ಯುವತಿ ಮೇಲೆ ಸ್ನೇಹಿತರ ಅತ್ಯಾಚಾರ

ಬೆಂಗಳೂರು: ಯುವತಿಯೊಬ್ಬಳ ಮೇಲೆ ತನ್ನ ಸ್ನೇಹಿತರೇ ಅತ್ಯಾಚಾರ ನಡೆಸಿರುವ ಘಟನೆ ಇಲ್ಲಿನ ಗಿರಿನಗರದಲ್ಲಿ ನಡೆದಿದೆ.
ತುಮಕೂರಿನ ಕೊರಟಗೆರೆ ಮೂಲದ ಯುವಕನಿಗೆ ಹಾಗೂ ಅದೇ ಊರಿನ ಯುವತಿ ಮಧ್ಯೆ ಪ್ರೇಮಾಂಕುರವಾಗಿದೆ. ಕಳೆದ ವಾರ ಯುವತಿಯನ್ನು ಭೇಟಿಯಾಗಿದ್ದ ಯುವಕ ಆಕೆಯಿಂದ ಮೊಬೈಲ್ ತೆಗೆದುಕೊಂಡಿದ್ದನು.
ಮೊಬೈಲ್ ಕೊಡುವಂತೆ ಎರಡು ದಿನಗಳ ಹಿಂದೆ ಯುವತಿ ಕರೆ ಮಾಡಿದ್ದಳು. ಆಗ ಮೆಜೆಸ್ಟಿಕ್ ಗೆ ಬಾ ಮೊಬೈಲ್ ಕೊಡುತ್ತೇನೆ ಎಂದು ಯುವಕ ಹೇಳಿದ್ದಾನೆ. ಇದನ್ನು ನಂಬಿ ಯುವತಿ ಬೆಂಗಳೂರಿಗೆ ಬಂದಿದ್ದಾಳೆ.ಬೆಂಗಳೂರಿಗೆ ಬಂದ ಯುವತಿ ತನ್ನ ಮೊಬೈಲ್ ಕೊಡುವಂತೆ ಯುವಕನನ್ನು ಕೇಳಿದ್ದಾಳೆ. ಈ ವೇಳೆ ಮೊಬೈಲ್ ಕೊಡುವುದಾಗಿ ಹೇಳಿ ಗಿರಿನಗರದ ಈರಣ್ಣಗುಡ್ಡೆಯ ಸ್ನೇಹಿತನ ರೂಮ್ ಗೆ ಕರೆದುಕೊಂಡು ಹೋಗಿದ್ದಾನೆ.
ರೂಂನಲ್ಲಿ ಆಕೆಯ ಜೊತೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ನಂತರ ರೂಮಿಗೆ ಬಂದ ಯುವಕನ ಸ್ನೇಹಿತ ಸಹ ಯುವತಿ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ್ದಾನೆ. ಆಗ ಯುವತಿ ಜೋರಾಗಿ ಕಿರುಚಿಕೊಂಡಿದ್ದರಿಂದ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಯುವತಿಯನ್ನು ರಕ್ಷಿಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.