಂದ್ರಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ನಾಡು, ಸಮೃದ್ಧಿಯಾಗಿರಲು ಮಣ್ಣು,ನದಿ, ಬೆಳೆ ಮೊದಲಾದವು ಕಾರಣವಾಗಿವೆ. ಕನ್ನಡ ಭಾಷೆಯನ್ನು ಸರಿಯಾಗಿ ಕಲಿತರೆ ಅನ್ಯ ಭಾಷೆಗಳನ್ನು ಸುಲಭವಾಗಿ ಕಲಿಯಬಹುದು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೊಸದುರ್ಗ ತಾಲ್ಲೂಕು ಕಾರೇಹಳ್ಳಿಯ ಶ್ರೀ ಗುರುರೇಣುಕ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕರಾದ ದಾಸಪ್ಪ ಮಾತನಾಡಿ ಕನ್ನಡ ಸಾಹಿತ್ಯದ ಮಜಲುಗಳು, ವಚನ ಸಾಹಿತ್ಯಕ್ಕೆ ಶಿವಶರಣರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ ಎಂದು ನುಡಿದರು.

ಕೊನೆಯಲ್ಲಿ ‘ಜೋಗದ ಸಿರಿ ಬೆಳಕಿನಲ್ಲಿ’ ಎಂಬ ನಿಸಾರ್ ಅಹಮ್ಮದ್ ಗೀತೆಗೆ ಹೆಜ್ಜೆ ಹಾಕಿದರು. ಕಾರ್ಯಕ್ರಮದಲ್ಲಿ ಉಭಯ ಶಾಲೆಗಳ ಮುಖ್ಯೋಪಾಧ್ಯಾಯರು, ನೌಕರ ವೃಂದದವರು ಹಾಗೂ ಉಭಯ ಶಾಲಾ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು. ಇಂಚರ ಎಸ್ ಜೆ ಸ್ವಾಗತಿಸಿದರೆ ತೀರ್ಥರಾಜ ಎನ್ ಎಸ್ ನಿರೂಪಿಸಿದರು. ರಜೆಯ ನಿಮಿತ್ತ ಸಾಣೇಹಳ್ಳಿಯಲ್ಲಿ ತಂಗಿರುವ ದುಬೈ ಕನ್ನಡಿಗ ವಿದ್ಯಾರ್ಥಿ ನಿಹಾರ್ ಸ್ಪಷ್ಟವಾದ ಕನ್ನಡದಲ್ಲಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!