ಕಾರ್ಮಿಕರ ದುಡಿಮೆಯಲ್ಲಿ ಅಡಗಿದೆ ದೇಶದ ಅಭಿವೃದ್ದಿ: ಎಲ್.ಹೆಚ್.ಅರುಣ್‌ಕುಮಾರ್

ಕಾರ್ಮಿಕರ ದುಡಿಮೆಯಲ್ಲಿ ಅಡಗಿದೆ ದೇಶದ ಅಭಿವೃದ್ದಿ: ಎಲ್.ಹೆಚ್.ಅರುಣ್‌ಕುಮಾರ್

ದಾವಣಗೆರೆ: ಇಂದು ಪ್ರತಿಯೊಂದು ಹೋರಾಟಗಳು ಕೂಡ ಯಾವುದೋ ಒಂದು ವ್ಯವಸ್ಥೆಗೆ ಅವಲಂಬಿತವಾಗಿ ಇಲ್ಲವೇ ಕೆಲವರ ಹಿತಾಸಕ್ತಿಗೆ ತಕ್ಕಂತೆ ತನ್ನದೇ ಆದ ನೆಲೆಯಲ್ಲಿ ಸಾಗುತ್ತಿರುವುದು ದುರಂತದ ಸಂಗತಿ ಎಂದು ದಾವಣಗೆರೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣ್ ಕುಮಾರ್ ಆತಂಕ ವ್ಯಕ್ತಪಡಿಸಿದರು.
ನಗರದ ಶ್ರೀರಾಮ ಪಾರ್ಕ್ ಬಳಿ ಇರುವ ವನಿತಾ ಸಮಾಜದಲ್ಲಿ ಎಐಯುಟಿಯುಸಿ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾರ್ಮಿಕರ ತಮ್ಮ ಕಠಿಣ ಪರಿಶ್ರಮ, ಸಮರ್ಪಣಾ ಮನೋಭಾವ, ಬಲವಾದ ಇಚ್ಚಾಶಕ್ತಿಯಿಂದ ದೇಶದ ಪ್ರಗತಿಗೆ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರೇ ದೇಶದ ಆಸ್ತಿ, ಅವರ ದುಡಿಮೆಯಲ್ಲಿ ಅಡಗಿದೆ ದೇಶದ ಅಭಿವೃದ್ದಿ ಎಂದು ಹೇಳಿದರು.
ಇಂದು ಎಲ್ಲಾ ಪಕ್ಷಗಳಲ್ಲಿ ಕಾರ್ಮಿಕ ಸಂಘಟನೆಯನ್ನು ಕಾಣುತ್ತಿದ್ದೇವೆ. ಸಮಾಜವಾದಿ ಸಂಘಟನೆಯನ್ನು ನಿರ್ಮಿಸುವ ಸಮ ಸಮಾಜವನ್ನು ನಿರ್ಮಿಸುವ ಸಾಮರ್ಥ, ಸಮಾನತೆಯನ್ನು ಕಾಣುವಂತಹ ಸಂಘಟನೆಗಳು ಮರೆಯಾಗುತ್ತಿವೆ. ಈ ಹಿಂದೆ ಕಾರ್ಮಿಕರ ಉಳಿವಿಗಾಗಿ ಜೀವವನ್ನೇ ಬಲಿದಾನ ಮಾಡಿದ ಮಹನೀಯರ ತತ್ವ ಆದರ್ಶಗಳು ಮರೆಯಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ದುಡಿಯುವ ವರ್ಗಗಳು ತೀರಾ ಕಷ್ಟಕರ ಪರಿಸ್ಥಿತಿಯಲ್ಲಿ ಇವೆ. ಇಂದು ನಮ್ಮನ್ನು ಆಳುವ ಸರ್ಕಾರಗಳು ಪ್ರತಿಯೊಂದು ಕ್ಷೇತ್ರಗಳನ್ನು  ಹಂತಹಂತವಾಗಿ ಖಾಸಗಿಕಾರಣ ಮಾಡುವ ಕಡೆಗೆ ಸಾಗುತ್ತಿವೆ. ಕಾರ್ಮಿಕರ ಹೋರಾಟ ಜೀವಂತವಾಗಿ ಇರಿಸಬೇಕಾದರೆ ಮಹನೀಯರ ತತ್ವ ಆದರ್ಶಗಳ ಅಡಿಯಲ್ಲಿ ಸಂಘಟನೆಗಳನ್ನು ಕಟ್ಟುವ ಅಗತ್ಯ ಹೆಚ್ಚಾಗಿದೆ ಎಂದು ಕರೆ ನೀಡಿದರು.
ಇಂದಿನ ರಾಜಕೀಯ ವ್ಯವಸ್ಥೆ ನಮ್ಮ ಪ್ರತಿಯೊಂದು ಸಂಘಟನೆಗಳನ್ನು ನಿಶಕ್ತಗೊಳಿಸುವ ಮೂಲಕ ಐಕ್ಯತೆಗಳನ್ನು ಹೊಡೆದು ಹಾಕುತ್ತಿವೆ. ಕಾರಣ ಅಲ್ಲಿನ ಪರಿಸ್ಥಿತಿಗಳನ್ನು ಅರಿತುಕೊಂಡು ಕಾರ್ಮಿಕರ ಸಂಘಟನೆಗಳನ್ನು ಬಲ ಪಡಿಸಿಕೊಳ್ಳಲು ಹೋರಾಟಕ್ಕೆ ಮುಂದಾಗಬೇಕಾಗಿದೆ. ಸಂಘಟನೆಗಳನ್ನು ನಾಶಗೊಳಿಸುವ ಇಂದಿನ ನಮ್ಮ ವಿದ್ಯಮಾನಗಳಲ್ಲಿ ಸಂಘಟನೆಗಳು ಸೂಕ್ಷ್ಮತೆಯಿಂದ ಎಚ್ಚರಿಕೆಯಿಂದ ಹೆಜ್ಜೆ ಇಡುವ ಮೂಲಕ ಯುವ ಪೀಳಿಗೆಯಲ್ಲಿ ಸಮಾಜವಾದದ ಚಿಂತನೆಯನ್ನು ತುಂಬಬೇಕಾಗಿದೆ ಎಂದು ಕರೆ ನೀಡಿದರು.
ಇಂದು ನಾವುಗಳು ನಮ್ಮ ಅಭಿವ್ಯಕ್ತಿ ಸ್ವಾತಂತ್ರವನ್ನೇ ಹೇಳುವ ಶಕ್ತಿಯನ್ನು ಕಳೆದುಕೊಂಡಿದ್ದೇವೆ. ಯಾವುದಾದರೂ ಒಂದು ವ್ಯವಸ್ಥೆಯ ವಿರುದ್ಧ ನಾವು ಮಾತನಾಡಿದರೆ ಮೊಕದಮ್ಮೆ ಮಾಡಿ, ಹೋರಾಟಗಾರರನ್ನು ಭಯಭೀತರನ್ನಾಗಿ ಮಾಡುವಂತಹ ಪರಿಸ್ಥಿತಿ ಎದುರಾಗಿದೆ. ಇಂತಹ ಕಷ್ಟಕರ ಪರಿಸ್ಥಿತಿಯಲ್ಲಿ ನಾವು ಸಂಘಟನೆಗಳನ್ನು  ಜೀವಂತಿಕೆಯಿಂದ ಇಡಲು ಹೋರಾಟ ಮಾಡಬೇಕಾಗಿದೆ. ಕಾರಣ ಯುವಕರನ್ನು ಎಚ್ಚೆತ್ತುಕೊಳ್ಳುವ ಮೂಲಕ ಸಮಸಮಜ ನಿರ್ಮಾಣಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.
ಎಐಯುಟಿಯುಸಿ ಜಿಲ್ಲಾಧ್ಯಕ್ಷ ಮಂಜುನಾಥ ಕೈದಾಳೆ ಮಾತನಾಡಿ, ಕಾರ್ಮಿಕರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಹೋರಾಟ ನಡೆಸುವಂತಹ ಸಂಘಟನೆಗಳು ಇಂದು ಬೇಕಾಗಿವೆ. ಎಚ್ಷೆತ್ತು ಹೋರಾಟ ಮಾಡುವ ಮೂಲಕ ಕಾರ್ಮಿಕರ ಸಮಸ್ಯೆಗಳ ಬಗೆಹರಿಸಲು ಒಂದಾಗಬೇಕಾಗಿದೆ ಎಂದರು.
ವೇದಿಕೆಯಲ್ಲಿ ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕುಕ್ಕವಾಡ, ಸಿಬಿಎಸ್‌ಎಫ್ ಮಾಜಿ ಅಧ್ಯಕ್ಷ ಎಂ.ಆರ್.ಹೀರೇಮಠ್ ಇದ್ದರು. ಅಣಬೇರು ತಿಪ್ಪೇಸ್ವಾಮಿ, ಕೆ.ಭಾರತಿ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!