ಅಲಯನ್ಸ್‌ ವಿಶ್ವವಿದ್ಯಾಲಯದಲ್ಲಿ ದಕ್ಷಿಣ ವಲಯ ಅಂತರ್‌ ವಿಶ್ವವಿದ್ಯಾಲಯಗಳ ಮಹಿಳಾ ಖೋ ಖೋ ಪಂದ್ಯಾವಳಿ

ಆನೇಕಲ್ : ಪಟ್ಟಣಕ್ಕೆ ಸಮೀಪದ ಅಲಯನ್ಸ್‌ ವಿಶ್ವವಿದ್ಯಾಲಯದಲ್ಲಿ ದಕ್ಷಿಣ ವಲಯ ಅಂತರ್‌ ವಿಶ್ವವಿದ್ಯಾಲಯಗಳ ಮಹಿಳಾ ಖೋ ಖೋ ಪಂದ್ಯಾವಳಿಯನ್ನು ರಾಷ್ಟ್ರೀಯ ಕ್ರೀಡಾಪಟು ಶೋಭಾ ನಾರಾಯಣ್‌ ಸೋಮವಾರ ಉದ್ಘಾಟಿಸಿದರು. ನಾಲ್ಕು ದಿನಗಳ ಪಂದ್ಯಾವಳಿಯಲ್ಲಿ ಮೊದಲ ದಿನವಾದ ಸೋಮವಾರ ೫೯ ತಂಡಗಳು ಪಾಲ್ಗೊಂಡಿದ್ದವು.

ರಾಷ್ಟ್ರೀಯ ಕ್ರೀಡಾಪಟು ಶೋಭಾ ನಾರಾಯಣ್‌ ಮಾತನಾಡಿ ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ರೀಡಾ ಪಂದ್ಯಾವಳಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಅಂತರ್‌ ವಿಶ್ವವಿದ್ಯಾಲಯಗಳ ಖೋಖೋ ಪಂದ್ಯಾವಳಿಯಿಂದಾಗಿ ವಿದ್ಯಾರ್ಥಿಗಳ ನಡುವೆ ಉತ್ತಮ ಬಾಂಧವ್ಯ ಮತ್ತು ಕ್ರೀಡಾ ಮನೋಭಾವನೆ ಬೆಳೆಯಲು ಅನುಕೂಲವಾಗಿದೆ. ಈ ನಿಟ್ಟಿನಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಬಂಧಗಳನ್ನು ಬೆಸೆಯುವ ವೇದಿಕೆಯಾಗಿವೆ ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ಪ್ರೊ.ಸುಂದರ್‌ ರಾಜ್‌ ಅರಸ್‌ ಮಾತನಾಡಿ ಮಹಿಳಾ ಖೋಖೋ ಪಂದ್ಯಾವಳಿಯ ಮೂಲಕ ಮಹಿಳಾ ಸಬಲೀಕರಣಕ್ಕೆ ಪ್ರೋತ್ಸಾಹ ನೀಡಲಾಗಿದೆ. ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ತಯಾರಾಗಲು ಈ ಪಂದ್ಯಾವಳಿಗಳು ಉಪಯುಕ್ತವಾಗಿವೆ. ಈ ಮೂಲಕ ಕ್ರೀಡಾ ಕ್ಷೇತ್ರಕ್ಕೆ ಕೊಡುಗೆ ನೀಡಿದಂತಾಗಿದೆ ಎಂದರು.

ಅಲಯನ್ಸ್‌ ವಿಶ್ವವಿದ್ಯಾಲಯದ ಸಹ ಕುಲಪತಿ ಅಭಯ್‌ ಚೆಬ್ಬಿ ಮಾತನಾಡಿ ದಕ್ಷಿಣ ಭಾರತ ಅಂತರ್‌ ವಿಶ್ವವಿದ್ಯಾಲಯದ ಖೋಖೋ ಪಂದ್ಯಾವಳಿಯಲ್ಲಿ ದಕ್ಷಿಣ ಭಾರತದ ಆರು ರಾಜ್ಯಗಳ ೭೬ ವಿಶ್ವವಿದ್ಯಾಲಯಗಳು ಪಾಲ್ಗೊಳ್ಳುತ್ತಿದ್ದು ಒಂದು ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಕ್ರೀಡಾಹಬ್ಬವಾಗಿದೆ ಎಂದರು.

ವಿಶ್ವವಿದ್ಯಾಲಯದ ಸಹ ಉಪಕುಲಪತಿ ಡಾ.ಪುನೀತ್‌ ಕರಿಯಪ್ಪ, ಆಡಳಿತ ಮಂಡಳಿಯ ಶೈಲಾ ಚೆಬ್ಬಿ, ಸುರೇಖಾ ಶೆಟ್ಟಿ ಇದ್ದರು.

Leave a Reply

Your email address will not be published. Required fields are marked *

error: Content is protected !!