ಪರಿಸರ ಉಳಿಸಿ, ಬೆಳೆಸಿದರೆ ಮಾತ್ರ ಮಾನವ ಸಂಕುಲದ ಉಳಿವು ಸಾಧ್ಯ

ದಾವಣಗೆರೆ: ಮಾನವನ ಜನ ಸಂಖ್ಯಾಸ್ಫೋಟ ಮತ್ತು ಜಾಗತಿಕ ತಾಪಮಾನ ಹೊರ ಹೊಮ್ಮುತ್ತಿರುವ ಇಂದಿನ ದಿನಮಾನಗಳಲ್ಲಿ ಪರಿಸರ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ದಾವಣಗೆರೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ವರಿ ಎನ್.ಹೆಗ್ಡೆ ತಿಳಿಸಿದರು.

ನಗರದ ಬಾಬು ಜಗಜೀವನರಾಂ ನಗರದ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ೫೦೦ ಸಸಿಗಳ ನೆಡುವ ಅಭಿಯಾನಕ್ಕೆ ಚಾಲನೆ ನೀಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಜನರು ಏಕ ಬಳಕೆ ಮತ್ತು ಬಿಸಾಡಬಹುದಾದ ವಸ್ತುಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಇದರಿಂದಾಗಿ ಪರಿಸರ ಮಲಿನಗೊಳ್ಳುತ್ತಿದೆ. ಪ್ಲಾಸ್ಟಿಕ್ ಬಳಕೆಯಿಂದಾಗಿ ಪರಿಸರಕ್ಕೆ ತೀವ್ರ ಹಾನಿ ಉಂಟು ಆಗುತ್ತಿದೆ. ಅಲ್ಲದೆ ನಮ್ಮ ನೈಸರ್ಗಿಕತೆಯ ಮೇಲೆ ವನ್ಯಜೀವಿಗಳು ಮತ್ತು ಸಸ್ಯ ಸಂಕುಲಗಳ ಮೇಲೆ ತೀವ್ರವಾದ ದುಷ್ಪರಿಣಾಮ ಬೀರುತ್ತಿದೆ ಈ ಬಗ್ಗೆ ಮಾನವರು ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ನೀಡಿದರು. ಪರಿಸರ ಸಂರಕ್ಷಣೆ ಬಗ್ಗೆ ನಾಗರಿಕರು ಅರಿತುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಮಳೆನೀರು ಸಂರಕ್ಷಣೆ ಸಸಿಗಳ ರಕ್ಷಣೆ ಮಾಡಬೇಕಾಗಿದೆ. ನೀವೆಲ್ಲರೂ ವಿಶ್ವ ಪರಿಸರದ ಮಹತ್ವದ ಬಗ್ಗೆ ಜವಾಬ್ದಾರಿಗಳ ಬಗ್ಗೆ ತಿಳಿದುಕೊಳ್ಳಬೇಕಾಗಿದೆ ಪರಿಸರವನ್ನು ಬೆಳೆಸಿದರೆ ಮಾತ್ರ ಮಾನವ ಸಂಕುಲ ಉಳಿಯುತ್ತದೆ ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ದಾವಣಗೆರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್ ಮಾತನಾಡಿ, ನಗರದ ಹಿಂದುಳಿದ ಪ್ರದೇಶಗಳಲ್ಲಿರುವ ಉದ್ಯಾನವನಗಳಲ್ಲಿ ಇಂದಿನ ಯುವಕರು ದುಶ್ಚಟಗಳಿಗೆ ಬಿಳುತ್ತಿದ್ದಾರೆ. ಇದರಿಂದಾಗಿ ಉತ್ತಮವಾಗಿ ಇದ್ದ ಪರಿಸರದ ವಾಗಿರುವ ಉದ್ಯಾನವನಗಳು ಸಹ ದುಶ್ಚಟಗಳ ತಾಣಗಳಾಗಿವೆ. ಇದು ವಿಷಾದನೀಯ ಎಂದರು. ಸಾರ್ವಜನಿಕ ಆಸ್ತಿ ನಮ್ಮದು ಎನ್ನುವ ಭಾವನೆ ನಾಗರಿಕರಲ್ಲಿ ಮೂಡಬೇಕಾಗಿದೆ. ಅಲ್ಲದೆ ಅವುಗಳನ್ನು ಸಂರಕ್ಷಣೆ ಮಾಡುವ ಅಗತ್ಯವಿದೆ. ಪರಿಸರ ರಕ್ಷಣೆ ಕೇವಲ ಇಲಾಖೆಯ ಕೆಲಸ ಅಲ್ಲ. ಪ್ರತಿಯೊಬ್ಬರ ಕೆಲಸವೂ ಆಗಿದೆ ಮತ್ತು ಜವಾಬ್ದಾರಿ ಕೂಡ ಕಾರಣ ಶಾಲಾ ಕಾಲೇಜುಗಳು ಉದ್ಯಾನವನಗಳ ಆವರಣಗಳಲ್ಲಿ ಸಸಿ ನೆಡುವ ಮೂಲಕ ಅವುಗಳನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಹಿರಿಯ ನ್ಯಾಯವಾದಿ ಎಲ್.ಎಚ್.ಅರುಣ್ ಕುಮಾರ್ ಮಾತನಾಡಿ, ಜಾಗತಿಕ ತಾಪಮಾನ ಹೆಚ್ಚಾಗಿದ್ದು, ಕಾಡುಗಳಿಂದ ಹಿಡಿದು ಕೃಷಿಭೂಮಿಯವರೆಗೆ ಪರ್ವತಗಳಿಂದ ಹಿಡಿದು ಸಮುದ್ರದ ಆಳದವರೆಗೆ ಶತಕೋಟಿಗೂ ಹೆಚ್ಚು ಭೂಮಿ ಪ್ರದೇಶಗಳನ್ನು ಇನ್ನೂ ಮುಂಬರುವ ಹತ್ತು ವರ್ಷಗಳಲ್ಲಿ ಪುನರುಜ್ಜೀವನಗೊಳಿಸಬೇಕು ಎಂದು ವಿಶ್ವಸಂಸ್ಥೆ ತಿಳಿಸಿದೆ. ಬಹಳ ಸಮಯಗಳಿಂದ ಪರಿಸರದ ಮೇಲೆ ಪರಿಸರದ ವ್ಯವಸ್ಥೆಯ ಮೇಲೆ ಮಾನವ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಪ್ರತಿ 3 ಸೆಕೆಂಡ್‌ಗೆ ಫುಟ್ಬಾಲ್ ಆಡುವಷ್ಟು ಮೈದಾನದಷ್ಟು ಜಾಗವು ನಾಶವಾಗುತ್ತಿರುವುದು ದುರಂತದ ಸಂಗತಿ ಎಂದು ಹೇಳಿದರು.

ಕಳೆದ ಶತಮಾನದಲ್ಲಿ ನಾವುಗಳು ಭೂಮಿಯ ಅರ್ಧದಷ್ಟು ಗದ್ದೆಗಳನ್ನು ನಾಶಪಡಿಸಿ ಕೊಂಡಿದ್ದೇವೆ. ಪರಿಸರ ವ್ಯವಸ್ಥೆಯ ಪುನರ್ ಜೀವನ ಎಂಬ ಧ್ಯೇಯ ವಾಕ್ಯದೊಂದಿಗೆ ವಿಶ್ವ ಸಂಸ್ಥೆಯು ಪರಿಸರ ದಿನಾಚರಣೆಯನ್ನು ಆಚರಿಸುತ್ತಿದೆ ಕಾರಣ ಈ ನಿಟ್ಟಿನಲ್ಲಿ ನಾವುಗಳು ಪರಿಸರ ರಕ್ಷಣೆ ಮಾಡುವ ಮೂಲಕ ಪ್ರಕೃತಿಯ ಮೇಲಿನ ಜೀವ ಸಂಕುಲ ಸಸ್ಯ ಸಂಕುಲವನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಎಐಡಿ ಸಂಸ್ಥೆಯ ಕಾರ್ಯದರ್ಶಿ ಡಿ.ಎಸ್.ಬಾಬಣ್ಣ ವಹಿಸಿದ್ದರು. ಸಮಾರಂಭದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಪಿ.ಬಸವರಾಜ್ ಮಾತನಾಡಿದರು. ಪಾಲಿಕೆಯ ಸದಸ್ಯರಾದ ಸುಧಾ ಇಟ್ಟಿಗುಡಿ ಮಂಜುನಾಥ್, ನ್ಯಾಯಾಧೀಶರಾದ ಸಿದ್ಧರಾಜು, ಪ್ರಶಾಂತ್, ಉತ್ತರ ವಲಯದ ಬಿಇಒ ಅಂಬಣ್ಣ, ವಕೀಲರಾದ ಎನ್.ಎಂ.ಆಂಜನೇಯ ಇತರರು ಇದ್ದರು. ಇದೇ ವೇಳೆ ಆ ಭಾಗದ ನಾಗರಿಕರು ಮತ್ತು ಯುವಕರಿಗೆ ಸಸಿಗಳನ್ನು ವಿತರಿಸಲಾಯಿತು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಆಕ್ಷನ್ ಇನ್ಷಿಯೇಟಿವ್ ಫಾರ್ ಡೆವಲಪ್‌ಮೆಂಟ್, ಜಿಲ್ಲಾ ವಕೀಲರ ಸಂಘ, ಅರಣ್ಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

garudavoice21@gmail.com 9740365719

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!