ಮಹಿಳೆಯರಿಗೆ ಅರಿಷಿಣ, ಕುಂಕುಮ ಗೌರವ ನೀಡಿ ಸ್ವಾಗತ: ಬಿಜೆಪಿ ಮಹಿಳಾ ಸಮಾವೇಶದಲ್ಲಿ ಮಹಿಳೆಯರ ಕೈಗೆ ಕಮಲದ ಮೆಹಂದಿ.! ಮಹಿಳೆಯರ ಶ್ರೆಯೋಭಿವೃದ್ದಿಗೆ ನಮ್ಮ ಸರ್ಕಾರ ಬದ್ದ- ಶಶಿಕಲಾ ಜೊಲ್ಲೆ

ಸಿಂದಗಿ : ಸಿಂದಗಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮಹಿಳಾ ಮತದಾರರಿಗೆ ಅರಿಷಿಣ ಕುಂಕುಮ, ಮುಡಿಗೆ ಹೂವು ನೀಡುವ ಮೂಲಕ ಬಿಜೆಪಿ ಮಹಿಳಾ ಸಮಾವೇಶಕ್ಕೆ ಸಾಂಪ್ರದಾಯಿಕ ಸ್ವಾಗತ ನೀಡಿ ಮಹಿಳೆಯರಿಗೆ ಗೌರವ ಸಲ್ಲಿಸಲಾಯಿತು.

ಮುಜರಾಯಿ, ಹಜ್ ವಕ್ಪ್ ಸಚಿವರಾದ ಶಶಿಕಲಾ ಜೊಲ್ಲೆ ಅವರ ನೇತೃತ್ವದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಸಿಂದಗಿ ವಿಧಾನಸಭಾ ಕ್ಷೇತ್ರದ ಕನ್ನೊಳ್ಳಿ ಗ್ರಾಮದ ಸಿದ್ದಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಮಹಿಳೆಯರಿಗೂ ಹಿಂದೂ ಸಂಪ್ರದಾಯದಂತೆ ಅರಿಷಿನ ಕುಂಕುಮ, ಹೂ, ಎಲೆ ಅಡಿಕೆ ನೀಡಿ ಸ್ವಾಗತಿಸಲಾಯಿತು.

ಸಮಾವೇಶದಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಮಹಿಳೆಯರ ಅಂಗೈಯಲ್ಲಿ ಕಮಲದ ಹೂವಿನ ಮೆಹಂದಿ ಬಿಡಿಸುವ ಮೂಲಕ ಕಮಲದ ಚಿಹ್ನೆಗೆ ಮತ ನೀಡುವಂತೆ ಮನವಿ ಮಾಡಲಾಯಿತು.

ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಬೃಹತ್ ಮಹಿಳಾ ಸಮಾವೇಶವನ್ನು ಅತ್ಯಂತ ವಿಶಿಷ್ಠವಾಗಿ ಉದ್ಘಾಟನೆ ಮಾಡಲಾಗಿದ್ದು, ವೇದಿಕೆಯ ಮೇಲೆ ಮಹಾಲಕ್ಷ್ಮೀ ದೇವಿಗೆ ಮುತ್ತೈದೆಯರು ಸಚಿವರಾದ ಶಶಿಕಲಾ ಜೊಲ್ಲೆಯವರೊಂದಿಗೆ ದೇವಿಗೆ ಉಡಿ ತುಂಬುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಸಮಾವೇಶ ಉದ್ಘಾಟಿಸಿ ಮಾತನಾಡಿದ ಮುಜರಾಯಿ, ಹಜ್ ಮತ್ತು ವಕ್ಪ್ ‌ ಸಚಿವರಾದ ಶಶಿಕಲಾ ಜೊಲ್ಲೆಯವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಾಗ ರಾಜ್ಯ ಸರ್ಕಾರ ಭಾಗ್ಯ ಲಕ್ಷ್ಮೀ ಯೋಜನೆ ಜಾರಿಗೆ ತಂದಿದ್ದು, ಇದರಿಂದ ಹುಟ್ಟಿದ ಪ್ರತಿಯೊಬ್ಬ ಹೆಣ್ಣು ಮಗುವಿಗೂ 1 ಲಕ್ಷ ರೂ. ಭಾಗ್ಯಲಕ್ಷ್ಮೀ ಬಾಂಡ್ ದೊರೆಯಲಿದೆ. ಕೇಂದ್ರ ಸರ್ಕಾರ ಕೂಡ ಸುಕನ್ಯಾಾ ಸಮೃದ್ಧಿ ಯೋಜನೆ, ಭೇಟಿ ಬಚಾವೊ. ಭೇಟಿ ಪಡಾವೊ ಯೋಜನೆ, ಉಜ್ವಲಾ ಯೋಜನೆಗಳನ್ನು ಜಾರಿಗೆ ತಂದು ಹೆಣ್ಣು ಮಕ್ಕಳ ಭವಿಷ್ಯಕ್ಕೆ ಆಧಾರವಾಗಿ ನಿಂತಿದೆ. ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನಲ್ಲಿ ಎಲ್ಲ ಮಹಿಳೆಯರಿಗೆ ಕೇಂದ್ರ ಹಾಗೂ ರಾಜ್ಯದ ಯೋಜನೆಗಳನ್ನು ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದು ಸಚಿವರು ಹೇಳಿದರು.
ಸಿಂದಗಿ ತಾಲೂಕಿನಲ್ಲಿ ನಮ್ಮ ಮಹಿಳಾ ಮೋರ್ಚಾ ವತಿಯಿಂದ ಮಹಿಳೆಯರಿಗೆ ಅರಿಷಿನ ಕುಂಕುಮ ನೀಡಿ, ಅವರ ಕೈಗಳಲ್ಲಿ ಕಮಲದ ಚಿತ್ರ ಬಿಡಿಸುವ ಮೂಲಕ ನಮ್ಮ ಹಿಂದೂ ಸಂಪ್ರದಾಯದಂತೆ ಮಹಿಳೆಯರನ್ನು ಸ್ವಾಗತ ಮಾಡಲಾಗಿದೆ.
ಈ ಚುನಾವಣೆಯಲ್ಲಿ ರಮೇಶ ಬೂಸನೂರು ಅವರು 25 ಸಾವಿರ ಅಂತರದಿಂದ ಗೆಲ್ಲುವ ವಿಶ್ವಾಸ ಇದೆ. ಪ್ರತಿಯೊಂದು ಕಡೆ ಪುರುಷರ ಸಮನಾಗಿ ಮಹಿಳಾ ಮತದಾರರಿದ್ದಾರೆ. ಮಹಿಳೆಯರು ಇದುವರೆಗೆ ಮನೆಯಲ್ಲಿ ತಂದೆ ಅಥವಾ ಗಂಡ ಹೇಳಿದಂತೆ ಮತದಾನ ಮಾಡುತ್ತ ಬಂದಿದ್ದಾರೆ. ಆದರೆ, ಈಗ ಮಹಿಳೆಯರು ಜಾಗೃತರಾಗಿದ್ದಾರೆ. ಅವರಿಗೆ ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಮಾಹಿತಿ ನೀಡಿ ಅವರನ್ನೂ ಮುನ್ನೆಲೆಗೆ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು
ಹೇಳಿದರು.

ನಮ್ಮ ಪಕ್ಷ ಯಾವತ್ತೂ ಜಾತೀಯತೆ ಮಾಡಿಲ್ಲ. ನಮ್ಮ ಗುರಿ ಸಬ್ ಕಾ ಸಾತ್ ಸಬ್ ಕಾ ವಿಕಾಸ್, ನಾವು ಎಲ್ಲ ಸಮುದಾಯದವನ್ನು ಒಂದೇ ರೀತಿ ನೋಡುತ್ತೇವೆ. ನಮ್ಮಲ್ಲಿ ಯಾವುದೇ ಭೇದ ಭಾವ ಇಲ್ಲ ಎಂದು ಸಚಿವರು ಹೇಳಿದರು.
ಇದಕ್ಕೂ ಮೊದಲು ಸಚಿವರು ಹಾಲುಮತ ಸಮುದಾಯ ಹಾಗೂ ತಳವಾರ ಸಮುದಾಯದವರ ಸಮಾವೇಶದಲ್ಲಿ ಪಾಲ್ಗೊಂಡು ಬಿಜೆಪಿ ಅಭ್ಯರ್ಥಿ ರಮೇಶ ಬೂಸನೂರು ಪರವಾಗಿ ಮತ ಯಾಚನೆ ಮಾಡಿದರು. ಅಲ್ಲದೇ ಎರಡೂ ಸಮುದಾಯಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡಿರುವ ಕೊಡುಗೆಯನ್ನು ವಿವರಿಸಿದರು.
ಮಹಿಳಾ ಸಮಾವೇಶದಲ್ಲಿ ಲೋಕೋಪಯೋಗಿ ಸಚಿವರಾದ ಸಿ.ಸಿ. ಪಾಟೀಲ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಸಿಂಧಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಹಿಳಾ ಮುಖಂಡರು ಮತ್ತು ಸಹಸ್ರಾರು ಮಹಿಳೆಯರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!