Tiger Attack : ಹುಲಿ ಮನೆಯೊಳಗೆ ನುಗ್ಗಿ ದಾಳಿ ಮಾಡಿದೆ, ಎಂಬ ಸುದ್ದಿಯಲ್ಲಿ ಹೀಗೊಂದು ಗೊಂದಲ !

ಹುಲಿ ಮನೆಯೊಳಗೆ ನುಗ್ಗಿ ದಾಳಿ ಮಾಡಿದೆ, ಎಂಬ ಸುದ್ದಿಯಲ್ಲಿ ಹೀಗೊಂದು ಗೊಂದಲ !

ಶಿವಮೊಗ್ಗ (ಸಾಗರ):  ತಾಲ್ಲೂಕಿನ ಎಸ್.ಎಸ್. ಬೋಗ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹುಲಿಯೊಂದು ದಾಳಿ ನಡೆಸಿದ ಬಗ್ಗೆ ವರದಿಯಾಗಿತ್ತು. ಈಗ ಈ ದಾಳಿ ಮಾಡಿರುವುದು ಹುಲಿಯೋ ಅಥವಾ ಚಿರತೆಯೋ ಎಂಬುದು ಇದೀಗ ಭಾರೀ ಗೊಂದಲದ ವಿಷಯವಾಗಿ ಮಾರ್ಪಟ್ಟಿದೆ. ಮರಾಠಿ ಗ್ರಾಮದ ಕಂಚಿಕೇರಿ ನಿವಾಸಿ ಗಣೇಶ್ ಎಂಬವರ ಮೇಲೆ ವನ್ಯಮೃಗವೊಂದು ದಾಳಿ ನಡೆಸಿತ್ತು. ಮನೆಯಲ್ಲಿ ಮಲಗಿದ್ದವರ ಮೇಲೆ ದಾಳಿ ನಡೆಸಿದ್ದ ಕಾಡು ಪ್ರಾಣಿ ಆನಂತರ  ಅಲ್ಲಿಂದ ಕಾಡಿನೊಳಗೆ ಓಡಿ ಹೋಗಿತ್ತು.

ಜೂನ್ 28 ರಂದು ನಡೆದ ಈ ಘಟನೆಯಲ್ಲಿ ದಾಳಿ ಮಾಡಿದ್ದು ಹುಲಿ ಎಂಬುದಾಗಿ ಸ್ಥಳೀಯರು ಹೇಳುತ್ತಾರೆ. ಅಲ್ಲದೆ ಅದು ಅವರ ಬಲವಾದ ನಂಬಿಕೆಯೂ ಆಗಿದೆ.  ಈ ಪ್ರದೇಶದಲ್ಲಿ ಏಕೈಕ ಹುಲಿ ಕಾಣಿಸಿಕೊಂಡಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಅಲ್ಲಿ ಇಲ್ಲಿ ನೋಡಿರುವ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ. ಆದರೆ ಈ ಭಾಗದಲ್ಲಿ ಹುಲಿಯಿಲ್ಲ ಎಂಬುದು ಅರಣ್ಯ ಇಲಾಖೆಯ ವಾದ. ಸ್ಥಳೀಯ ಕಾಡುಗಳಲ್ಲಿ ಇದುವರೆಗೆ ಯಾವುದೇ ಹುಲಿ ಕಂಡಿಲ್ಲ. ಹೀಗಾಗಿ ದಾಳಿ ಮಾಡಿದ್ದು ಚಿರತೆ ಇರಬಹುದು ಎಂಬುದು ಅರಣ್ಯ ಇಲಾಖೆಯ ಅಭಿಪ್ರಾಯವಾಗಿದೆ. ಇನ್ನು ಈ ಸಂಬಂಧ ಕೆಲವು ತಜ್ಞರ ಪ್ರಕಾರ ಈ ಭಾಗದಲ್ಲಿ ಹುಲಿ ಕಾಣಿಸಿಕೊಂಡಿರುವುದು ಅನುಮಾನಾಸ್ಪದವಾಗಿದೆ. ಕಾಳಿ ಹುಲಿ ಸಂರಕ್ಷಿತಾ ಅಭಯಾರಣ್ಯದಿಂದ ಹುಲಿ ಬಂದಿದ್ದರೂ ಬಂದಿರಬಹುದು ಎಂದು ಊಹೆ ಮಾಡುತ್ತಾರೆ.

ಇನ್ನು, ಗಾಯಗೊಂಡಿರುವ ಗಣೇಶ್​ರವರು ಮತ್ತು ಅವರ ಕುಟುಂಬಸ್ಥರಿಂದ ಈ ಬಗ್ಗೆ ಯಾವುದೇ ಸಮಗ್ರ ಮಾಹಿತಿ ಲಭ್ಯವಾಗಿಲ್ಲ. ಅರಣ್ಯ ಅಧಿಕಾರಿಗಳು ದಾಳಿ ಮಾಡಿದ್ದು ಚಿರತೆ ಎನ್ನುತ್ತಿದ್ದಾರೆ. ಇಲಾಖೆಯ ಮಾತು ನಂಬಲು ಸ್ಥಳೀಯರಿಗೆ ನಂಬಿಕೆ ಸಾಲುತ್ತಿಲ್ಲ. ಹೀಗಾಗಿ ಅಂದು ದಾಳಿ ನಡೆಸಿದ ವನ್ಯಮೃಗ ಯಾವುದು? ಎಂಬುದು ಗೊಂದಲಕಾರಿಯಾಗಿಯೇ ಮುಂದುವರಿದಿದೆ.

 

 

Leave a Reply

Your email address will not be published. Required fields are marked *

error: Content is protected !!