ಸ್ವರೂಪ ಬದಲಾದರೂ ಮೂಲ ಆಶಯ ಮತ್ತು ವೃತ್ತಿ ಬದ್ಧತೆಯಲ್ಲಿ ಬದಲಾಗಬಾರದು: ಕೆ.ವಿ.ಪ್ರಭಾಕರ್ ಆಶಯ

ಸ್ವರೂಪ

ದಾವಣಗೆರೆ: ಅಚ್ಚುಮೊಳೆಯಿಂದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ವರೆಗೂ ಪತ್ರಿಕಾ ವೃತ್ತಿ ತಾಂತ್ರಿಕವಾಗಿ ಬಹಳ ಬದಲಾವಣೆ ಕಂಡಿದೆ. ಆದರೆ ಮೂಲ ಆಶಯ ಮತ್ತು ಬದ್ದತೆ ಮಾತ್ರ ಬದಲಾಗಿಲ್ಲ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.
ದಾವಣಗೆರೆ ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ೩೮ನೇ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ “ಸರಕಾರ ಮತ್ತು ಮಾಧ್ಯಮ’ ಕುರಿತ ಸಂವಾದ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಈಗ ಅಧಿಕಾರಸ್ಥರ ಮತ್ತು ಪತ್ರಕರ್ತರ ನಡುವೆ ಸಂಪರ್ಕ ಅನಿವಾರ್ಯ ಅನ್ನುವ ಸ್ಥಿತಿ ಬಂದಿದೆ. ಮೊದಲೆಲ್ಲಾ ಪತ್ರಕರ್ತರು ಅಧಿಕಾರಸ್ಥರ ಜತೆ ನಿಕಟ ಸಂಪರ್ಕ ಹೊಂದುವುದಕ್ಕೆ ಬಹಳ ಮುಜುಗರ ಅನುಭವಿಸುತ್ತಿದ್ದರು ಎಂದರು.
ಈಗ ಜಾಹೀರಾತು ತರುವುದು ಪತ್ರಕರ್ತರ ಪ್ರಮುಖ ಜವಾಬ್ದಾರಿ ಆಗಿಬಿಟ್ಟಿದೆ. ತನಿಖಾ ಪತ್ರಿಕೋದ್ಯಮ ಮತ್ತು ಅಭಿವೃದ್ಧಿ ಪತ್ರಿಕೋದ್ಯಮದ ಹೊಣೆ ಹಿಂದಕ್ಕೆ ಸರಿದಿದೆ. ಸ್ವಾತಂತ್ರ‍್ಯ ನಂತರದ ಭಾರತೀಯ ಪತ್ರಿಕೋದ್ಯಮ ಅಭಿವೃದ್ಧಿ ಮತ್ತು ಜನಮುಖಿ ಪತ್ರಿಕೋದ್ಯಮವನ್ನು ಪ್ರಥಮ ಆದÀ್ಯತೆಯನ್ನಾಗಿಸಿಕೊಂಡಿತ್ತು. ಈಗ ಬದಲಾದ ಸನ್ನಿವೇಶದಲ್ಲಿ, ಜವಾಬ್ದಾರಿ ಮತ್ತು ಹೊಣೆಗಾರಿಕೆಗಳೂ ಬದಲಾಗುತ್ತಿವೆ ಎಂದರು.
ಪತ್ರಕರ್ತರು ಮೊದಲು ತಮ್ಮ ಮತ್ತು ತಮ್ಮ ಕುಟುಂಬದ ಆರೋಗ್ಯ, ಯೋಗಕ್ಷೇಮದ ಕಡೆಗೂ ಗಮನ ಹರಿಸಬೇಕು. ಕೆಲಸದ ಒತ್ತಡದ ನಡುವೆಯೂ ಈ ದಿಕ್ಕಿನಲ್ಲೂ ಗಮನ ಹರಿಸಿ ಎಂದು ಸಲಹೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಮತ್ತು ಎರಡನೇ ಬಾರಿ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಪತ್ರಕರ್ತ ಸಮುದಾಯದ ವೃತ್ತಿಪರತೆ ಮತ್ತು ಪ್ರಗತಿಗೆ ನೀಡಿದ ನೆರವುಗಳನ್ನು ಪಟ್ಟಿ ಮಾಡಿದ ಕೆ.ವಿ.ಪ್ರಭಾಕರ್ ಅವರು, ಈ ಬಾರಿಯ ಬಜೆಟ್‌ನಲ್ಲಿ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಒದಗಿಸುವ ಕುರಿತು ಗಂಭೀರವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಪತ್ರಿಕಾ ವಿತರಕರನ್ನು ಇದೇ ಮೊದಲ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಿದ್ದಕ್ಕಾಗಿ ಮುಖ್ಯಮಂತ್ರಿಗಳಿಗೆ ಅಭಿನಂದಿಸಿದ ಅವರು, ಪತ್ರಿಕಾ ವಿತರಕರಿಗೆ ಇ-ಶ್ರಮ್ ವಿಮಾ ಸೌಲಭ್ಯ ಜಾರಿಗೆ ತರಲಾಗಿದೆ ಎಂದರು.

ಸ್ವರೂಪ
ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಸದಾನಂದ ಹೆಗಡೆ ಮಾತನಾಡಿ, ಸರಕಾರ ಟೀಕಿಸುವ ಸಂದರ್ಭದಲ್ಲಿ ಪತ್ರಿಕೋದ್ಯಮ ದಿಟ್ಟತನ ಉಳಿಸಿಕೊಳ್ಳಬೇಕು ಅದು ನಮ್ಮ ಕರ್ತವ್ಯ. ಮುಖ್ಯಮಂತ್ರಿಗಳು ಹೇಳಿದಂತೆ ಪತ್ರಕರ್ತರು ರಾಜಕಾರಣ ಮಾಡಬಾರದು. ತನಿಖಾ ಪತ್ರಿಕೋದ್ಯಮ ಮುಖ್ಯ. ಹತ್ತರಲ್ಲಿ ಹನ್ನೊಂದನೇ ಪತ್ರಿಕೆ ಆಗಬಾರದು ಎಂದು ಸೂಚ್ಯವಾಗಿ ಹೇಳಿದರು.
ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮ ಶಿವಮೊಗ್ಗ ಮಾತನಾಡಿ, ಪತ್ರಿಕೋದ್ಯಮ ಎನ್ನುವುದು ಉದ್ಯಮವಾಗಿ ಗುರುತಿಸಿಕೊಳ್ಳಬಾರದಿತ್ತು. ಹೆಸರಲ್ಲೇ ಅದು ಇದೆ. ಈಗ ಪರಿಪೂರ್ಣವಾಗಿ ಉದ್ಯಮವಾಗಿದೆ. ಸರ್ಕಾರದ ವಿರುದ್ಧ ಕೆಲಸ ಮಾಡುವುದನ್ನು ಮಾಧ್ಯಮ ರೂಢಿಸಿಕೊಂಡು ಜನಪರ ಇರಬೇಕಿತ್ತು. ಇನ್ನು ಮುಂದೆಯೂ ಅದು ಹಾಗಿರುತ್ತೆ ಎನ್ನುವ ಭರವಸೆ ಇಲ್ಲ ಅದು ಕ್ಷೀಣಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಲಂಕೇಶ್ ಪತ್ರಿಕೆ ಆ ಕೆಲಸ ಮಾಡಿತ್ತು. ಆಡಳಿತ ಪಕ್ಷಕ್ಕೆ ಸಿಂಹಸ್ವಪ್ನವಾಗಿ ಕೆಲಸ ಮಾಡಿತ್ತು. ಪ್ರಬುದ್ಧವಾದ ಕೆಲಸ ಮಾಡಿದವರನ್ನು ಟೀಕಿಸುವ ಧೈರ್ಯ ಮಾಡಿದ್ದು ಲಂಕೇಶ್ ಪತ್ರಿಕೆ. ಉದ್ಯಮಿಗಳು ಮಾಧ್ಯಮದ ಮಾಲೀಕರಾಗುತ್ತಿರುವುದರಿಂದ ಹೇಗೆ ವಿಪಕ್ಷವಾಗಿ ಕೆಲಸ ಮಾಡಲು ಸಾಧ್ಯ. ಮಾಧ್ಯಮ ಈಗಾಗಲೇ ತನ್ನ ಉದ್ವೇಗ ಕಳೆದುಕೊಂಡಿದೆ. ಸರ್ಕಾರದ ವಿರುದ್ಧ ಯಾವಾಗ ಆ ಪತ್ರಿಕೆ ಬರೆಯುವುದನ್ನು ನಿಲ್ಲಿಸುತ್ತದೋ ಅಂದೇ ಆ ಪತ್ರಿಕೆ ತನ್ನ ಪತ್ರಿಕಾಧರ್ಮ ಕಳೆದುಕೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸೇರಿದಂತೆ ಸಂಘದ ಹಲವು ಪದಾಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!