ಸರ್ಕಾರಿ ಹಾಸ್ಟೆಲ್ ಕಾಂಪೌಂಡ್‌ನಲ್ಲಿ ರಾಶಿಯಂತೆ ಸುರಿಯುತ್ತಿದ್ದ ಆಹಾರ; ಸಹಾಯಕ ನಿರ್ದೇಶಕರು ನೀಡಿದ ವರದಿ ಏನು ಗೊತ್ತಾ.?
ದಾವಣಗೆರೆ: ನಗರದ ಎಂ.ಸಿ.ಸಿ. ಬಿ ಬ್ಲಾಕ್‌ನಲ್ಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಹಾಗೂ ನಂತರ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ನಿತ್ಯವೂ ಆಹಾರ ವ್ಯರ್ಥ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಸಹಾಯಕ ನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ.
ಹಾಸ್ಟೆಲ್ ಕಾಂಪೌಂಡ್ ಹಿಂಭಾಗದಲ್ಲಿ ಆಹಾರವನ್ನು ಬಕೆಟ್‌ಗಟ್ಟಲೆ ಸುರಿಯಲಾಗುತ್ತಿತ್ತು. ಈ ಕುರಿತು ಗರುಡ ವಾಯ್ಸ್ ಸೇರಿದಂತೆ ಕೆಲ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿತ್ತು.
ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸಹಾಯಕ ನಿರ್ದೇಶಕರಿಗೆ ಜಂಟಿ ನಿರ್ದೇಶಕರೂ ಸೂಚಿಸಿದ್ದರು. ತನಿಖೆ ನಡೆಸಿದ ಸಹಾಯಕ ನಿರ್ದೇಶಕರು ಜಂಟಿ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ನಿಲಯದ ವಾರ್ಡನ್‌ರವರು ಒಂದೇ ಕಟ್ಟಡದಲ್ಲಿ 2 ಹಾಸ್ಟೆಲ್‌ಗಳು ನಡೆಯುತ್ತಿರುವುದರಿಂದ 2 ದಿನಗಳಿಂದ ಮುಸುರೆ ತೆಗೆದುಕೊಂಡು ಹೋಗುವವರು ಬಾರದೇ ಇರುವ ಹಿನ್ನೆಲೆಯಲ್ಲಿ ನಮ್ಮ ಗಮನಕ್ಕೆ ಬಾರದೇ ಡಿ ಗ್ರೂಪ್ ಸಿಬ್ಬಂದಿಗಳು ಕಾಂಪೌಂಡ್ ಹೊರಗಡೆ ಖಾಲಿ ಜಾಗದಲ್ಲಿ ಹಾಕಿದ್ದಾರೆ.
ತಕ್ಷಣವೇ ಅದನ್ನು ಸ್ವಚ್ಚಗೊಳಿಸಿ ಪುನಃ ಇಂತಹ ಘಟನೆ ಮರುಕಳಿಸದಂತೆ ಡಿ ಗ್ರೂಪ್ ಸಿಬ್ಬಂದಿಯವರಿಗೆ ಸೂಚನೆ ನೀಡಿ ಕ್ರಮ ವಹಿಸಲಾಗಿದೆ. ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿನಿಯರಿಗೆ ಊಟ ತಿಂಡಿ ವ್ಯಯ ಮಾಡದಂತೆ ಸಲಹೆ ನೀಡಿರುವ ಬಗ್ಗೆ ಸಮಜಾಯಿಷಿ ನೀಡಿರುತ್ತಾರೆ.
ತಾವೂ ಸಹ ದಿನಾಂಕ: 23-02-2024ರಂದು ಖುದ್ದು ಭೇಟಿ ನೀಡಿ ಪರಿಶೀಲಿಸಿ ಪುನಃ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆಯ ಸೂಚನೆ ನೀಡಿರುವುದಾಗಿ ಸಹಾಯಕ ನಿರ್ದೇಶಕರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.