ಮಹಿಳಾ ಪತ್ರಕರ್ತರಿಗೆ ಸಮಾಜ ಸೇವಾ ಪ್ರಶಸ್ತಿ ನೀಡಿ ಗೌರವ
ದಾವಣಗೆರೆ: ಜಿಲ್ಲಾ ಯೋಗ ಒಕ್ಕೂಟ ಮತ್ತು ಶ್ರೀ ಸತ್ಯ ಸಾಯಿಬಾಬ ಟ್ರಸ್ಟ್ ವತಿಯಿಂದ ಇಲ್ಲಿನ ಜಿಲ್ಲಾ ವರದಿಗಾರರ ಕೂಟದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಪತ್ರಕರ್ತರಿಗೆ ‘ಸಮಾಜ ಸೇವಾ ಸಿರಿ-2024’ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.
ಕನ್ನಡ ಭಾರತಿ ಪತ್ರಿಕೆಯ ದೇವಿಕಾ, ಸಂಜೆ ವಾಣಿ ಪತ್ರಿಕೆಯ ತೇಜಸ್ವಿನಿ, ಸಂಯುಕ್ತ ಕರ್ನಾಟಕ ಪತ್ರಿಕೆಯ ಕಾವ್ಯ ಬಿ.ಕೆ ಹಾಗೂ ಜಿಲ್ಲಾ ಸಮಾಚಾರ ಪತ್ರಿಕೆಯ ಭಾರತಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಇದೇ ವೇಳೆ ಮಾತನಾಡಿದ ಯೋಗ ಒಕ್ಕೂಟದ ಜಿಲ್ಲಾಧ್ಯಕ್ಷ ವಾಸುದೇವ್ ರಾಯ್ಕರ್, ಮಹಿಳೆ ಎಂದರೆ ಅದೊಂದು ಶಕ್ತಿ. ಸಹನೆಯ ಪ್ರತಿರೂಪವಿದ್ದಂತೆ. ಕುಟುಂಬವನ್ನು ನಿರ್ವಹಿಸಿ, ಪತ್ರಿಕೋದ್ಯಮ ಸೇವೆಯನ್ನು ಮಾಡುತ್ತಿರುವ ಮಹಿಳೆಯರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ ಮಾತನಾಡಿ, ಮಹಿಳಾ ದಿನಾಚರಣೆ ಅಂಗವಾಗಿ ವರದಿಗಾರರ ಕೂಟದಲ್ಲಿ ಇದೇ ಮೊದಲ ಬಾರಿಗೆ ಇಲ್ಲಿನ ಮಹಿಳಾ ಪತ್ರಕರ್ತರಿಗೆ ಸನ್ಮಾನಿಸುತ್ತಿರುವುದು ನಿಜಕ್ಕೂ ಸಂತಸ ಉಂಟುಮಾಡಿದೆ. ಕುಟುಂಬದ ಜತೆಗೆ ಕಾರ್ಯವನ್ನೂ ನಿರ್ವಹಿಸುತ್ತಿರುವ ಮಹಿಳೆಯರು ನಿಜಕ್ಕೂ ಅಭಿನಂದನಾರ್ಹರು ಎಂದರು.
ಈ ಸಂದರ್ಭದಲ್ಲಿ ಪವಿತ್ರ ರಾಯ್ಕರ್, ಜ್ಯೋತಿ, ಮಾಧವಿ, ರಶ್ಮಿ ರಾಜು, ಮೀನಾಕ್ಷಿ ಹಿರೇಮಠ್, ಡಾ.ಯು.ಸಿದ್ದೇಶ್, ಡಾ.ಎನ್.ಪರಶುರಾಮ, ಮಧುಸೂದನ್, ಪರಶುರಾಮ, ರಾಜು ಬದ್ದಿ, ತೀರ್ಥರಾಜ್ ಹೋಲೂರು, ಜಯಣ್ಣ ಬಾದಾಮಿ, ಅನಿಲ ರಾಯ್ಕರ್, ವಿರೂಪಾಕ್ಷ ಜವಳಿ ಮತ್ತಿತರರು ಉಪಸ್ಥಿತರಿದ್ದರು.