ಕಲುಷಿತ ನೀರಿನಿಂದ ಸಾವಿನ ಸಂಖ್ಯೆ ,ಐದಕ್ಕೆ ಏರಿಕೆ
ಚಿತ್ರದುರ್ಗ : ಜಿಲ್ಲೆಯ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ತೀವ್ರವಾಗಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದ ರುದ್ರಪ್ಪ(50) ಹಾಗೂ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದ ಪಾರ್ವತಮ್ಮ (75) ಶುಕ್ರವಾರ ಮೃತಪಟ್ಟಿದ್ದಾರೆ. ಕಲುಷಿತ ನೀರಿನಂದ ಸಾವಿಗೆ ತುತ್ತಾಗಿರುವವರ ಸಂಖ್ಯೆ 5 ಕ್ಕೆ ಏರಿದೆ. ವಾಂತಿ ಭೇದಿಯಿಂದ ಬಳಲಿದ್ದ ರುದ್ರಪ್ಪರವರನ್ನು 2 ರಂದು ಬಸವೇಶ್ವರ ವೈದ್ಯಕೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.
ನಿರ್ಜಲೀಕರಣ ಹಾಗೂ ರಕ್ತದೊತ್ತಡ ಕಡಿಮೆಯಾಗಿದ್ದರಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ಮುಂದುವರೆಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ. ಪಾರ್ಶ್ವವಾಯು ಪೀಡಿತರಾಗಿದ್ದ ಪಾರ್ವತಮ್ಮ ಗುರುವಾರ ಅಸ್ವಸ್ಥರಾಗಿದ್ದರು. ಕವಾಡಿಗರಹಟ್ಟಿಯ ತಾತ್ಕಾಲಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು ಶುಕ್ರವಾರ ಬೆಳಿಗ್ಗೆ ಇವರು ಮೃತಪಟ್ಟಿದ್ದು, ಸಾವಿಗೆ ಪಾರ್ಶ್ವವಾಯು ಕಾರಣವೆಂದು ಆರೋಗ್ಯ ಇಲಾಖೆ ಹೇಳುತ್ತಿದೆ. ರಘು ಹಾಗೂ ಪ್ರವೀಣ ಎಂಬುವರ ಸಾವಿಗೆ ಕಲುಷಿತ ನೀರು ಕಾರಣ ಎಂಬುದು ಇನ್ನೂ ದೃಢಪಟ್ಟಿಲ್ಲ.
ಅಸ್ವಸ್ಥೆಗೆ ಗರ್ಭಪಾತ : ಕಲುಷಿತ ನೀರಿನ ಸೇವನೆಯಿಂದಾಗಿ ತುಂಬು ಗರ್ಭಿಣಿಯೊಬ್ಬರಿಗೆ ಗರ್ಭಪಾತವಾಗಿದೆ. ಆ ಮಹಿಳೆಗೆ ವಾಂತಿ- ಭೇದಿ ಹೆಚ್ಚಾಗಿದ್ದರಿಂದ 8 ತಿಂಗಳ ಶಿಶು ಹೊಟ್ಟೆಯಲ್ಲಿಯೇ ಮೃತಪಟ್ಟಿದೆ ಎಂದು ತಿಳಿಸಲಾಗಿದೆ.