ಸೆಕ್ಟರ್ ಅಧಿಕಾರಿಗಳಿಗೆ ತರಬೇತಿ : ಚುನಾವಣೆ ಯಶಸ್ವಿಯಾಗಲು ಅಣಕು ಮತದಾನದಲ್ಲಿ ಸಿಆರ್‍ಸಿ ಅತ್ಯವಶ್ಯ; ಜಿಲ್ಲಾ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ

ದಾವಣಗೆರೆ: ಲೋಕಸಭಾ ಚುನಾವಣೆ ಮತದಾನವು ಮೇ 7 ರಂದು ನಡೆಯಲಿದೆ. ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬಳಕೆ ಮಾಡಲಾಗುತ್ತಿದ್ದು ಮತದಾನ ಆರಂಭಕ್ಕೂ ಮೊದಲು ನಡೆಯುವ ಅಣಕು ಮತದಾನದ ವೇಳೆ ಸಿಆರ್‍ಸಿ ಬಹಳ ಮಹತ್ವಪೂರ್ಣವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಸೆಕ್ಟರ್ ಅಧಿಕಾರಿಗಳು ಹಾಗೂ ಮಾಸ್ಟರ್ ಟ್ರೈನರ್‍ಗಳಿಗೆ ಏರ್ಪಡಿಸಲಾದ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು.

ಏಪ್ರಿಲ್ 8 ರಂದು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಮತದಾನ ಕರ್ತವ್ಯದಲ್ಲಿ ಭಾಗವಹಿಸುವ ಎಲ್ಲಾ ಅಧಿಕಾರಿಗಳು ಹಾಗೂ ಮತದಾನ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಗಾರ ಏರ್ಪಡಿಸಲಾಗಿದೆ. ಈ ತರಬೇತಿಯಲ್ಲಿ ಸೆಕ್ಟರ್ ಅಧಿಕಾರಿಗಳು ಹಾಗೂ ಮಾಸ್ಟರ್ ಟ್ರೈನರ್‍ಗಳು ಭಾಗವಹಿಸಿ ಮತದಾನ ಸಿಬ್ಬಂದಿಗಳಿಗೆ ತರಬೇತಿ ನೀಡುವರು.

ಮತದಾನ ಯಶಸ್ಸು ಸಿಆರ್‍ಸಿ ಮೇಲಿದೆ; ಮತದಾನಕ್ಕೆ ವಿದ್ಯುನ್ಮಾನ ಮತಯಂತ್ರ ಬಳಕೆ ಮಾಡುತ್ತಿರುವುದರಿಂದ ಮೇ.7 ರಂದು ಮತದಾನಕ್ಕೂ ಮುಂಚಿತವಾಗಿ ಮತಗಟ್ಟೆಯಲ್ಲಿ ಏಜೆಂಟರ ಸಮ್ಮುಖ ಅಣಕು ಮತದಾನ ನಡೆಯುತ್ತದೆ. ನಂತರ ಬ್ಯಾಲೆಟ್ ಕ್ಲಿಯರ್ ಮಾಡಿ ರಿಸೆಲ್ಟ್ ಕ್ಲೋಸ್ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಒಂದು ವೇಳೆ ಮತಗಟ್ಟೆ ಅಧಿಕಾರಿ ಇದನ್ನು ಕ್ಲಿಯರ್ ಮಾಡದಿದ್ದಲ್ಲಿ ಎಣಿಕೆಯ ವೇಳೆ ಸಮಸ್ಯೆಯಾಗುತ್ತದೆ. ಮತದಾನಕ್ಕೂ ಮೊದಲು ಸಮಚಿತ್ತರಾಗಿ, ಯಾವುದೇ ಗೊಂದಲ, ವಿವಾದಗಳಿಗೆ ಆಸ್ಪದ ನೀಡದೆ ಸರಾಗವಾಗಿ ಮತದಾನ ಆರಂಭವಾಗಿ ಮುಕ್ತಾಯವಾಗಬೇಕು. ಈ ನಿಟ್ಟಿನಲ್ಲಿ ಏ.8 ರಂದು ಏರ್ಪಡಿಸಲಾದ ಮತದಾನ ಸಿಬ್ಬಂದಿಯ ತರಬೇತಿಯಲ್ಲಿ ಸರಿಯಾಗಿ ತಿಳಿಸಿಕೊಡಲು ಸೂಚಿಸಿದರು.

ಮತದಾನ ಕಾರ್ಯ ಸುಗಮವಾಗಿ ನಡೆಯಲು ಸೆಕ್ಟರ್ ಅಧಿಕಾರಿಗಳ ಜವಾಬ್ದಾರಿ ಹೆಚ್ಚಿರುತ್ತದೆ. ಈ ನಿಟ್ಟಿನಲ್ಲಿ ಯಾವುದೇ ಸೆಕ್ಟರ್ ಅಧಿಕಾರಿಗಳು ಕರ್ತವ್ಯ ನಿರ್ಲಕ್ಷ್ಯತೆ ತೋರದೆ ಶ್ರದ್ದೆಯಿಂದ ಕೆಲಸ ಮಾಡಬೇಕೆಂದರು.

ಜಿಲ್ಲೆಯಲ್ಲಿ ಒಟ್ಟು 164 ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಿದ್ದು ಜಗಳೂರು 31, ಹರಿಹರ 22, ದಾವಣಗೆರೆ ಉತ್ತರ 21, ದಕ್ಷಿಣ 18, ಮಾಯಕೊಂಡ 25, ಚನ್ನಗಿರಿ 23, ಹೊನ್ನಾಳಿ 24 ಸೆಕ್ಟರ್ ಅಧಿಕಾರಿಗಳು ಕೆಲಸ ನಿರ್ವಹಿಸುತ್ತಿದ್ದಾರೆ.
ಅಪರ ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ ಹಾಗೂ ಎಲ್ಲಾ ಸಹಾಯ ಚುನಾವಣಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!