ತಾಯಿಗೆ ಮನಸ್ಸಿನಲ್ಲಿ ಗರ್ಭಗುಡಿಯೊಂದನ್ನು ಕಟ್ಟಿದ್ದಾರೆ ಎಸ್ ಪಿ ರಿಷ್ಯಂತ್.! ಆ ಗುಡಿಯಲ್ಲಿ ಅಮ್ಮನಿಗೆ ನಿತ್ಯ ಪೂಜೆ

ತಾಯಿಗೆ ಮನಸ್ಸಿನಲ್ಲಿ ಗರ್ಭಗುಡಿಯೊಂದನ್ನು ಕಟ್ಟಿದ್ದಾರೆ ಎಸ್ ಪಿ ರಿಷ್ಯಂತ್

ದಾವಣಗೆರೆ:  ಅಮ್ಮ… ನನ್ನಮ್ಮ… ನನಗೆ ನೀನೆ ಜಗವಮ್ಮ.. ಅಮ್ಮನೊಂದಿಗೆ ಕಳೆದ ಕ್ಷಣಗಳು ಹೇಗಿತ್ತು ಎಂಬುದನ್ನು ನೀವೇ ಓದಿ.

ಅಮ್ಮ….ಎಂದರೆ ಪ್ರಕೃತಿ ಮಾತೆ…ಇಡೀ ಪ್ರಕೃತಿ ಹೇಗೆ ತನ್ನ ಮಡಿಲಿನಲ್ಲಿ ಬೆಚ್ಚಗೆ ಅಪ್ಪಿಕೊಂಡು ಸಹಿಸಿಕೊಂಡಿದೆಯೋ..ಹಾಗೆ ನನ್ನ ತಾಯಿ ಕೂಡ….ಮಕ್ಕಳಿಗೆ  ಅಮ್ಮನಾಗಿ, ಗಂಡನಿಗೆ ಧರ್ಮಪತ್ನಿಯಾಗಿ ಇಡೀ ಸಂಸಾರದ ಒಡತಿಯಾಗಿದ್ದಾರೆ.

ನನ್ನ ತಾಯಿಗೆ ಆಕೆಯ ಸಹೋದರಿಯರ ಮಕ್ಕಳ ಮೇಲೆ ಪ್ರೀತಿ ಹೆಚ್ಚು…. ಅವರ ಆಗುಹೋಗುಗಳು, ಸಂತೋಷ ಎಲ್ಲವನ್ನೂ ಕೇಳುತ್ತಾರೆ. ನನ್ನ ಅಮ್ಮ-ಹೆಂಡತಿ ಇಬ್ಬರು ದೇವಸ್ಥಾನಕ್ಕೆ ಹೋಗುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಎಲ್ಲೆ ಹೋದರೂ ಅತ್ತೆ, ಅಮ್ಮ, ಹೆಂಡತಿ ಈ ಮೂವರು ದೇವರ ದರ್ಶನ ಮಾಡುತ್ತಾರೆ….ಅಮ್ಮ ಮಗಳ ರೀತಿಯಲ್ಲಿ ಸೊಸೆಯನ್ನು ನೋಡಿಕೊಂಡರೆ, ಸೊಸೆ ತನ್ನ ತಾಯಿಗಿಂತ ಹೆಚ್ಚಾಗಿ ಅತ್ತೆ ಸುಖ, ದುಃಖದಲ್ಲಿ ಭಾಗಿಯಾಗುತ್ತಾರೆ. ಅಮ್ಮನಿಗೆ ಪ್ರೀತಿ ಬೆಲೆ ಗೊತ್ತು. ಅದಕ್ಕಾಗಿಯೇ ನಮ್ಮಮ್ಮ ನಮ್ಮನ್ನು ಅವಳ ಕನಸಂತೆ ಸಾಕಲಿಲ್ಲ. ಮಕ್ಕಳು ಇಷ್ಟ ಪಟ್ಟಂತೆ ಸಾಕಿದಳು.

ಅಂದ ಹಾಗೆ ಮಾತೃ ವಾತ್ಸಲ್ಯ, ಮಾತೃ ಪ್ರೇಮಕ್ಕೆ ಬೆಲೆ ಕಟ್ಟಲೂ ಸಾಧ್ಯವಿಲ್ಲ. ಯಶೋಧೆ ಶ್ರೀ ಕೃಷ್ಣನನ್ನು ಬೆಳೆಸಿದ ಹಾಗೆ ನನ್ನನ್ನು ಬೆಳೆಸಿದಳು. ನನ್ನ ಸಾಧನೆಗೆ ಬೆಂಬಲವಾದಳು ಅಮ್ಮ. ನನಗೆ ತಾಯಿಯೇ ಮೊದಲ ಶಾಲೆ ಹಾಗೇ ಮೊದಲ ಶಿಕ್ಷಕಿ. ಈ ಕಾರಣದಿಂದಲೇ ಈ ಉನ್ನತ ಸ್ಥಾನ ತಲುಪಲು ಸಾಧ್ಯ ಆಯಿತು.

ನಾನು ಸಿಎ ಮಾಡಬೇಕೆಂದಿದ್ದೆ. ಬಳಿಕ ಬಿಸಿನೆಸ್ ಮಾಡಬೇಕೆಂದಿದ್ದೆ. ಈ ನಡುವೆ ಐಪಿಎಸ್ ಮಾಡುವ ಆಸೆ ಮನಸ್ಸಿನಲ್ಲಿ ಚಿಗೊರೆಡೆಯಿತು..ಮೊದಲ ಪ್ರಯತ್ನದ ಪರೀಕ್ಷೆ ಬರೆದಾಗ ಫೇಲಾದೆ. ತಲೆ ಕೆಡಿಸಿಕೊಳ್ಳಬೇಡ. ಚೆನ್ನಾಗಿ ಓದು. ನಿನಗೆ ಆಗದೇ ಹೋದರೆ ಬಿಸಿನೆಸ್ ಮಾಡು. ಭವಿಷ್ಯದ ಬಗ್ಗೆ ಚಿಂತೆ ಮಾಡಬೇಡ. ನಿನ್ನ ಜತೆ ನಾನು ಇರುತ್ತೇನೆ. ನಿನ್ನ ಕಣ್ಣಲ್ಲಿ ಗುರಿ ಇರಲಿ. ಅದರ ಕಡೆ ಮಾತ್ರ ನೋಡು. ಯಶಸ್ಸು ಸಿಕ್ಕೇ ಸಿಗುತ್ತದೆ ಮಗಾ’ ಎಂಬ ಮಾತನ್ನು ನೆನಪಿನಾಳದಿಂದ ನೆನೆದು ಹೇಳುವಾಗ ಭಾವುಕರಾದ ಐಪಿಎಸ್ ಅಧಿಕಾರಿಯ ಕಣ್ಣಂಚಿನಲ್ಲಿ ಕಂಬನಿಯಿತ್ತು..!

ಅಂದ ಹಾಗೆ ಇದು ಯಾರೋದ್ದು ಅನಾಮಿಕರೊಬ್ಬರ ಕಥೆ ಅಲ್ಲ. ಕರ್ನಾಟಕದಲ್ಲಿ ದಕ್ಷ ಹಾಗೂ ಅತ್ಯುತ್ತಮ ಐಪಿಎಸ್ ಅಧಿಕಾರಿಯೆಂದೇ ಟೈಟಲ್ ಕಾರ್ಡ್ ಪಡೆದಿರುವ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್  ಅವರ ಫ್ಲ್ಯಾಶ್‌‌‌ ಬ್ಯಾಕ್.  ತಮ್ಮ ಹೆತ್ತ ತಾಯಿ  ಸಿ.ಭಾನುಮತಿ ಅವರ ಮಾತೃ ವಾತ್ಸಲ್ಯ ಕುರಿತು ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ನಮ್ಮೂರು ರಾಜಧಾನಿ ಬೆಂಗಳೂರು. ಜೆಪಿ ನಗರ, ಜಯ ನಗರದಲ್ಲಿಯೇ ಹುಟ್ಟಿ ಬೆಳೆದದ್ದು. ಅಲ್ಲಿಯೇ ಕಳೆದ ನನ್ನ ಬಾಲ್ಯಗಳು ಮತ್ತು ತಾರುಣ್ಯದ ದಿನಗಳು ಇಂದಿಗೂ ಅಪೂರ್ವ ನೆನಪುಗಳು.. ನನ್ನ ಅಮ್ಮ ಆಗಿನ ಕಾಲಕ್ಕೆ ಬಿಎ  ಓದಿಕೊಂಡಿದ್ದ ಪದವೀಧರೆ. ತಂದೆ ಭಾಸ್ಕರ್, ಅಣ್ಣ ಕೃಷ್ಣ ಚೈತನ್ಯ ಬಿಸಿನೆಸ್ ಮನ್. ಅದೇಕೋ ಗೊತ್ತಿಲ್ಲ. ನನ್ನ ತಾಯಿ ನಡುವೆ ನನಗೆ ಅಟ್ಯಾಚ್ಮೆಂಟ್ ಜಾಸ್ತಿ. ಇಷ್ಟು ದೊಡ್ಡವರಾದರೂ ಪ್ರತಿ ದಿನ ನನ್ನ ಉಭಯಕುಶಲೋಪಹರಿ ವಿಚಾರಿಸುತ್ತಾರೆ ಎಂದು ಎಸ್ಪಿ ರಿಷ್ಯಂತ್ ತಾಯಿ ಬಗ್ಗೆ ಮನದುಂಬಿ ನೆನೆಯುತ್ತಾರೆ..

ಭೂಮಿ ಮೇಲಿನ ಅನರ್ಘ್ಯ ವಸ್ತುಗಳಿಗೆ ಬೆಲೆ ಕಟ್ಟಬಹುದು. ಆದರೆ ತಾಯಿ ಪ್ರೀತಿಗೆ ಬೆಲೆ ಕಟ್ಟೋಕೆ ಸಾಧ್ಯ ಇಲ್ಲ. ಅಮ್ಮನ ಹೃದಯದಲ್ಲಿ ಪತಿಗಿಂತ ಮಕ್ಕಳಿಗೆ ಹೆಚ್ಚು ಸ್ಥಾನವಿತ್ತು. ನಾನು ಎರಡನೇ ಮುದ್ದು ಮಗ. ಚಿಕ್ಕನಿಂದಲ್ಲೇ ನಮಗೆ ಕನಸ್ಸನ್ನು ಬಿತ್ತಿದವರು ನನ್ನ ಅಮ್ಮ. ತನ್ನ ಮಗ ಯಾರ ಮುಂದೆಯೂ ತಲೆ ತಗ್ಗಿಸದಂತೆ ಓಡಾಡಬೇಕು ಎಂಬ ಮಹದಾಸೆ. ಸುಖದುಃಖಗಳಲ್ಲಿ ತಾಯಿ ಹೃದಯ ಮಾತ್ರ ಮಕ್ಕಳಿಗೆ ಸಾಂತ್ವನ ಹೇಳಲು ಸಾಧ್ಯ. ಈ ದೊಡ್ಡ ಗುಣ ನನ್ನ ತಾಯಿಯಲ್ಲೂ ಇದೆ. ಇದು ತಾಯಂದಿರ ಸ್ಥಾನದ ವಿಶೇಷವೂ ಹೌದು. ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರುತ್ತಾರೆ. ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎಂಬ ಲೋಕೋಕ್ತಿ ಇದೆ.  ಅದುವೇ ತಾಯಿ ಶ್ರೇಷ್ಠತೆ. ತನ್ನ ಸುಖ ಮರೆತು ತ್ಯಾಗ ಮಾಡಿ ಮಕ್ಕಳ ಸಂತೋಷದಲ್ಲಿ ಭಾಗಿಯಾದವರು ನನ್ನ ತಾಯಿ ಭಾನುಮತಿ. ನಾನು ಹೇಳಿದ್ದಕ್ಕೆಲ್ಲ ಎಸ್ ಎನ್ನುತ್ತಿದ್ದರು.

ಅಮ್ಮ ಎಂದರೆ ಏನೋ ಹರುಷವು, ನಮ್ಮ ಪಾಲಿಗೆ ಅವಳೇ ದೈವವು. ಎಂಬ ಹಾಡಿನ ಸಾಲುಗಳಂತೆ ಅಮ್ಮ ಎಂಬ ಶಬ್ದವೇ ನಮ್ಮಲ್ಲಿ ಧನ್ಯತೆ ತಂದು ಬಿಡುತ್ತದೆ. ಅಂತೆಯೇ ಆಕೆ ದೈವ ಸಮಾನಳೂ ಆಗಿದ್ದಾಳೆ. ನಾನು ಮನೆಗಿಂತ ಹೊರಗಡೆ ಇದ್ದದ್ದೇ ಜಾಸ್ತಿ. ಓದಿಗಾಗಿ ಸುಮಾರು 12 ವರ್ಷ ಹೊರಗಡೆ ಇದ್ದೆ. ಒಂದು ಕಡೆ ಮಗನನ್ನು ಹೊರಗಡೆ ಕಳಿಸೋದಕ್ಕೆ ಇಷ್ಟವಿಲ್ಲ. ಇನ್ನೊಂದು ಕಡೆ ಮಗನ ಆಸೆಗೆ ತಣ್ಣೀರು ಎರಚುವ ಹಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತಾಯಿ ಗಟ್ಟಿ ಮನಸ್ಸು ಮಾಡಿ ಹೊರಗಡೆ ಕಳುಹಿಸಿದರು. ಅಂದುಕೊಂಡಂತೆ ಇಂದು ಐಪಿಎಸ್ ಅಧಿಕಾರಿ ಆಗಿದ್ದೇನೆ ಎಂದು ತಮ್ಮ ಬದುಕಿನ ಪಯಣವನ್ನ ಬಿಚ್ಚಿಟ್ಟರು ರಿಷ್ಯಂತ್. ಅಮ್ಮ ನನಗೆ ಬಾಲ್ಯದಲ್ಲಿಯೇ ಹೇಗಿರಬೇಕೆಂದು ಕಲಿಸಿದರು. ಹಾಗೆಯೇ ಜೀವನ ಹೇಗೆ ನಡೆಸಬೇಕೆಂದು ಹೇಳಿಕೊಟ್ಟರು. ಇನ್ನು ಸಮಾಜದ ಕೆಡುಕುಗಳ ವಿರುದ್ಧ ಹೋರಾಟಕ್ಕೆ ಅವರೇ ಪ್ರೇರಣೆ.. ಅಮ್ಮ.. ಲವ್ ಯೂ..

ಅರ್ಧಾಂಗಿಯೇ ನನ್ನ ಮನೆ ಬೆಳಕು:

ನನ್ನ ಹೆಂಡತಿ ಎನ್.ಭಾರತಿ ನನ್ನ ಮನೆ ಬೆಳಕು. ಓದಿದ್ದು ಬಿಬಿಎಂ, ಈಗ ಎಲ್ ಎಲ್ ಬಿ ಮಾಡುತ್ತಿದ್ದಾಳೆ. ಮಕ್ಕಳಿಬ್ಬರನ್ನು ನೋಡಿಕೊಂಡು ಜತೆಗೆ ನನ್ನ ಬಗ್ಗೆ ಕೂಡ ಕೇರ್ ತಗೋತಾಳೆ. ನನಗೆ ನೋವಾದಾಗ ಸಮಾಧಾನದ ನುಡಿಗಳನ್ನಾಡುತ್ತಾಳೆ.  ನನ್ನಮ್ಮನಿಗೆ ಹೆಣ್ಣು ಮಕ್ಕಳು ಇಲ್ಲದ ಕಾರಣ ಅವಳೇ ಮಗಳಾಗಿದ್ದಾಳೆ. ಅಮ್ಮನ ಜತೆ ದೇವಸ್ಥಾನಕ್ಕೆ ಹೋಗುವ ಅಭ್ಯಾಸವಿದೆ. ಸಣ್ಣದೊಂದು ಪ್ಲೇ ಹೋಮ್ ಮಾಡಿಕೊಂಡು ಮುದ್ದು ಕಂದಮ್ಮಗಳ ಜತೆ ಆಟವಾಡುತ್ತಾ ಸಮಯ ಕಳೆಯುತ್ತಾಳೆ. ಒಟ್ಟಾರೆ ನನ್ನ ತಾಯಿ ಮತ್ತು ನನ್ನ ಹೆಂಡತಿ ನನ್ನ ಜೀವನದ ಎರಡು ಕಣ್ಣುಗಳು ಎಂದು ಕೃತಜ್ಞತೆ ಅರ್ಪಿಸುತ್ತಾರೆ ಎಸ್ ಪಿ ಸಿ.ಬಿ. ರಿಷ್ಯಂತ್.

ಮಗಳೆಂದರೆ ಅಪ್ಪನಿಗೆ ಪ್ರಾಣ:

ತ್ರಿಶತಿ ನನ್ನ ಮಗಳು, ಅಪ್ಪ ಎಂದರೆ ಪಂಚಪ್ರಾಣ. ದಿನಕ್ಕೊಂದು ಬಾರಿ ಪೋನ್ ಮಾಡದೇ ಹೋದರೆ ಸಮಾಧಾನವೇ ಇರೋದಿಲ್ಲ. ಐಪಿಎಸ್ ಅಥವಾ ಐಎಎಸ್ ಓದುವ ಆಸೆ ಇಟ್ಟುಕೊಂಡಿದ್ದಾಳೆ. ಚೆನ್ನಾಗಿ ಓದುತ್ತಿದ್ದಾಳೆ. ಅಮ್ಮನ ಮಡಿಲು ಮತ್ತು ಅಪ್ಪನ ನೆರಳಿನಲ್ಲಿ ಬೆಳೆಯುತ್ತಿರುವ ತ್ರಿಶತಿ ಭವಿಷ್ಯದ ಬಗ್ಗೆ ಎಸ್ ಪಿ ರಿಷ್ಯಂತ್ ಅವರಿಗೂ ಸುಂದರ ಕನಸುಗಳಿವೆ. ಅವು ನನಸಾಗಲಿ ಎಂದು ಹಾರೈಸೋಣ.

Leave a Reply

Your email address will not be published. Required fields are marked *

error: Content is protected !!