ದೇಗುಲ ಶಿಲ್ಪಿಯ ಕೈಚಳಕದಲ್ಲಿ ಶಿಲ್ಪಚಿತ್ತಾರ

ದೇಗುಲ ಶಿಲ್ಪಿಯ ಕೈಚಳಕದಲ್ಲಿ ಶಿಲ್ಪಚಿತ್ತಾರ

ದಾವಣಗೆರೆ : ಸಾಮಾನ್ಯವಾಗಿ ಮನೆ ಕಟ್ಟುವಾಗ ಹೀಗೆ ಇರಬೇಕೆಂದು ಪ್ಲಾನ್ ಮಾಡಿ ಎಂಜಿನಿಯರ್‌ಗೆ ಹೇಳುತ್ತೇವೆ. ಹಾಗೆಯೇ ದೇವರಿಗೂ ಇರಬೇಕಾದ ಸೂರು ಹೀಗೆ ಇರಬೇಕೆಂದು ಭಕ್ತರು ಅಪೇಕ್ಷಿಸುವುದು ಸಹಜ. ರಥಕ್ಕೆ ಹೇಗೆ ಕಳಸ ಮುಖ್ಯವೋ, ದೇಗುಲಕ್ಕೂ ಗೋಪುರ ಅಷ್ಟೇ ಮುಖ್ಯ.

ದೇಗುಲ ಶಿಲ್ಪಿಯ ಕೈಚಳಕದಲ್ಲಿ ಶಿಲ್ಪಚಿತ್ತಾರ

ಹೀಗೆ ದೇಗುಲಗಳ ಗೋಪುರ, ಗೋಪುರದ ಮೇಲಿನ ದೇವರ ಮೂರ್ತಿಗಳ ನಿರ್ಮಾಣ ಕಾರ್ಯದಲ್ಲಿ ದಾವಣಗೆರೆ ಜಯನಗರ ಕಾಲೊನಿಯ ಎಚ್.. ಎಸ್ .ಗಣೇಶ್ ಕುಮಾರ್ ಕಳೆದ 20 ವರ್ಷಗಳಿಂದ ತೊಡಗಿಕೊಂಡಿದ್ದಾರೆ. ಇವರು ಓದಿದ್ದು 7ನೇ ತರಗತಿ. ನಂತರ ಓದು ತಲೆಗೆ ಹತ್ತಲಿಲ್ಲ ಎಂದು ಅಣ್ಣರಾಮಪ್ಪರ ಜತೆ ಮನೆ ಕಟ್ಟುವ ಕೆಲಸಕ್ಕೆ ಹೋದರು. ಹೀಗೆ ತರಗಾರ ಕೆಲಸಕ್ಕೆ ಹೋದಾಗ ಮಾಯಕೊಂಡದಲ್ಲಿ ದೇಗುಲದ ಗೋಪುರ, ಮೂರ್ತಿಗಳನ್ನು ಸಿಮೆಂಟ್‌ನಿಂದ ಕಟ್ಟುವವರನ್ನು ನೋಡಿ ಗಣೇಶ್ ಮೊದಲ ಬಾರಿಗೆ ಪ್ರಯತ್ನಿಸಿದರು.

ನಂತರ ಮೊದಲ ಬಾರಿಗೆ ತಂದೆ ಹನುಮಂತಪ್ಪರ ಮೂರ್ತಿಯನ್ನು ಮಣ್ಣಿನಿಂದ ತಯಾರಿಸಿದರು. ಬಳಿಕ ಗಣಪತಿ, ಸರಸ್ವತಿ ಇತರೆ ದೇವರುಗಳ ಮೂರ್ತಿ ಹಾಗೂ ಗೋಪುರಗಳನ್ನು ಸಿಮೆಂಟ್‌ನಿಂದ ತಯಾರಿಸಿದರು. ಇವರ ಕೆಲಸವನ್ನು ನೋಡಿ ಅಣ್ಣ ರಾಮಪ್ಪ ಬಹಳ ಸಂತೋಷಪಟ್ಟು ತಮ್ಮನ ಕೆಲಸಕ್ಕೆ ಆಹ್ವಾನಿಸಿದರು. ಜತೆಗೆ ಈ ಮೂರ್ತಿಗಳನ್ನು ನೋಡಿದ ಮಾಯಕೊಂಡದ ಜನ ಇವರನ್ನು ಹುರಿದುಂಬಿಸಿದರು. ಪರಿಣಾಮ ಗಣೇಶ್ ದೇಗುಲದ ಗೋಪುರ, ದೇವರ ಮೂರ್ತಿಗಳ ನಿರ್ಮಾಣದಲ್ಲಿ ತಮ್ಮ ಕೈ ಚಳಕದಿಂದ ವಿಶಿಷ್ಟ ಶಿಲ್ಪಕಲಾವಿದರಿಗೆ ಬೆಳೆಯುತ್ತಿದ್ದಾರೆ.

ದೇಗುಲ ಶಿಲ್ಪಿಯ ಕೈಚಳಕದಲ್ಲಿ ಶಿಲ್ಪಚಿತ್ತಾರ

ಗಣೇಶ್ ತನ್ನ ಬಿಡುವಿನ ವೇಳೆಯಲ್ಲಿ ಮಣ್ಣಿನಿಂದ ಸಣ್ಣಪುಟ್ಟ ಗೊಂಬೆಗಳನ್ನು ತಯಾರಿಸುತ್ತಿದ್ದರು. ಬರಬರುತ್ತಿದ್ದಂತೆ ಒಳ್ಳೆಯ ಶಿಲ್ಪಿಯಾಗಿ ಮಾರ್ಪಟ್ಟರು. ಮೊದಲಿಗೆ ಬೇತೂರು ರಸ್ತೆ ದುರ್ಗಮ್ಮ ದೇವಸ್ಥಾನಕ್ಕೆ ಹೂವಿನ ಪಾದಕಟ್ಟೆ ನಿರ್ಮಿಸಿದರು. ಇದು ಎಲ್ಲರನ್ನು ಆಕರ್ಷಿಸಿತು. ಇದನ್ನು ಗಮನಿಸಿದ ಎಂಜಿನಿಯರ್ ತಿಪ್ಪೇಶ್ ಎಂಬವರು ಮಾಯಕೊಂಡ ಗ್ರಾಮದ ದೇವಾಸ್ಥನ ಕೆಲಸ ವಹಿಸಿಕೊಟ್ಟರು. ಇವರ ಕೈ ಕೆಲಸ ಕಲ್ಪನೆ ನೋಡುಗರನ್ನು ಆಕರ್ಷಿಸಿತು, ದಾವಣಗೆರ ಮಾತ್ರವಲ್ಲದೆ ನೆರೆಯ ಬಳ್ಳಾರಿ, ಚಿತ್ರದುರ್ಗ ಮತ್ತಿತರ ಕಡೆಗಳಿಂದಲೂ ಬೇಡಿಕೆ ಬಂದಿತು. ನೆರೆಯ ಆಂಧ್ರ ಪ್ರದೇಶ, ತಮಿಳುನಾಡಿ ನಿಂದಲೂ ದೇವಸ್ಥಾನ, ದೇವರ ಮೂರ್ತಿಗಳನ್ನು ನಿರ್ಮಿಸುವ ಕೆಲಸ ಇವರನ್ನು ಅರಸಿಬಂದಿದೆ.

ದೇಗುಲ ಶಿಲ್ಪಿಯ ಕೈಚಳಕದಲ್ಲಿ ಶಿಲ್ಪಚಿತ್ತಾರ

ಬೆಳ್ಳಗ್ಗೆ(ಹೆದ್ನೆ)ಯಿಂದ ಕೆಲಸ ಆರಂಭ : ಪ್ರಥಮ ಬಾರಿಗೆ ಮಾಯಕೊಂಡ ಸಮೀಪದ ಹೆದ್ನೆ ಗ್ರಾಮದಲ್ಲಿ ಗಣೇಶ್ ಗೋಪುರದ ಕೆಲಸ ಆರಂಭಿಸಿದರು. ಅಲ್ಲಿ 15 ಅಡಿ ಎತ್ತರದ ಈಶ್ವರ, ಸೇರಿದಂತೆ ಸುತ್ತಲೂ ಡಿಸೈನ್ ಮತ್ತು 10ಅಡಿಯ ಆಂಜನೇಯ ಮೂರ್ತಿ ನಿರ್ಮಿಸಿದ್ದರು.

ಇವರ ಕೆಲಸ ನೋಡಿ ಬಾಡಾ ಗ್ರಾಮಸ್ಥರು ದೇವಸ್ಥಾನದ ಅಲಂಕಾರಕ್ಕೆ ಆಹ್ವಾನಿಸಿದರು. ಅಲ್ಲಿ 41 ಅಡಿಯ ರಾಜಗೋಪುರ, 31 ಅಡಿ ವಿಮಾನ ಗೋಪುರ ನಿರ್ಮಿಸಿದ್ದರು. ಆನಂತರ ರಾಜನಹಳ್ಳಿ ಗುರುಪೀಠ, ಹರಿಹರದ ರಾಘವೇಂದ್ರ ಸ್ವಾಮಿ ಮಠ, ಬಾತಿ ಸಾಯಿಬಾಬಾ, ಡಿಸಿಎಂ ಅಜ್ಜಯ್ಯ ಗೋಪುರ, ಬಂಟರ ಭವನದಲ್ಲಿ ಈಶ್ವರ ಹಾಗೂ ದಾವಣಗೆರೆ ಮಾತ್ರವಲ್ಲದೇ ಬಿ.ದುರ್ಗ, ತಾಳಿಕಟ್ಟೆ ಹುಬ್ಬಳ್ಳಿ , ಧಾರವಾಡ, ಗದಗ, ಬೆಳಗಾವಿ,ಯರಬಳ್ಳಿ, ಬಸಾಪುರ, ನಿಟ್ಟೂರು, ತಾವರಗುಂದಿ, ಬಳ್ಳಾರಿ ಜಿಲ್ಲೆಯ ಹರವಿ, ನಾಗನಾಯಕನಹಳ್ಳಿ, ಕಲ್ಲಿನಾಗವತ್ತನಹಳ್ಳಿ, ಇಳಕಲ್, ಮರಿಯಮ್ಮನಹಳ್ಳಿ, ನಂದಿಗಾವಿ ದೇವಸ್ಥಾನಗಳ ಗೋಪುರ ನಿರ್ಮಾಣದಲ್ಲಿ ಪಾಲ್ಗೊಂಡರು. ಬೆಂಗಳೂರು ಸೇರಿದಂತೆ ನೆರೆಯ ತಮಿಳುನಾಡು ಹಾಗೂ ಇತರೆ ರಾಜ್ಯಗಳಲ್ಲೂ ದೇವಸ್ಥಾನಗಳ ಗೋಪುರ, ದೇವರ ಮೂರ್ತಿ ನಿರ್ಮಿಸಿದ ಹೆಗ್ಗಳಿಕೆ ಇವರದು.

ಈವರೆಗೂ ಗಣೇಶ್ ಸುಮಾರು 300ಕ್ಕೂ ಹೆಚ್ಚು ವಿಗ್ರಹ, 150ಕ್ಕೂ ಹೆಚ್ಚು ಗೋಪುರ ನಿರ್ಮಾಣ ಮಾಡಿದ್ದಾರೆ. ಗಣೇಶ್‌ಗೆ ದಾವಣಗೆರೆ ಮಹಾನಗರಪಾಲಿಕೆಯಿಂದ ರಾಜ್ಯೋತ್ಸವ ಪ್ರಶಸ್ತಿ, ಒಡೆಯೂರು ಕ್ಷೇತ್ರ ಶಿಲ್ಪಕಲಾ ಪ್ರಶಸ್ತಿ, ಬೆಂಗಳೂರಿನ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ, ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಇವರ ಮುಡಿಗೇರಿವೆ. ನಾನು ಕಲಿತ ಕೆಲಸವನ್ನು ಇತರರೂ ಕಲಿಯಬೇಕೆಂದು ನನ್ನ ಬಳಿ 10 ಮಂದಿ ಕೆಲಸ ಮಾಡುತ್ತಿದ್ದಾರೆ. ದೇವರ ಕೆಲಸ ಮಾಡುವುದು ನನಗೆ ತೃಪ್ತಿ ತಂದಿದೆ. ಮುಂದೊಂದು ದಿನ ಇದರಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಆಸೆ ಇದೆ. ಇದಕ್ಕೆ ಜನರ ಪ್ರೋತ್ಸಾಹ ಬೇಕು ಎನ್ನುತ್ತಾರೆ ಶಿಲ್ಪಿ ಎಚ್.ಎಸ್.ಗಣೇಶ್

Leave a Reply

Your email address will not be published. Required fields are marked *

error: Content is protected !!