ಹೆದ್ದಾರಿ ಕಾಮಗಾರಿ ಶೀಘ್ರವೇ ಮುಕ್ತಾಯ ಎನ್ನುತ್ತಿದ್ದ ಸಂಸದರ ಶೀಘ್ರ ಇದೇ ಫೆಬ್ರವರಿಯೇ.? – ಕೆ.ಎಲ್.ಹರೀಶ್ ಬಸಾಪುರ
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆಮೆ ಗತಿಯಲ್ಲಿ ಸಾಗುತ್ತಿದ್ದು, ಮಾನ್ಯ ಸಂಸದರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಿದಾಗೆಲ್ಲ ಶೀಘ್ರವೇ ಕಾಮಗಾರಿ ಮುಕ್ತಾಯ ಎನ್ನುವ ಹೇಳಿಕೆಯೊಂದಿಗೆ ಸಭೆ ಮುಗಿಸುತ್ತಿದ್ದರು.
ಆ ಶೀಘ್ರ ಯಾವಾಗ ಬರುತ್ತದೆಯೋ ಎಂದು ಕಾಯುತ್ತಿದ್ದ, ಜಿಲ್ಲೆಯ ಜನರಿಗೆ ಮಾನ್ಯ ಸಂಸದರು ನಿನ್ನೆಯ ಹೆದ್ದಾರಿ ಪ್ರಾದಿಕಾರದ ಅಧಿಕಾರಿಗಳ ಸಭೆಯ ನಂತರ ಫೆಬ್ರವರಿ ಒಳಗೆ ಹೆದ್ದಾರಿ ಕಾಮಗಾರಿ ಮುಕ್ತಾಯ ಎಂದು ತಿಳಿಸಿದ್ದು, ಆ ಫೆಬ್ರವರಿಗಾದರೂ ಜಿಲ್ಲೆಯ ಜನರಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನೆಮ್ಮದಿಯಿಂದ ಓಡಾಡುವಂತಹ ದಿನಗಳು ಬರಲಿ ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಕೆ.ಎಲ್ ಹರೀಶ್ ಬಸಾಪುರ ತಿಳಿಸಿದ್ದಾರೆ.
ಸಂಸದರ ಅಧಿಕಾರವಧಿಯ ಕೊನೆಯ ಫೆಬ್ರವರಿ ಈಗ ಬರುವ ಫೆಬ್ರವರಿ ಆಗಿದ್ದು, ಕಳೆದ ಐದು ವರ್ಷದ ಹಿಂದಿನ ಚುನಾವಣೆಯಲ್ಲಿ ಹೆದ್ದಾರಿ ಕಾಮಗಾರಿ ಯೋಜನೆಯನ್ನು ಜಿಲ್ಲೆಗೆ ತಂದಿದ್ದು ತಾವೇ ಎನ್ನುವ ರೀತಿಯಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಸಂಸದರು, ತಮ್ಮ ಅವಧಿ ಮುಗಿಯುವಷ್ಟರಲ್ಲಾದರೂ ಕಾಮಗಾರಿ ಮುಗಿಸಲಿ ಹಾಗೂ ತಮ್ಮ ಅವಧಿಯಲ್ಲಿ ಜಿಲ್ಲೆಯಲ್ಲಿ ನಡೆದಿರುವ ಅವಜ್ಞಾನಿಕ ಕಾಮಗಾರಿಯ ದಾರಿಯನ್ನ ಈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಿಡಿಯದಿರಲಿ ಎಂಬುದೇ ಜಿಲ್ಲೆಯ ಜನರ ಬಯಕೆಯಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.