ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಅಳವಡಿಸಿಕೊಂಡು ದೇಶ ಸೇವೆಗೆ ನಿಲ್ಲಿ – ಸಾಹಿತಿ ಶೇಖರ್ ಭಜಂತ್ರಿ

ಹಾವೇರಿ: ವಿವೇಕಾನಂದರು ಈ ದೇಶದ ಅಂತಃಶಕ್ತಿಯ ಪ್ರತೀಕ. ಸರ್ವ ಶ್ರೇಷ್ಠ ಸಂತರು, ವೀರಸನ್ಯಾಸಿಯಾಗಿ ದೇಶದ ಭವಿಷ್ಯವನ್ನು ಕಟ್ಟಲು ಸುಭದ್ರ ಅಡಿಪಾಯ ಹಾಕಿದ ಶ್ರೇಷ್ಠ ಆಧ್ಯಾತ್ಮಿಕ ಚಿಂತಕರಾಗಿದ್ದರು. ಇದು ನಮ್ಮ ದೇಶದ ಹೆಮ್ಮೆಯ ವಿಷಯ.ನಮ್ಮಲ್ಲಿರುವ ದೌರ್ಬಲ್ಯಗಳನ್ನು ನಿವಾರಿಸಿಕೊಂಡು ಅಂತರ್ಗತವಾಗಿರುವ ಅದಮ್ಯ ಚೈತನ್ಯ ಶಕ್ತಿಯನ್ನು ಸರಿಯಾಗಿ ಉಪಯೋಗಿಸಿಕೊಂಡರೆ ಅತ್ಯದ್ಭುತ ಕಾರ್ಯಗಳನ್ನು, ಸಾಧನೆಗಳನ್ನು, ಮತ್ತು ಸೇವೆಯನ್ನು ಮಾಡಲು ಸಾಧ್ಯವಿದೆ.ಅತ್ಯಂತ ಶಕ್ತಿಯುತ ಸಾಮರ್ಥ್ಯಗಳನ್ನು ಹೊಂದಿರುವ ಯುವಜನರು ತಮ್ಮ ಅಂತಶಕ್ತಿಯನ್ನು ವಿನಾಕಾರಣ ಹಾಳು ಮಾಡದೆ ಸದ್ಬಳಕೆ ಮಾಡಿಕೊಳ್ಳಬೇಕು.ಆ ಮೂಲಕ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಸಂಪೂರ್ಣವಾಗಿ ಅಳವಡಿಸಿಕೊಂಡು ಮಹತ್ಕಾರ್ಯಗಳನ್ನು ಸಾಧಿಸಿ, ದೇಶಸೇವೆಗೆ ನಿಲ್ಲಬೇಕೆಂದು ಉಪನ್ಯಾಸಕರು ಮತ್ತು ಸಾಹಿತಿಗಳಾದ ಶೇಖರ್ ಭಜಂತ್ರಿ ನುಡಿದರು.

ಇಲ್ಲಿನ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸ್ವಾಮಿ ವಿವೇಕಾನಂದರ 159 ನೇ ಜನ್ಮದಿನಾಚರಣೆ ಪ್ರಯುಕ್ತ ರಾಷ್ಟ್ರೀಯ ಯುವ ದಿನಾಚರಣೆ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ ಸ್ವಾಮಿ ವಿವೇಕಾನಂದರು ಆಧ್ಯಾತ್ಮಲೋಕದಲ್ಲಿನ ಮೇರುಪರ್ವತ. ನಮ್ಮೊಳಗಿನ ಶಕ್ತಿಯನ್ನು ಬಡಿದೆಚ್ಚರಿಸಿದ ಮೊದಲ ವೀರ ಸಂತರು. ಎಲ್ಲೋ ಇರುವ ದೇವರನ್ನು ತಂದು ನಮ್ಮ ಎದೆಯೊಳಗೆ ಪ್ರತಿಷ್ಠಾಪಿಸಿದವರು. ‘ದೇವರು ಬೇರೆ ಎಲ್ಲೂ ಇಲ್ಲ ನಿಮ್ಮ ಎದೆಯೊಳಗಿದ್ದಾನೆಂದು ತೋರಿದರು’. ನಮ್ಮ ಭಾವನೆಗಳಾದ ಭಕ್ತಿ, ಶಕ್ತಿ,ಯುಕ್ತಿ, ಮುಕ್ತಿ, ಪ್ರೀತಿ, ಕರುಣೆ, ನಂಬಿಕೆ, ವಿಶ್ವಾಸ, ದ್ವೇಷ, ಅಸೂಯೆ, ಅಹಂಕಾರ ಇತ್ಯಾದಿ ಗುಣಗಳು ನಮ್ಮಲ್ಲಿಯೇ ಇವೆ. ಅವುಗಳಲ್ಲಿ ಒಳ್ಳೆಯ ಗುಣಗಳನ್ನು ಬಳಸಿ ಬೆಳೆಸಿಕೊಳ್ಳಬೇಕು ದುರ್ಗುಣಗಳನ್ನು ತ್ಯಜಿಸಬೇಕೆಂದರು.ಆದ್ದರಿಂದ ‘ಎಲ್ಲ ಶಕ್ತಿಯೂ ನಿಮ್ಮೊಳಗೇ ಅಡಗಿದೆ.ನೀವು ಏನು ಬೇಕಾದರೂ ಸಾಧಿಸಬಹುದು ಎಲ್ಲವನ್ನೂ ಮಾಡಬಹುದು, ಅದರಲ್ಲಿ ವಿಶ್ವಾಸವಿಡಿ” ಎಂದು ವಿವೇಕಾನಂದರು ಕರೆಯಿತ್ತರು. ಅದರಂತೆ ನಿಮಗೆ ನೀವೇ ಶಿಲ್ಪಿಗಳಾಗಬೇಕು. ಯಾರೂ ನಿಮ್ಮನ್ನು ಉದ್ಭವಿಸುವುದಿಲ್ಲ. ಅಪ್ರತಿಮ ಧೈರ್ಯದೊಂದಿಗೆ ಮುನ್ನುಗ್ಗಿ ಗುರಿ ಬೆನ್ನಟ್ಟಬೇಕು. ” ಪ್ರಬಲತೆಯ ಜೀವನ ದುರ್ಬಲತೆಯೇ ಮರಣ”ವಿದ್ದಂತೆ ಯುವಕರು ಸರಿಯಾದ ಮಾರ್ಗದಲ್ಲಿ ನಡೆದರೆ ಅದ್ಭುತ ದೇಶವನ್ನು ಕಟ್ಟಬಹುದು ಎಂದು ಸ್ವಾಮೀಜಿ ಕರೆ ಕೊಟ್ಟರು. ಯುವಕರ ಬಗ್ಗೆ ಅಪಾರ ಪ್ರೀತಿ, ಭರವಸೆ ಹೊಂದಿದ್ದ ವಿವೇಕಾನಂದರು ಏಳಿ ಎದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲದಿರಿ ಎಂದು ಘೋಷಣೆ ನೀಡಿದರು.

ವಿವೇಕಾನಂದರ ದೃಷ್ಟಿಯಲ್ಲಿ ಯಾವುದೇ ಇಬ್ಬರು ವ್ಯಕ್ತಿಗಳನ್ನು ವಿಭಾಗಿಸುವುದಾದರೆ ಕೇವಲ ಅವರಲ್ಲಿನ ಏಕಾಗ್ರತೆ ಮತ್ತು ಆತ್ಮವಿಶ್ವಾಸದ ಮಟ್ಟದಿಂದಲೇ ಹೊರತು ಅವರು ಯಾವ ಜಾತಿ, ಬಣ್ಣ, ಸಮುದಾಯ, ಧರ್ಮದವರೆಂಬ ಆಧಾರದ ಮೇಲಲ್ಲ ಎಂದು ಅದ್ಭುತ ಕಲ್ಪನೆಯನ್ನು ನೀಡಿದರು.ಆದ್ದರಿಂದ ನಮ್ಮಲ್ಲಿರುವ ಭೇದ ಭಾವಗಳನ್ನು ತೊಡೆದು ಹಾಕಿ ಎಲ್ಲರನ್ನೂ ಒಪ್ಪಿ ಅಪ್ಪಿಕೊಂಡು ಪ್ರೀತಿ ಹಂಚಿದಾಗ ಮಾತ್ರ ಸದೃಢ ಭಾರತವನ್ನು ಕಟ್ಟಲು ಸಾಧ್ಯ ಎಂದು ಸ್ವಾಮೀಜಿ ತಿಳಿಸಿದರು. ಹಾಗಾಗಿ ನಾವೆಲ್ಲರೂ ಪ್ರತಿಯೊಬ್ಬರನ್ನ ಪ್ರೀತಿ, ಅಂತ:ಕರುಣೆ ವಿಶ್ವಾಸದಿಂದ ಕಾಣಬೇಕು. ಆ ಮೂಲಕ ಮಾನವೀಯ ಗುಣಗಳನ್ನು ಹೊಂದಿ ವಿಶ್ವಮಾನವತೆ ಕಡೆಗೆ ಮುನ್ನುಗ್ಗಬೇಕೆಂದು ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ತಿಳಿಸುತ್ತಾ ಅವರ ಪ್ರೇರಣೆಯಿಂದಲೇ ತಮ್ಮ ಬದುಕನ್ನು ಹಸನಾಗಿಸಿಕೊಂಡವರ ಕಥೆಗಳನ್ನ ವಿದ್ಯಾರ್ಥಿಗಳಿಗೆ ತಿಳಿಸಿದರು. ಒಟ್ಟಿನಲ್ಲಿ ಅಚಲವಾದ ನಂಬಿಕೆ, ಭಕ್ತಿ ,ಶ್ರದ್ಧೆ,ನಿಷ್ಠೆ ,ಪ್ರಾಮಾಣಿಕತೆ, ಪರಿಶ್ರಮ, ಪ್ರೀತಿಯಿಂದ ಮಾತ್ರ ಮಹತ್ಕಾರ್ಯಗಳನ್ನು ಸೃಷ್ಟಿಸಲು ಸಾಧ್ಯ ಎಂಬ ವಿವೇಕಾನಂದರ ಸಂದೇಶಗಳನ್ನು ಶೇಖರ ಭಜಂತ್ರಿಯವರು ಮನದಟ್ಟು ಮಾಡಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಹಿರಿಯ ಉಪನ್ಯಾಸಕರಾದ ಎಸ್‌ . ಸಿ. ಮರಡಿಯವರು ವಹಿಸಿ ವಿವೇಕಾನಂದರ ಬದುಕಿನ ಕೆಲ ಘಟನೆಗಳನ್ನು ಮೆಲುಕು ಹಾಕಿ ಅವರ ಸಂದೇಶಗಳನ್ನು ಅಳವಡಿಸಿಕೊಳ್ಳಲು ತಿಳಿಸಿದರು. ಇದಕ್ಕೂ ಮೊದಲು ಕುಮಾರಿ ಮಂಜುಳಾ ಲಮಾಣಿ ಪ್ರಾರ್ಥನೆ ಸಲ್ಲಿಸುತ್ತಾ ವಿವೇಕನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಕೆಲ ವಿದ್ಯಾರ್ಥಿನಿಯರು ವಿವೇಕಾನಂದರ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ರವಿ ಸಾದರ್ ಶ್ರೀಮತಿ ಪುಷ್ಪಲತಾ ಡಿ.ಎಲ್., ಎಂ.ಎನ್. ಹತ್ತಿಯವರ , ಸತೀಶ್ ಬಿ. ಮುತ್ತುರಾಜ ಇತರರು ಹಾಜರಿದ್ದರು. ಕುಮಾರಿ ರಾಧಿಕಾ ಗೌಡರ್ ನಿರೂಪಿಸಿದರೆ, ಕುಮಾರಿ ಪ್ರಿಯಾಂಕಾ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!