ಮೆಟ್ರೋ ರೈಲು ಹಳಿಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ

ಮೆಟ್ರೋ ಸ್ಟೇಷನ್​ನಲ್ಲಿ ಯುವಕನೊಬ್ಬ ರೈಲು ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಅತ್ತಿಗುಪ್ಪೆಯಲ್ಲಿ ನಡೆದಿದೆ.

ಧ್ರುವ್ ಟಕ್ಕರ್ (19) ಮೃತ ಯುವಕ.

ಗುರುವಾರ ಮಧ್ಯಾಹ್ನ 2:10ರ ಸುಮಾರಿಗೆ ಮೆಟ್ರೋ ಹಳಿಗೆ ವ್ಯಕ್ತಿ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮೃತ ಯುವಕ ಮೊದಲ ವರ್ಷದ ಲಾ ವಿದ್ಯಾರ್ಥಿಯಾಗಿದ್ದ. ನ್ಯಾಷನಲ್ ಲಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಮೊಬೈಲ್‌​ನಲ್ಲಿ ಮಾತನಾಡುತ್ತಾ ಅತ್ತಿಗುಪ್ಪೆ ಮೆಟ್ರೋ ಸ್ಟೇಷನ್​ಗೆ ಬಂದಿದ್ದಾನೆ. ಈ ವೇಳೆ ವಿದ್ಯಾರ್ಥಿ ಜೊತೆಗೆ ಓರ್ವ ಯುವತಿ ಹಾಗೂ ಮತ್ತೊರ್ವ ಇದ್ದರು. ಫೋನ್​ನಲ್ಲಿ ಮಾತನಾಡುತ್ತಾ ಅಲ್ಲಿಂದ ನೇರವಾಗಿ ರೈಲು ಬರುವ ಸಮಯದಲ್ಲಿ ಟ್ರ್ಯಾಕ್​ ಮೇಲೆ ಹಾರಿದ್ದಾನೆ. ಕೂಡಲೇ ಜೊತೆಗಿದ್ದವರು ಆತನನ್ನು ಎಳೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ ರೈಲು ಹತ್ತಿರ ಬಂದಾಗ ಕೂಡಲೇ ಓಡಿ ಹೋಗಿದ್ದಾರೆ.

ಚಕ್ರಕ್ಕೆ ಸಿಲುಕಿ ವಿದ್ಯಾರ್ಥಿಯ ತಲೆ ಹಾಗೂ ದೇಹ ಬೇರೆಯಾಗಿದೆ. ಸ್ಥಳಕ್ಕೆ ವೆಸ್ಟ್ ಡಿಸಿಪಿ ಗಿರೀಶ್ ಭೇಟಿ ನೀಡಿ ಮೆಟ್ರೋ ಹಳಿಯ ಮೇಲೆ ಬಿದ್ದ ಮೃತ ದೇಹವನ್ನು ಹೊರ ತೆಗೆದಿದ್ದಾರೆ. ಕೂಡಲೇ ಪೊಲೀಸರು ಕಾಲೇಜಿಗೆ ಕರೆ ಮಾಡಿ ಪೋಷಕರ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಘಟನೆ ಹಿನ್ನೆಲೆ BMRCL ನಮ್ಮ ಮೆಟ್ರೋ ಸಂಚಾರ ನಿಲ್ಲಿಸಿ, ಮಾಗಡಿ ರೋಡ್​ನಿಂದ ವೈಟ್ ಫೀಲ್ಡ್​ವರೆಗೆ ಮಾತ್ರ ಸಂಚಾರ ಮಾಡಲಿದೆ. ಮೃತ ವಿದ್ಯಾರ್ಥಿಯ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!